- ‘ಅಧಿಕಾರಿಗಳಿಗೆ ಈಗ ಮತ್ತೊಮ್ಮೆ ವರ್ಗಾವಣೆಯ ದೌರ್ಭಾಗ್ಯ’
- ಅಧಿಕಾರಿಗಳು ಸರ್ಕಾರದ ಪಾಲಿಗೆ ಫುಟ್‌ಬಾಲ್ ಆಗಿದ್ದಾರೆ: ಕಿಡಿ
ಪ್ರಾಮಾಣಿಕ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಉಳಿಗಾಲವಿಲ್ಲ. ಶ್ಯಾಡೋ ಸಿಎಂರ ಹಣದ ದಾಹಕ್ಕೆ ಬಲಿಯಾಗಿ ತಿಂಗಳ ಹಿಂದೆಯಷ್ಟೇ ಸ್ಥಳಾಂತರವಾಗಿದ್ದ ಈ ಅಧಿಕಾರಿಗಳಿಗೆ ಈಗ ಮತ್ತೊಮ್ಮೆ ವರ್ಗಾವಣೆಯ ದೌರ್ಭಾಗ್ಯ ಲಭಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, “ಶಾಸಕರ ಅಸಮಾಧಾನ ಶಮನಗೊಳಿಸುವ ನೆಪದಲ್ಲಿ ಎಟಿಎಂ ಸರ್ಕಾರ ಮತ್ತೊಂದು ವರ್ಗಾವಣೆ ಮ್ಯಾರಥಾನ್‌ಗೆ “ಕೈ” ಹಾಕಿದ್ದು, ಅಧಿಕಾರಿಗಳು ಸರ್ಕಾರದ ಪಾಲಿಗೆ ಫುಟ್‌ಬಾಲ್ ಆಗಿದ್ದಾರೆ” ಎಂದು ಟೀಕಿಸಿದೆ.
“ಕರ್ನಾಟಕದ ಇತಿಹಾಸದಲ್ಲಿಯೇ ಈ ತುಘಲಕ್ ಸರ್ಕಾರ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವರ್ಗಾವಣೆ ನಡೆಸಿದೆ. ಆದರೂ ಈ ಎಟಿಎಂ ಸರ್ಕಾರದ ಹಣದ ದಾಹ ಇನ್ನೂ ನೀಗಿಲ್ಲ” ಎಂದು ಲೇವಡಿ ಮಾಡಿದೆ.
“ಅಂದು ಎಸಿಬಿ – ಇಂದು ಸಿಐಡಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದಾಗ ಹಗರಣಗಳನ್ನು ಮಾಡಲು ಹಿಂಜರಿಯುವುದಿಲ್ಲ, ಅದೇ ರೀತಿ ಹಗರಣಗಳನ್ನು ಮುಚ್ಚಿ ಹಾಕಲು ಸಹ ಹಿಂದು ಮುಂದು ನೋಡುವುದಿಲ್ಲ. ಅಧಿಕಾರವನ್ನು ಸರ್ವ ರೀತಿಯಲ್ಲಿಯೂ ದುರ್ಬಳಕೆ ಮಾಡಿಕೊಂಡು, ತಾವು ಮಾಡಿದ ಹಗರಣಗಳ ಸಾಕ್ಷಿಗಳನ್ನು ನಾಶಗೊಳಿಸುವಲ್ಲಿ ಸಿದ್ದರಾಮಯ್ಯ ಅವರು ಸದಾ ಮುಂದು” ಎಂದು ಬಿಜೆಪಿ ಟೀಕಿಸಿದೆ.
“2013ರಲ್ಲಿ ಎಸಿಬಿಯನ್ನು ಬಳಸಿ, ತಮ್ಮ ಸರ್ಕಾರದ ಹಗರಣಗಳನ್ನು ಮುಚ್ಚಿಕೊಂಡಿದ್ದ ಸಿದ್ದರಾಮಯ್ಯನವರು, ಈಗ ಸಿಐಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿಯೇ ಮಾದರಿ ಎನಿಸಿಕೊಂಡಿದ್ದ ಕರ್ನಾಟಕದ ಲೋಕಾಯುಕ್ತ ಸಂಸ್ಥೆಗೆ ಎಳ್ಳು-ನೀರು ಬಿಟ್ಟಿದ್ದೇ ಸಿದ್ದರಾಮಯ್ಯನವರ ಸರ್ಕಾರ. ಪ್ರಬಲ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ, ದುರ್ಬಲ “ಎಸಿಬಿ”ಯನ್ನು ಸ್ಥಾಪಿಸಿದ ಕುಖ್ಯಾತಿ ಸಿದ್ದರಾಮಯ್ಯರವರಿಗೆ ಸಂದಿದೆ. ಎಸಿಬಿ ಸಂಸ್ಥೆಯ ಸ್ಥಾಪನೆ ಹಿಂದಿದ್ದ ಉದ್ದೇಶ, ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳುವುದು ಆಗಿತ್ತೇ ವಿನಃ ಭ್ರಷ್ಟಾಚಾರ ತಡೆಯುವುದಾಗಿರಲಿಲ್ಲ” ಎಂದಿದೆ.
“ಅದೇ ಮಾದರಿಯಲ್ಲಿ ಈಗ ಸಿಐಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಉಡುಪಿಯಲ್ಲಿ ನಡೆದ ಘಟನೆಯನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಹೊರಟಿದ್ದಾರೆ. ಪ್ರಕರಣದ ಆರಂಭದಿಂದಲೂ ಈ ಪ್ರಕರಣ ನಡೆದೇ ಇಲ್ಲ, ಇದು ಮಕ್ಕಳಾಟ ಎಂದು ಸರ್ಕಾರ ವಾದಿಸುತ್ತಲೇ ಬಂದಿತ್ತು. ಪ್ರಕರಣವನ್ನು ಸಿಐಡಿಗೆ ವಹಿಸಿ ಎಂದು ಬಿಜೆಪಿ ನಡೆಸಿದ ಹೋರಾಟಕ್ಕೂ ಸೊಪ್ಪು ಹಾಕದೆ, ಈಗ ಏಕಾಏಕಿ ಸಿಐಡಿಗೆ ವಹಿಸಿರುವುದನ್ನು ಗಮನಿಸಿದರೆ, ಪ್ರಕರಣವನ್ನು ದುರ್ಬಲಗೊಳಿಸಿ, ಸಾಕ್ಷಿಗಳನ್ನು ನಾಶಪಡಿಸಲು ಸರ್ಕಾರ ಕಾದಂತೆ ಕಾಣುತ್ತದೆ” ಎಂದು ದೂರಿದೆ.
“ಸಿದ್ದರಾಮಯ್ಯರವರು ಸ್ಥಾಪಿಸಿದ್ದ ದುರ್ಬಲ ಎಸಿಬಿಯನ್ನು ಮುಚ್ಚಿ ಬಲಿಷ್ಠ ಲೋಕಾಯುಕ್ತವನ್ನು ಬಿಜೆಪಿ ಸರ್ಕಾರ ಮರು ಸ್ಥಾಪಿಸಲು ಹೊರಟಾಗ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರೋಧಿಸಿದ ಪರಿಯನ್ನೊಮ್ಮೆ ಗಮನಿಸಿದರೆ ಸಾಕು, ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಹೇಗೆ ಬೆಂಬಲಿಸುತ್ತದೆ ಎಂಬುದು ಅರಿವಾಗುತ್ತದೆ. ದಶಕಗಳ ಕಾಲ ಭ್ರಷ್ಟಾಚಾರವನ್ನು ಪೋಷಿಸಿ ಬೆಳೆಸಿಕೊಂಡು ಬಂದಿರುವ ಕಾಂಗ್ರೆಸ್, ಕೆಲವು ವರ್ಷಗಳಿಂದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ” ಎಂದು ಹೇಳಿದೆ.
“ತಮ್ಮ ಸೇವಾವಧಿಯಲ್ಲಿ ಯಾವ ಅಧಿಕಾರಿ ಅತಿ ಹೆಚ್ಚು ಭ್ರಷ್ಟಾಚಾರ ಎಸಗಿರುತ್ತಾರೊ, ಅಂತಹ ಅಧಿಕಾರಿಗಳನ್ನೇ ಹುಡುಕಿ ಸರ್ಕಾರದ ಆಯಕಟ್ಟಿನ ಸ್ಥಳಗಳಿಗೆ, ಸಲಹೆಗಾರನನ್ನಾಗಿ ನೇಮಿಸುತ್ತಿದೆ. ಸಚಿವರುಗಳಿಗೆ ವಿಶೇಷ ಕರ್ತವ್ಯಾಧಿಕಾರಿಗಳನ್ನಾಗಿ ಸಹ ನೇಮಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ಧೋರಣೆಯಿಂದಾಗಿ, ಇಂದು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವೀನ್ಯತೆಯಲ್ಲಿ ನಂಬರ್ 1 ಆಗಿದ್ದ ಕರ್ನಾಟಕವು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹಾಗೂ ಅರಾಜಕತೆಯಲ್ಲಿ ನಂಬರ್ 1 ಆಗುತ್ತಿರುವುದು ದುರದೃಷ್ಟಕರ” ಎಂದಿದೆ.