ಉತ್ತರ ಪ್ರದೇಶದ ಆಲಿಗಢದ ಸ್ಥಳೀಯ ಮಸೀದಿಯಲ್ಲಿ ಹಿಂದೂ ವ್ಯಾಪಾರಿಯೊಬ್ಬರು ಸ್ವಯಂಪ್ರೇರಿತವಾಗಿ ಪ್ರಾರ್ಥನೆಯಲ್ಲಿ (ನಮಾಜ್) ಭಾಗಿಯಾಗಿದ್ದು, ಬಲಪಂಥೀಯರು ವಿವಾದ ಸೃಷ್ಟಿಸಿದ್ದಾರೆ. “ಹಿಂದೂ ವ್ಯಾಪಾರಿಯ ಶುದ್ಧೀಕರಣ ಮಾಡಬೇಕು” ಎಂದು ಸಂಘಪರಿವಾರ ಆಗ್ರಹಿಸಿದೆ.
ಮಾಮೂ ಭಂಜಾ ಪ್ರದೇಶದ ವ್ಯಾಪಾರಿಯಾದ ಸುನಿಲ್ ರಜನಿ ಗುರುವಾರ ಸಂಜೆ ತನ್ನ ಮುಸ್ಲಿಂ ನೆರೆಹೊರೆಯವರೊಂದಿಗೆ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಅದರ ವಿಡಿಯೋ ವೈರಲ್ ಆಗಿತ್ತು.
ಇದನ್ನು ಓದಿದ್ದೀರಾ? ದೆಹಲಿಯ ಜಾಮಾ ಮಸೀದಿಯಲ್ಲಿ ಮುಸ್ಲಿಮರಿಗೆ ಪ್ರತಿದಿನ ಇಫ್ತಾರ್ ಆಯೋಜಿಸುತ್ತಿರುವ ಹಿಂದೂ ಯುವತಿ ನೇಹಾ ಭಾರ್ತಿ
ಬಿಜೆಪಿ ಯುವ ಮೋರ್ಚಾದ ಸ್ಥಳೀಯ ನಾಯಕ ಮೋನು ಅಗರ್ವಾಲ್ ಅವರು ರಜನಿಯವರ ಕೃತ್ಯ ಅಪವಿತ್ರ ಎಂದು ಹೇಳಿದ್ದಾರೆ. ಹಾಗೆಯೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದಲ್ಲದೇ ರಜನಿ ದೇವಸ್ಥಾನದಲ್ಲಿ ಶುದ್ಧೀಕರಣಗೊಳ್ಳಬೇಕು ಎಂದು ಅಗರ್ವಾಲ್ ಆಗ್ರಹಿಸಿದ್ದಾರೆ.
ಇನ್ನು ರಜನಿ ಮಸೀದಿಯಿಂದ ಹೊರಬರುತ್ತಿದ್ದಂತೆ ಕೆಲವು ಸಂಘಪರಿವಾರದ ಕಾರ್ಯಕರ್ತರು ರಜನಿ ಮೇಲೆ ಗಂಗಾಜಲ ಸಿಂಪಡಿಸಲು ಮುಂದಾದರು. ಈ ಮೂಲಕ ಶುದ್ಧೀಕರಣ ಮಾಡುತ್ತೇವೆ ಎಂದು ಕಾರ್ಯಕರ್ತರು ಹೇಳಿರುವುದಾಗಿ ವರದಿಯಾಗಿದೆ.
ಇನ್ನು ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಈ ವಿಚಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಟ್ಟಿಗರು ರಜನಿ ನಡೆಯನ್ನು ಖಂಡಿಸಿದರೆ, ಇನ್ನು ಕೆಲವರು ಓರ್ವ ವ್ಯಕ್ತಿಯ ವೈಯಕ್ತಿಕ ಆಯ್ಕೆಯನ್ನು ಬಲಪಂಥೀಯರು ತಮ್ಮ ರಾಜಕಾರಣಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ನಾಯಕರು ಕೋಮುವಾದದ ಪರವೋ, ವಿರುದ್ಧವೋ?
“ಓರ್ವ ಮುಸ್ಲಿಂ ವ್ಯಕ್ತಿ ಕೈ ಮುಗಿದು ಪ್ರಾರ್ಥಿಸುವಂತೆ, ಹಿಂದೂ ನಮಾಜ್ ಮಾಡಿದರೆ ಏನಾಗುತ್ತದೆ? ನಮಾಜ್ ಮಾಡಿದ ಬಳಿಕ ಅಂತ ಅನಾಹುತ ಏನಾಗಿದೆ” ಎಂದು ಮನೋಜ್ ಎಂಬ ನೆಟ್ಟಿಗರು ಪ್ರಶ್ನಿಸಿದ್ದಾರೆ. ಇನ್ನು ಹಿಂದೂ ವ್ಯಕ್ತಿ ಬಂದಿದ್ದಾರೆ ಎಂದು ನಾವು ಮಸೀದಿಯ ಶುದ್ಧೀಕರಣವೇನು ಮಾಡಿಲ್ಲ. ಎಲ್ಲಾ ಧರ್ಮವೂ ಒಂದೇ ಎಂದು ಅಮೀರ್ ಖಾನ್ ಎಂಬ ನೆಟ್ಟಿಗರು ಹೇಳಿದ್ದಾರೆ.
“ನಮಾಜ್, ಪೂಜೆ ಅಥವಾ ಅರ್ಚನೆ- ಓರ್ವ ವ್ಯಕ್ತಿ ಏನು ಮಾಡಬೇಕು ಎಂಬುದು ಆತನ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಯಾರೂ ಕೂಡಾ ಒತ್ತಾಯಪೂರ್ವಕವಾಗಿ ಮಂದಿರ ಅಥವಾ ಮಸೀದಿಗೆ ಹೋಗುವುದಿಲ್ಲ” ಎಂದು ಹೇಳಿದ್ದಾರೆ.
