ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಕೊಯಮತ್ತೂರಿನಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಲು ಅಗತ್ಯ ಅನುಮತಿಗಳನ್ನು ಪಡೆದಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಅಕ್ರಮಗಳು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಬುಡಕಟ್ಟು ಸಂಘಟನೆಯೊಂದು ಆರು ವರ್ಷಗಳ ಹಿಂದೆ ಇಶಾ ಫೌಂಡೇಶನ್ ಕ್ಯಾಂಪಸ್ ನಿರ್ಮಾಣದ ವಿರುದ್ಧ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್ ಇದೀಗ ತನಿಖೆಗೆ ಆದೇಶ ನೀಡಿದೆ.
ಕೊಯಮತ್ತೂರಿನ ಇಕ್ಕರೈ ಬೊಳುವಂಪಟ್ಟಿಯಲ್ಲಿ ಇಶಾ ಫೌಂಡೇಶನ್‌ನ 150 ಎಕರೆ ಕ್ಯಾಂಪಸ್ ನಿರ್ಮಾಣ ಮಾಡಿತ್ತು. ಅಲ್ಲದೆ, 112 ಅಡಿ ಆದಿಯೋಗಿ ಪ್ರತಿಮೆಯನ್ನೂ ನಿರ್ಮಿಸಿತ್ತು. ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.
ಆದರೆ, ಈ ನಿರ್ಮಾಣ ಕೆಲಸಗಳಿಗೆ ಪೂರ್ವಾನುಮತಿ ಪಡೆದಿಲ್ಲ. ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ಉಪ ನಿರ್ದೇಶಕ ಆರ್ ಸೆಲ್ವರಾಜ್ ಅವರು ತಮ್ಮ ಇಲಾಖೆಯ ಅನುಮೋದನೆಯಿಲ್ಲದೆ ಕ್ಯಾಂಪಸ್ ನಿರ್ಮಿಸಲಾಗಿದೆ ಎಂದು ಖಚಿತಪಡಿಸಿದ್ದರು.
ಇಶಾ ಫೌಂಡೇಶನ್ ಬಳಿ ಇಲ್ಲ ಯಾವುದೇ ಎನ್‌ಒಸಿ ದಾಖಲೆ
ಪಟ್ಟಣ ಮತ್ತು ಗ್ರಾಮಾಂತರ ಯೋಜನೆಯ ಜಂಟಿ ನಿರ್ದೇಶಕ ತಿರು ಆರ್ ರಾಜಗುರು ಅವರು ಸಲ್ಲಿಸಿದ ವರದಿಯನ್ನು ಆಗಸ್ಟ್ 18ರಂದು ಮದ್ರಾಸ್ ಹೈಕೋರ್ಟ್ ಗಮನಿಸಿದೆ. ಇಶಾ ಫೌಂಡೇಶನ್ ಕ್ಯಾಂಪಸ್ ನಿರ್ಮಾಣಕ್ಕೆ ಅನುಮತಿ ಕೋರಿಲ್ಲ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರವನ್ನೂ ಪಡೆದಿಲ್ಲ ಎಂದು ವರದಿ ತಿಳಿಸಿದೆ. ನಂತರ ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವುಲು ಅವರ ಪೀಠ ತನಿಖೆಗೆ ಆದೇಶಿಸಿದೆ.
ವರದಿಯಲ್ಲಿ 15.53 ಎಕರೆ ನಂಜೈ ಭೂಮಿ (ಜೌಗು ಪ್ರದೇಶ) ಮತ್ತು 5.275 ಹೆಕ್ಟೇರ್ ಪುಂಜೈ (ಒಣ ಭೂಮಿ) ಸೇರಿದಂತೆ 20.805 ಹೆಕ್ಟೇರ್ ಭೂಮಿ ಇಶಾ ಫೌಡೇಷನ್ ವಶದಲ್ಲಿದೆ ಎಂದು ಉಲ್ಲೇಖಿಸಲಾಗಿದೆ. “ಇಲ್ಲಿ ಧಾರ್ಮಿಕ ಕಟ್ಟಡಕ್ಕೆ ನಿರ್ಮಾಣ ಕೆಲಸಗಳನ್ನು ಮಾಡಲು ಜಿಲ್ಲಾಧಿಕಾರಿಯಿಂದ ಎನ್‌ಒಸಿ ಪಡೆದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಎನ್‌ಒಸಿ, ಗುಡ್ಡಗಾಡು ಪ್ರದೇಶ ಸಂರಕ್ಷಣಾ ಪ್ರಾಧಿಕಾರ ಎನ್‌ಒಸಿ, ಅಗ್ನಿಶಾಮಕ ಇಲಾಖೆ ಎನ್‌ಒಸಿ ನೀಡಿಲ್ಲ. ಅಲ್ಲದೆ, ಇಕ್ಕರೈ ಬೊಳುವಂಪಟ್ಟಿ ಪಂಚಾಯಿತಿಯಲ್ಲಿಯೂ ದಾಖಲೆ ಪರಿಶೀಲಿಸಿದಾಗ, ಪಂಚಾಯಿತಿ ಅಧ್ಯಕ್ಷರಿಂದಲೂ ಯಾವುದೇ ಅನುಮತಿ ಪಡೆಯಲಾಗಿಲ್ಲ ಎಂಬುದು ತಿಳಿದುಬಂದಿದೆ” ಎಂದು ವರದಿ ವಿವರಿಸಿದೆ.
ವೆಲ್ಲಿಯಂಗಿರಿ ಹಿಲ್ಸ್ ಟ್ರೈಬಲ್ ಪ್ರೊಟೆಕ್ಷನ್ ಸೊಸೈಟಿಯ ಪರವಾಗಿ ವಾದ ಮಂಡಿಸಿದ ವಕೀಲ ಎಂ ಪುರಶೋತ್ತಮನ್, “2010ರ ಗಜ ವರದಿ (ಆನೆ ಕಾರ್ಯ ಸಮಿತಿ ವರದಿ) ಪ್ರಕಾರ ಇಕ್ಕರೈ ಬೊಳುವಂಪಟ್ಟಿಯು ಆನೆಗಳ ಆವಾಸಸ್ಥಾನವಾಗಿತ್ತು. ಅಲ್ಲಿ ಗಿರಿ ಜನರು ವಾಸಿಸುತ್ತಿದ್ದರು. ಅದು ನೊಯ್ಯಲ್ ನದಿಯ ಜಲಾನಯನ ಪ್ರದೇಶವೂ ಹೌದು. ಈ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇಶಾ ಫೌಡೇಂಶನ್ ಭೂಮಿಯ ಸ್ವರೂಪವನ್ನೇ ಪರಿವರ್ತಿಸಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಕೆಲಸಗಳನ್ನು ಮಾಡಿದೆ. ಇದು ಕಾನೂನುಬಾಹಿರವಾಗಿದೆ” ಎಂದು ಹೇಳಿದ್ದಾರೆ.
ವರದಿ ಮತ್ತು ವಾದವನ್ನು ಆಲಿಸಿದ ನ್ಯಾಯಾಲಯ, “ಪಟ್ಟಣ ಮತ್ತು ಗ್ರಾಮ ಯೋಜನೆಯ ಜಿಲ್ಲಾ ಜಂಟಿ ನಿರ್ದೇಶಕರು, ಅರ್ಜಿದಾರರು ಇಶಾ ಫೌಂಡೇಶನ್ ಸಲ್ಲಿಸಬಹುದಾದ ದಾಖಲೆಗಳು, ಅನುಮತಿ ದಾಖಲೆಗಳನ್ನು ಪರಿಶೀಲಿಸಬೇಕು. ಅವುಗಳು ಕ್ರಮ ಬದ್ದವಾಗಿಲ್ಲದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕು” ಎಂದು ನಿರ್ದೇಶಿಸಿದೆ.
ಇಶಾ ಫೌಂಡೇಶನ್‌ನ ಕ್ಯಾಂಪಸ್ ವಿರುದ್ಧ ವೆಲ್ಲಿಯಂಗಿರಿ ಹಿಲ್ ಟ್ರೈಬಲ್ ಪ್ರೊಟೆಕ್ಷನ್ ಸೊಸೈಟಿಯ ಪಿ ಮುತ್ತಮ್ಮಾಳ್ ಅವರು 2017ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. “ಅರ್ಜಿ ಸಲ್ಲಿಸಿದ್ದಕ್ಕಾಗಿ ನಮಗೆ ಕೆಲವರು ಕಿರುಕುಳ ನೀಡಿದ್ದಾರೆ” ಎಂದು ಮುತ್ತಮ್ಮಾಳ್ ಹೇಳಿಕೊಂಡಿದ್ದಾರೆ. ಅಲ್ಲದೆ, ಅರ್ಜಿ ಸಲ್ಲಿಸಿದ ಬಳಿಕ ಅವರು ಇಕ್ಕರೈ ಬೊಳುವಂಪಟ್ಟಿಯ ಮುತ್ತತ್ತು ಅಯಾಲ್‌ನಲ್ಲಿದ್ದ ತಮ್ಮ ನಿವಾಸವನ್ನು ತೊರೆದು ಬೇರೆಡೆ ಬದುಕುತ್ತಿದ್ದಾರೆ.
“ಕ್ರಮ ಕೈಗೊಳ್ಳುವುದು ಸರ್ಕಾರದ ಕೆಲಸ. ಸರ್ಕಾರವು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಅರಣ್ಯ, ವನ್ಯಜೀವಿ ಮತ್ತು ಬುಡಕಟ್ಟು ಜನರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು” ಎಂದು ಮುತ್ತಮ್ಮಾಳ್ ಆಗ್ರಹಸಿದ್ದಾರೆ ಎಂದು ನ್ಯೂಸ್‌ಲ್ಯಾಂಡ್ರಿ ವರದಿ ಮಾಡಿದೆ.
ಈ ಕೆಲಸ ಪ್ರಾರಂಭದಲ್ಲಿಯೇ ಆಗಬೇಕು. ರಾಜಕಾರಣಿಗಳು ಎಲ್ಲೆಲ್ಲಿ ಬೆಂಬಲಕ್ಕೆ ನಿಲ್ಲುತ್ತಾರೋ ಅಲ್ಲೆಲ್ಲಾ ಅಕ್ರಮದ ಸಂಶಯಗಳು ನಿರಂತರ.
“ಉಳ್ಳವರು ಶಿವಾಲಯ ಮಾಡುವವರು .’