ವಾಹನಗಳ ಸುರಕ್ಷಾ ನೋಂದಣಿ ಫಲಕ: ರಾಜ್ಯದಲ್ಲಿ ಜಾರಿಗೆ ಮುನ್ನವೇ 500 ಕೋಟಿ ಅಕ್ರಮದ ವಾಸನೆ!

Date:

Advertisements
  • ಎಚ್‌ಎಸ್‌ಆರ್‍‌ಪಿ(HSRP) ಯೋಜನೆ ಕಬಳಿಕೆಗೆ ಕೆಲವರ ಸಂಚು; ಸರ್ಕಾರಕ್ಕೆ ಸವಾಲು
  • ಅಧಿಕಾರಿಗಳ ಚೆಲ್ಲಾಟ; 20 ಸಾವಿರಕ್ಕೂ ಹೆಚ್ಚು ಕುಟುಂಬ ಬೀದಿಗೆ ಬೀಳುವ ಆತಂಕ

ವಾಹನಗಳಿಗೆ ಅಳವಡಿಸುವ ಅತೀ ಸುರಕ್ಷಾ ನೋಂದಣಿ ಫಲಕ (HSRP) ಯೋಜನೆಯು, ರಾಜ್ಯದಲ್ಲಿ ಜಾರಿಗೆ ಮುನ್ನವೇ 500 ಕೋಟಿ ಅಕ್ರಮದ ಸಂಚು ನಡೆದಿರುವ ಆರೋಪ ಕೇಳಿಬಂದಿದೆ.

ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆ ಹಳಿತಪ್ಪಿದೆ. ಒಂದಿಲ್ಲೊಂದು ಹಗರಣಗಳ ಆರೋಪಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ಗುರಿಯಾಗಿತ್ತು. ಆದರೆ, ಇದೀಗ ಮತ್ತೊಂದು ಬಹುಕೋಟಿ ಅಕ್ರಮದ ಹಗರಣ ಸದ್ದು ಮಾಡುವ ಹಾದಿಯಲ್ಲಿದೆ.

ಅತೀ ಸುರಕ್ಷಾ ನೋಂದಣಿ ಫಲಕ (HIGH SECURITY REGISTRATION PLATES) ಯೋಜನೆಯು ಜಾರಿಗೆ ಮುನ್ನವೇ ಅವ್ಯವಹಾರಕ್ಕೆ ನಾಂದಿ ಹಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಕೆಯಾಗಿದ್ದು, ಕಮಿಷನ್ ಆರೋಪದ ವಿರುದ್ಧ ಸಮರ ಸಾರಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲೆಂಬಂತಿದೆ.

Advertisements

ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ನೀಡಿರುವ ಈ ದೂರು, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಏನಿದು ಅಕ್ರಮ?
ವಾಹನ ಕಳ್ಳತನ ತಡೆಯುವುದು, ಕದ್ದ ವಾಹನಗಳನ್ನು ಬಳಸಿ ಕೃತ್ಯಗಳನ್ನು ನಡೆಸುವುದನ್ನು ತಡೆಯಲು ಹಾಗೂ ಕಾನೂನು ಉಲ್ಲಂಘನೆಯಂತಹ ಪ್ರಕರಣಗಳನ್ನು ಭೇದಿಸಲು ಅನುಕೂಲವಾಗುವಂತೆ ಆಧುನಿಕ ವ್ಯವಸ್ಥೆಯಾಗಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ವಾಹನಗಳ ನಂಬರ್ ಪ್ಲೇಟ್’ನಲ್ಲಿಯೇ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಈ ಪ್ರಕ್ರಿಯೆ ಕರ್ನಾಟಕದಲ್ಲೂ ಜಾರಿಗೆ ಬರಲು ಸಿದ್ಧತೆ ನಡೆಯುತ್ತಿದೆ. ಆದರೆ ಇದರ ಜಾರಿಗೆ ತಯಾರಿಯ ಸಂದರ್ಭದಲ್ಲೇ ಅಕ್ರಮದ ವಾಸನೆ ಬಡಿದಿದೆ.

ಎಚ್‌ಎಸ್‌ಆರ್‍‌ಪಿ(HIGH SECURITY REGISTRATION PLATES) ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಂಬಂಧ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ನಿಯಮಗಳನ್ನು ಸಿದ್ದಪಡಿಸಿದೆ. ಆದರೆ, ಇದು ಕೇಂದ್ರ ಸರ್ಕಾರದ ಈಗಾಗಲೇ ನೀಡಿರುವ ಸೂಚನೆಗಳಿಗೆ ವಿರುದ್ಧವಾಗಿದೆ ಎಂಬ ಆರೋಪವು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ಸಾರಿಗೆ ಇಲಾಖೆ ಸಿದ್ಧಪಡಿಸಿರುವ ನಿಯಮಗಳಿಂದಾಗಿ ಇಡೀ ಯೋಜನೆಯೇ ಬುಡಮೇಲಾಗಲಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ ಎಂಬ ಆತಂಕವೂ ಎದುರಾಗಿದೆ.

ಈ ಯೋಜನೆ ಜಾರಿಗೆ ಪೂರಕವಾಗಿ ದೇಶದಲ್ಲಿ ಹಲವಾರು ಕಂಪನಿಗಳು ಈ ವಿಶಿಷ್ಟ ತಂತ್ರಜ್ಞಾನದ ನಂಬರ್ ಪ್ಲೇಟ್’ಗಳನ್ನು ತಯಾರಿಸುತ್ತಿವೆ. ಈ ಪೈಕಿ ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಆದರೆ ಕರ್ನಾಟಕದಲ್ಲಿ ಕೇವಲ ನಾಲ್ಕು ಸಂಸ್ಥೆಗಳಿಗೆ ಈ ಫಲಕ ಪೂರೈಕೆಗೆ ಅನುಮತಿ ನೀಡಲು ರಹಸ್ಯ ಸಿದ್ಧತೆ ನಡೆದಿದೆ ಎಂಬ ಸುದ್ದಿಯೇ ಅಕ್ರಮದ ಕೇಂದ್ರಬಿಂದು.

lokesh Ram Bangalore University
ಅಕ್ರಮದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ

ಈ ಬಗ್ಗೆ ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್, ಎಲ್ಲ ವಾಹನಗಳಲ್ಲಿಎಚ್‌ಎಸ್‌ಆರ್‍‌ಪಿ ಸಾಧನ ಅಳವಡಿಕೆ ಕಡ್ಡಾಯವಾಗಿದೆ. ಅದನ್ನು ಪೂರೈಸಲು ವಾಹನ ತಯಾರಿಕಾ ಸಂಸ್ಥೆ ಅಥವಾ ಡೀಲರ್‍‌ಗಳಿಗೆ ಅವಕಾಶ ಕಲ್ಪಿಸಲು ಸಾರಿಗೆ ಇಲಾಖೆಯಿಂದ ವೇದಿಕೆ ಸಿದ್ಧವಾಗಿದೆ ಎಂದು ನಮಗೆ ತಿಳಿದುಬಂದಿದೆ. ವಾಸ್ತವ ಏನೆಂದರೆ, ವಾಹನ ತಯಾರಕರು ಎಚ್‌ಎಸ್‌ಆರ್‍‌ಪಿ ತಯಾರಿಸುವುದಿಲ್ಲ. ಬದಲಾಗಿ, ಇತರ ತಯಾರಕರಿಂದ ಪಡೆದು ವಾಹನಗಳಿಗೆ ಅಳವಡಿಸಿ ಪೂರೈಸಬೇಕಿದೆ. ಅದರಲ್ಲೂ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ 20 ಎಚ್‌ಎಸ್‌ಆರ್‍‌ಪಿ ತಯಾರಿಕಾ ಸಂಸ್ಥೆಗಳ ಪೈಕಿ ಒಬ್ಬರ ನಿಯಂತ್ರಣದಲ್ಲೇ ಇರುವ ಕೇವಲ 4-5 ಕಂಪನಿಗಳ ಉತ್ಪನ್ನಗಳಿಗಷ್ಟೇ ಸಾರಿಗೆ ಇಲಾಖೆ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ. ಈ ವಿಚಾರದಲ್ಲಿ ಪಾರದರ್ಶಕ ನಡೆ ಅನುಸರಿಸದೆ ಲಂಚದ ಆಸೆಗೆ ಬಿದ್ದು, ಅಧಿಕಾರಿಗಳು ಹಾಗೂ ಪ್ರಭಾವಿಗಳ ಸಂಚಿನಿಂದಾಗಿ ಇಡೀ ಯೋಜನೆಯೇ ಹಾದಿ ತಪ್ಪುವ ಸಾಧ್ಯತೆಗಳಿವೆ. ಈ ಬಗ್ಗೆ ನಾವು ಈಗಾಗಲೇ ದೂರು ನೀಡಿ, ಸರ್ಕಾರದ ಗಮನಕ್ಕೆ ತಂದಿದ್ದೇವೆ” ಎಂದು ತಿಳಿಸಿದ್ದಾರೆ.

ಹೊಸ ವಾಹನಗಳಲ್ಲಿ ಎಚ್‌ಎಸ್‌ಆರ್‍‌ಪಿ ಗೊಂದಲ ಇಲ್ಲ. ಆದರೆ ಹಳೆಯ ವಾಹನಗಳಿಗಷ್ಟೇ ಎಚ್‌ಎಸ್‌ಆರ್‍‌ಪಿ ಸವಾಲು. ದೇಶದಲ್ಲಿ ಪ್ರಸಕ್ತ ಇರುವ ಸುಮಾರು 30 ಕೋಟಿ ಹಳೆಯ ವಾಹನಗಳ ಪೈಕಿ ಕರ್ನಾಟಕದಲ್ಲೇ 2 ಕೋಟಿಗಳಷ್ಟು ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಇಷ್ಟೂ ವಾಹನಗಳಿಗೆ ಎಚ್‌ಎಸ್‌ಆರ್‍‌ಪಿ ಅಳವಡಿಸಬೇಕಿದ್ದು, ಇದರ ಬೆಲೆ ₹400ರಿಂದ ₹950ವರೆಗೆ ಇದೆ. ಪ್ರತೀ ಎಚ್‌ಎಸ್‌ಆರ್‍‌ಪಿಯಲ್ಲಿ ಶೇ. 50ರಷ್ಟು ಲಾಭವಿದ್ದು, ಸುಮಾರು ₹500 ಕೋಟಿ ಲಾಭವನ್ನು ದೋಚಲು ಕೆಲವು ಕಂಪನಿಗಳು ಅಡ್ಡದಾರಿ ಹಿಡಿದಿವೆ. ಲಂಚದ ಆಸೆಗೆ ಬಿದ್ದು ಕೆಲವು ಅಧಿಕಾರಿಗಳು ಹಾಗೂ ಪ್ರಭಾವಿಗಳು ಕೂಡ ಭಾರೀ ಅಕ್ರಮಕ್ಕೆ ಮುಂದಾಗಿದ್ದಾರೆ ಎಂಬುದು ಲೋಕೇಶ್ ರಾಮ್ ಅವರ ಆರೋಪ.

CM COMPLAINT
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಕ್ಕೂಟ ಸಲ್ಲಿಸಿರುವ ದೂರಿನ ಪ್ರತಿ

ಈ ನಡುವೆ, ಎಚ್‌ಎಸ್‌ಆರ್‍‌ಪಿಯನ್ನು ವಾಹನ ತಯಾರಿಕಾ ಸಂಸ್ಥೆಗಳು ಅಥವಾ ನಿರ್ದಿಷ್ಟ ಡೀಲರುಗಳೇ ವಿತರಿಸಬೇಕೆಂಬ ನಿಯಮ ಜಾರಿಗೆ ಬಂದರೆ ಅದು ಕೂಡಾ ಕಾನೂನು ಬಾಹಿರ. ಇದರಿಂದಾಗಿ ಸಾರ್ವಜನಿಕರು ತೊಂದರೆಗೊಳಗಾಗುತ್ತಾರೆ. ಹಾಗೂ ಕೆಲ ಮಧ್ಯವರ್ತಿ ನಿಯಂತ್ರಣಾ ಮಾಫಿಯಾ ಹುಟ್ಟಿಕೊಂಡು ಮಾರುಕಟ್ಟೆಯಲ್ಲಿ ಏಕಸ್ವಾಮ್ಯದ ಅಧಿಪತ್ಯ ಸ್ಥಾಪಿಸುತ್ತದೆ ಎಂಬ ಆತಂಕವಿದೆ ಎನ್ನುತ್ತಾರೆ ಲೋಕೇಶ್ ರಾಮ್.

ರಾಜ್ಯದಲ್ಲಿ ಪ್ರಸ್ತುತ ಸುಮಾರು 20 ಸಾವಿರ ಮಂದಿ ಜೀವನೋಪಾಯಕ್ಕಾಗಿ ವಾಹನಗಳ ನಂಬರ್ ಪ್ಲೇಟ್ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇದೀಗ ವಾಹನ ತಯಾರಕರು ಹಾಗೂ ಡೀಲರುಗಳೇ ಎಚ್‌ಎಸ್‌ಆರ್‍‌ಪಿ ನಂಬರ್ ಪ್ಲೇಟ್ ವಿತರಿಸಬೇಕೆಂಬ ನಿಯಮ ಜಾರಿಯಾದಲ್ಲಿ ಈ 20 ಸಾವಿರ ಕುಟುಂಬಗಳೂ ಬೀದಿಗೆ ಬೀಳಬಹುದು ಎಂಬುದು ದೂರುದಾರರ ಆತಂಕ.

ಅಷ್ಟೇ ಅಲ್ಲ, ವಾಹನ ತಯಾರಕರು-ವಿತರಕರಷ್ಟೇ ಎಚ್‌ಎಸ್‌ಆರ್‍‌ಪಿ ಪೂರೈಸುವ ನಿಯಮ ಜಾರಿಯಾಗಿದ್ದೇ ಆದಲ್ಲಿ ಅಂತಹ ವಾಹನ ಮಾಲೀಕರು ಬದಲಿ ಎಚ್‌ಎಸ್‌ಆರ್‍‌ಪಿಗಾಗಿ ತಾವು ಹಿಂದೆ ಖರೀದಿಸಿದ ಸ್ಥಳಕ್ಕೆ ಹೋಗಬೇಕಾಗುತ್ತದೆ. ಇದರಿಂದಾಗಿ ₹500 ರೂಪಾಯಿಯ ಎಚ್‌ಎಸ್‌ಆರ್‍‌ಪಿ ನಂಬರ್ ಪ್ಲೇಟನ್ನು ಖರೀದಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕೆ ಎಂಬ ಪ್ರಶ್ನೆ ಮೂಡಿದೆ. ಒಂದೊಮ್ಮೆ ವಿತರಕರು ತಮ್ಮ ಸಂಸ್ಥೆಯನ್ನು ಮುಚ್ಚಿದ್ದರೆ ವಾಹನ ಮಾಲೀಕರಿಗೆ ಪರ್ಯಾಯ ಮಾರ್ಗ ಇಲ್ಲದಂತಾಗುತ್ತದೆ ಎಂಬುದು ಅವರ ಅಭಿಪ್ರಾಯ.

WhatsApp Image 2023 06 28 at 8.57.15 AM

2001ರಲ್ಲೇ ಈ ಸುರಕ್ಷಾ ಕ್ರಮ ಜಾರಿ ಬಗ್ಗೆ ಚಿಂತನೆ ನಡೆದಿತ್ತು. ಕಳೆದೊಂದು ದಶಕದಲ್ಲಿ ಈ ಯೋಜನೆ ಜಾರಿಯ ಪ್ರಕ್ರಿಯೆ ನಡೆಯಿತಾದರೂ, ಅಕ್ರಮದ ಆರೋಪ ಹಿನ್ನಲೆಯಲ್ಲಿ ಕಾನೂನು ಹೋರಾಟ ಹಾಗೂ ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ಅಕ್ರಮಗಳಿಗೆ ಬ್ರೇಕ್ ಬಿದ್ದಿತ್ತು.

ಈ ನಡುವೆ ವರ್ಷದ ಹಿಂದಷ್ಟೇ, ತಪ್ಪುಗಳನ್ನು ಸರಿಪಡಿಸುವುದಾಗಿ ಸರ್ಕಾರವು ಹೈಕೋರ್ಟಿಗೆ ತಿಳಿಸಿದೆ. ಆದರೆ, ಪ್ರಭಾವಿಗಳ ಗುಂಪು ನಿಗೂಢವಾಗಿ ತಂತ್ರಗಾರಿಕೆ ಮೂಲಕ ಯೋಜನೆಯನ್ನು ಕಬಳಿಸಲು ಪ್ರಯತ್ನವನ್ನು ಮುಂದುವರಿಸಿದೆ ಎಂದು ಅವರು ಈ ದೂರಿನ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಡವರಿಗೆ ನೀಡಿದರೆ ‘ಬಿಟ್ಟಿ’, ಕೋಟ್ಯಾಧೀಶರಿಗೆ ನೀಡಿದರೆ ‘ಪ್ರೋತ್ಸಾಹಕ’…!

ಸ್ಪೀಡ್ ಗವರ್ನರ್, ಸುರಕ್ಷಾ ಗ್ಲಾಸ್, ಇಂಧನ ಟ್ಯಾಂಕ್, ಟೈರ್ ರೀತಿಯಲ್ಲೇ ಎಚ್‌ಎಸ್‌ಆರ್‍‌ಪಿ ಕೂಡಾ ವಾಹನಗಳ ಸುರಕ್ಷಾ ಸಾಧನ. ಹೀಗಿರುವಾಗ ಇದನ್ನು ಪೂರೈಸುವ ಅವಕಾಶ ಕೆಲವೇ ಕಂಪನಿಗಳಿಗಷ್ಟೇ ಸೀಮಿತಗೊಳಿಸುವ ಕ್ರಮ ಸರಿಯಾದುದಲ್ಲ. ಎಲ್ಲ ಅನುಮೋದಿತ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ನೀಡುವ ಅವಕಾಶ ಸಿಗಬೇಕಿದೆ. ಒಂದು ವೇಳೆ ಸರ್ಕಾರ ಅಥವಾ ಅಧಿಕಾರಿಗಳು ಒಳ ಒಪ್ಪಂದ ಮಾಡಿ ನಿರ್ದಿಷ್ಟ ಕಂಪನಿಗಳಿಗಷ್ಟೇ ಎಚ್‌ಎಸ್‌ಆರ್‍‌ಪಿ ಪೂರೈಸುವ ಅವಕಾಶ ನೀಡಿದಲ್ಲಿ, ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಸಾಧನವನ್ನು ಖರೀದಿಸುವ ಗ್ರಾಹಕನ ಆಯ್ಕೆ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸಿದಂತಾಗುತ್ತದೆ ಎಂದಿರುವ ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ, ಈ ಸಂಬಂಧ ಭ್ರಷ್ಟಾಚಾರ ಮುಕ್ತವಾಗಿ ಯೋಜನೆ ಜಾರಿಯಾಗಬೇಕು. ಎಲ್ಲ ಅನುಮೋದಿತ ಕಂಪನಿಗಳ ಎಚ್‌ಎಸ್‌ಆರ್‍‌ಪಿ ವಿತರಣೆಗೆ ರಾಜ್ಯದಲ್ಲಿ ಅವಕಾಶ ಸಿಗಬೇಕು, ಜನಸ್ನೇಹಿ ವ್ಯವಸ್ಥೆಯಲ್ಲಿ ಸ್ವಉದ್ಯೋಗಾಕಾಂಕ್ಷಿಗಳಿಗೂ ಅವಕಾಶ ಸಿಗುವಂತೆ ಯೋಜನೆಯನ್ನು ಜಾರಿಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಮಧ್ಯಪ್ರವೇಶಿಸಬೇಕು. ಆ ಮೂಲಕ ‘ಏಕಸ್ವಾಮ್ಯ’ವನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X