ಸಿಎಂ ಸಿದ್ದರಾಮಯ್ಯನವರು ‘ಉಡುಪು ಅವರವರ ಇಷ್ಟ. ಹಿಜಾಬ್ ನಿಷೇಧ ವಾಪಸ್ ತಗೋತೇವೆ’ ಎಂದು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಲಪಂಥೀಯ ಮುಖಂಡ ಹಾಗೂ ಯುವ ಬ್ರಿಗೇಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ, “ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಓಡಾಡಿದರೆ, ಹಿಂದೂ ವಿದ್ಯಾರ್ಥಿಗಳು ಕೂಡ ತಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಅಂತ ಹಠ ಹಿಡಿಯುತ್ತಾರೆ. ಇದು ಈ ಹಿಂದೆಯೂ ಆಗಿತ್ತು. ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರ ಇಂತಹ ವೈರುಧ್ಯಕ್ಕೆ ಕಾರಣವಾಗಲಿದೆ” ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುತ್ತೇವೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯನವರು ಕಿಡಿಯನ್ನು ಹಚ್ಚಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಹೇಗಾದರೂ ಮಾಡಿ ಹಿಜಾಬ್ ಅನ್ನು ತಡೆಯುವ ನಿಟ್ಟಿನಲ್ಲಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಾಗ, ಇಡೀ ರಾಜ್ಯ ಮಾತ್ರವಲ್ಲದೇ ದೇಶ ಕೂಡ ಸಂಭ್ರಮಿಸಿತ್ತು. ಈ ಜಗಳವನ್ನು ಬಿಜೆಪಿಯವರೋ ಅಥವಾ ವಿಪಕ್ಷ ನಾಯಕ ಅಶೋಕ್ ಅವರೋ ಹುಟ್ಟು ಹಾಕಬೇಕೆಂದು ಇಲ್ಲ. ಕಾಲೇಜಿನ ಮಕ್ಕಳ ನಡುವೆ ಈ ಬಗ್ಗೆ ಸಹಜವಾಗಿ ಜಗಳ ಹುಟ್ಟು ಹಾಕಲಿದೆ” ಎಂದು ತಿಳಿಸಿದ್ದಾರೆ.
ಸಿಎಂ ನೀಡಿರುವ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವ ಹೇಳಿಕೆ ಖಂಡಿಸಿದ ಚಕ್ರವರ್ತಿ ಸೂಲಿಬೆಲೆ, “ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರಾಜ್ಯವನ್ನು 25 ವರ್ಷಗಳಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಿತ್ತು. ಸಿದ್ದರಾಮಯ್ಯ ಸರ್ಕಾರ ನಾಡನ್ನು 50 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿದೆ. ಮುಸ್ಲಿಂ ಸಮುದಾಯ ಕಲ್ಯಾಣಕ್ಕೆ ರೂ. 10,000 ಕೋಟಿ ಕೊಡೋದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅಷ್ಟು ದೊಡ್ಡ ಮೊತ್ತವನ್ನು ಹೇಗೆ ಹೊಂದಿಸಲಿದ್ದಾರೆ ಅನ್ನೋದು ಜನರಿಗೆ ಅರ್ಥವಾಗುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ಅನುದಾನ ಅಥವಾ ಶಾಲಾ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ನಿಲ್ಲಿಸಿ ಅವರು ಹಣ ನೀಡುತ್ತಾರೆಯೇ” ಎಂದು ಪ್ರಶ್ನಿಸಿದರು.
“ಅತಾರ್ಕಿಕ ನಿರ್ಣಯಗಳನ್ನು ತೆಗೆದುಕೊಳ್ಳುವ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಆರು ತಿಂಗಳ ಅವಧಿಯಲ್ಲಿ ಜನರಿಂದ ತಿರಸ್ಕಾರಕ್ಕೊಳಗಾಗಿರುವ ದೇಶದ ಮೊದಲ ಸರ್ಕಾರ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು” ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.