ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ಉಡುಪಿಯ ಹಿಜಾಬ್ ವಿವಾದದ ಸಂದರ್ಭದಲ್ಲಿ ಉಚ್ಚಾಟನೆಗೊಳಗಾಗಿದ್ದ ಎಂಟು ವಿದ್ಯಾರ್ಥಿಗಳಲ್ಲಿ ಓರ್ವಳಾದ ಆಲಿಯಾ ಅಸ್ಸಾದಿ, “ಹಿಜಾಬ್‌ಗಾಗಿ ಅಂದು ನಮ್ಮನ್ನು ಹೊರದಬ್ಬಿದ್ರಿ: ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬಿದೆ” ಎಂದು ಟಾಂಗ್ ನೀಡಿದ್ದಾರೆ.
ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು.
ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು.(1/n)
— Aliya Assadi (@Aliyassadi) May 28, 2024
ತನ್ನ ‘ಎಕ್ಸ್’ ಪೋಸ್ಟ್‌ನಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯು, “ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನ ಇತ್ತು. ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿದಿರಿ. ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ. ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬಿದೆ” ಎಂದು ಹೇಳಿದ್ದಾರೆ.
“ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿನಿ. ನೀವು ಉಚ್ಚಾಟಿತ ವ್ಯಕ್ತಿ, ಅಭ್ಯರ್ಥಿ” ಎಂದು ಆಲಿಯಾ ಅಸ್ಸಾದಿ ಹೇಳಿಕೆ ನೀಡಿದ್ದಾರೆ.
ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದದಲ್ಲಿ ಸಂದರ್ಭದಲ್ಲಿ ಅಂದಿನ ಬಿಜೆಪಿ ಶಾಸಕರಾಗಿದ್ದ ರಘುಪತಿ ಭಟ್ ಮುಂಚೂಣಿಯಲ್ಲಿದ್ದರು. ಅಲ್ಲದೇ, ವಿಧಾನಸಭೆಯ ಕಲಾಪದ ಸಂದರ್ಭದಲ್ಲಿಯೂ ವಿವಾದದ ಬಗ್ಗೆ ಮಾತನಾಡಿದ್ದರು. ಈ ವಿವಾದದಿಂದಾಗಿ ಮುಂಚೂಣಿಗೆ ಬಂದಿದ್ದ ಸಂಘಪರಿವಾರದ ಮುಖಂಡ ಯಶ್ಪಾಲ್ ಸುವರ್ಣರಿಗೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಟಿಕೆಟ್ ನೀಡಿತ್ತು. ಟಿಕೆಟ್ ವಂಚಿತರಾಗಿದ್ದ ರಘುಪತಿ ಭಟ್ ಮಾಧ್ಯಮಗಳ ಎದುರೇ ಕಣ್ಣೀರು ಹಾಕಿದ್ದರು.
ಆ ಬಳಿಕ ರಘುಪತಿ ಭಟ್ ಅವರು ಈ ಬಾರಿಯ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಈ ಕ್ಷೇತ್ರದಿಂದ ಶಿವಮೊಗ್ಗದ ಡಾ. ಧನಂಜಯ ಸರ್ಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅಲ್ಲದೆ, ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿತ್ತು. ಇದು ರಘುಪತಿ ಭಟ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದ ಬೆನ್ನಲ್ಲೇ ಇದೀಗ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
