ಹನಿಟ್ರ್ಯಾಪ್ | ಕರ್ನಾಟಕ ರಾಜಕಾರಣ ಕಂಡ ‘ಗಲೀಜುಗಾಥೆ’ಗಳ ಸರಮಾಲೆ

Date:

Advertisements
ರಾಜ್ಯದಲ್ಲಿ 'ಮದ ಭಲೇ'ಯ ಜನಪ್ರತಿನಿಧಿಗಳು 'ಮಧುಬಲೆ'ಗೆ ಬೀಳುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹನಿಟ್ರ್ಯಾಪ್ ಸುತ್ತ ಕರ್ನಾಟಕ ರಾಜಕಾರಣದೊಳಗೆ 'ಗಲೀಜುಗಾಥೆ'ಗಳ ಸರಮಾಲೆನ್ನೇ ಕಾಣಬಹುದು. ಲೈಂಗಿಕ ಹಗರಣದಲ್ಲಂತೂ ಒಬ್ಬರಿಗಿಂತ ಒಬ್ಬರು ಮೀರಿಸುವವರು ರಾಜ್ಯದಲ್ಲಿದ್ದಾರೆ. ಕರ್ನಾಟಕದ ಕೀರ್ತಿಗೆ ಮಸಿ ಬಳೆದ ಪ್ರಕರಣಗಳ ಸರಣಿ ಇಲ್ಲಿದೆ...

ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರು ಸಂಜೆ 7 ಗಂಟೆಯ ನಂತರದ ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳುತ್ತಾರೋ ಅದರ ಆಧಾರದ ಮೇಲೆ ಅವರ ಸ್ಥಾನ-ಮಾನ ಎರಡೂ ಅಡಗಿದೆ…”

ರಾಜ್ಯದ ಮಾನ, ಮರ್ಯಾದೆಯನ್ನು ದೇಶಮಟ್ಟದಲ್ಲಿ ಹರಾಜು ಹಾಕುತ್ತಿರುವ ‘ಹನಿಟ್ರ್ಯಾಪ್‌‘ ಗದ್ದಲದ ಸುತ್ತ ಫೇಸ್‌ಬುಕ್‌ನಲ್ಲಿ ಗೆಳೆಯರೊಬ್ಬರು ಹೀಗೆ ಬರೆದುಕೊಂಡಿದ್ದರು. ಸದ್ಯದ ರಾಜ್ಯ ರಾಜಕಾರಣಕ್ಕೆ ಈ ಮೇಲಿನ ಮಾತು ಅಕ್ಷರಶಃ ಸತ್ಯವಾಗಿದೆ.

ಸಣ್ಣ ಪಂಚಾಯತ್ ಮೆಂಬರ್‌ನಿಂದ ಹಿಡಿದು, ಶಾಸಕ ಮತ್ತು ಮಂತ್ರಿಯವರೆಗೂ ಹನಿಟ್ರ್ಯಾಪ್ ವಿಷವರ್ತುಲ ಹಬ್ಬಿರುವುದು ಖೇದದ ಸಂಗತಿ.‌ ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಒಂದಾಗಬೇಕಿದ್ದ ರಾಜಕಾರಣಿಗಳು ಈಗ ಹನಿಟ್ರ್ಯಾಪ್ ವಿಷಯದಲ್ಲಿ ಒಂದಾಗಿದ್ದಾರೆ. ಹನಿಟ್ರ್ಯಾಪ್‌ ಎಂಬ ಮೋಸದ, ಕಾಮದ ಬಲೆಗೆ ಬೀಳುವ ರಾಜಕಾರಣಿಗಳು ಎಂಥವರು ಎಂದು ತಮ್ಮ ಹೆಗಲು ತಾವೇ ಮುಟ್ಟಿಕೊಂಡು ಸಾರಿದ್ದಾರೆ!

Advertisements

ಇಂದಿನ ರಾಜಕಾರಣಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆ, ಸನ್ನಡತೆ ಹುಡುಕುವುದೇ ಹಾಸ್ಯಾಸ್ಪದ ಮತ್ತು ದೊಡ್ಡ ವಿಡಂಬನೆ. ಸಚಿವ ಕೆ ಎನ್ ರಾಜಣ್ಣ ಅವರೇ ಹೇಳಿದಂತೆ 48 ರಾಜಕಾರಣಿಗಳ ಹನಿಟ್ರ್ಯಾಪ್‌ ವಿಡಿಯೋ ಸಿಡಿ ಹಾಗೂ ಪೆನ್‌ಡ್ರೈವ್‌ ಇವೆ ಎಂದಿದ್ದಾರೆ. ತಾವು ಸಜ್ಜನರಾಗಿದ್ದರೆ, ಹನಿಟ್ರ್ಯಾಪ್‌ ಜಾಲದೊಳಗೆ ಸಿಲುಕುವ ಭಯವೇ ಇರುತ್ತಿರಲಿಲ್ಲ ಎಂಬುದಕ್ಕೆ ಯಾರಿಂದಲೂ ಉತ್ತರವಿಲ್ಲ.

ಕರ್ನಾಟಕದ ರಾಜಕೀಯ ಚರಿತ್ರೆಯೊಳಗೆ ‌ಇತ್ತೀಚಿನ ದಶಕಗಳಲ್ಲಿ ಗಣಿಧನಿಗಳು, ಬ್ಲೂ ಬಾಯ್ಸ್‌, ಆಪರೇಷನ್‌ ಕಮಲ, ಪಕ್ಷಾಂತರ, ಸಿಡಿ ಪ್ರಕರಣ, ಬಾಂಬೆ ಬಾಯ್ಸ್‌, ಪೆನ್‌ಡ್ರೈವ್‌, ಆರ್‌ಟಿಜಿಎಸ್‌ ವಿಜಯೇಂದ್ರ, ಡಿನೋಟಿಫಿಕೇಷನ್‌, ಸದನದಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ, ಅಶ್ಲೀಲ ವಿಡಿಯೋ ಸಂಗ್ರಹ, ಪೆನ್‌ ಡ್ರೈ ಹಂಚಿಕೆ, ಮಾನಹಾನಿ ಸುದ್ದಿ ಪ್ರಸಾರಕ್ಕೆ ತಡೆ, ಫೋನ್‌ ಕದ್ದಾಲಿಕೆ… ಹೀಗೆ ಹೊಸ ಹೊಸ ಪದಗಳು ಹುಟ್ಟಿಕೊಂಡು ಕರ್ನಾಟಕದ ಕೀರ್ತಿಗೆ ಮಸಿ ಬಳಿದಿವೆ.

‌ಕರ್ನಾಟಕ ರಾಜಕಾರಣ ಕಂಡ ‘ಗಲೀಜುಗಾಥೆ’ಗಳ ಸರಮಾಲೆಯಲ್ಲಿ ಮೇಲಿನ ಹೊಸ ಪದಗಳ ಪ್ರಯೋಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಿಂತ ಬಿಜೆಪಿ ಅವಧಿಯಲ್ಲೇ ಹೆಚ್ಚು ಕಂಡುಬಂದಿರುವುದು ಗಮನಾರ್ಹ. ಬಹುತೇಕ ಪದಪುಂಜಗಳು ಬ್ಲ್ಯಾಕ್‌ಮೇಲ್‌ ರಾಜಕಾರಣವನ್ನೇ ಪ್ರತಿಬಿಂಬಿಸುತ್ತಿವೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಸಕರ ವೇತನ ಹೆಚ್ಚಳ: ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲವೇ?

‌ಹನಿಟ್ರ್ಯಾಪ್

ರನ್ಯಾ ರಾವ್ ಗೋಲ್ಡ್‌ ಸ್ಮಗ್ಲಿಂಗ್ ಕೇ‌ಸ್‌ನಿಂದ ಮಗ್ಗಲು ಬದಲಿಸಿದ ರಾಜ್ಯ ರಾಜಕಾರಣ ‘ಹನಿಟ್ರ್ಯಾಪ್’ ವಿಚಾರದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ವಿಧಾನ ಮಂಡಲದ ಅಧಿವೇಶನ ಹನಿಟ್ರ್ಯಾಪ್‌ ಗದ್ದಲಕ್ಕೆ ರಣಾಂಗಣವಾಯಿತು. ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಹನಿಟ್ರ್ಯಾಪ್‌ ವಿಚಾರ ಚರ್ಚೆಯಾಗಿ ರಾಜ್ಯದ ಎದುರು ಜನಪ್ರತಿನಿಧಿಗಳು ಬೆತ್ತಲಾದರು.

ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಸೇರಿದಂತೆ ರಾಜ್ಯದ ಕೆಲವು ಮಂತ್ರಿಗಳು ಮತ್ತು ಪ್ರಭಾವಿ ನಾಯಕರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೇಲೆ ‘ಇದೊಂದು ಹನಿಟ್ರ್ಯಾಪ್‌ ಸರ್ಕಾರ’ ಎಂದು ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದವು. ಹನಿಟ್ರ್ಯಾಪ್ ವಿಚಾರದ ಗದ್ದಲ ಅತಿರೇಖಕ್ಕೆ ತಿರುಗಿ ಕೊನೆಗೆ ಬಿಜೆಪಿಯ 18 ಶಾಸಕರನ್ನು ಸಭಾಧ್ಯಕ್ಷರು ಅಮಾನತು ಮಾಡಿದ್ದು ಆಯಿತು.

ವಿಧಾನ ಪರಿಷತ್‌ನಲ್ಲೂ ಹನಿಟ್ರ್ಯಾಪ್‌ನದ್ದೇ ಚರ್ಚೆ. ಹಿರಿಯ ಸದಸ್ಯ ಬಿ ಕೆ ಹರಿಪ್ರಸಾದ್‌ ಮಾತನಾಡಿ, “ಹನಿಟ್ರ್ಯಾಪ್ ಮೂಲ ಹುಟ್ಟಲು ಕಾರಣವೇ ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪುಸ್ತಕವನ್ನೊಮ್ಮೆ ತಿರುಗಿಸಿ ನೋಡಿ” ಎಂದು ಕುಟುಕಿದರು. ಬಿಜೆಪಿ ನಾಯಕರಿಗೆ ಹರಿಪ್ರಸಾದ್‌ ಮಾತು ಪಥ್ಯವಾಗಲಿಲ್ಲ. ಅಲ್ಲಿಗೆ ಮತ್ತೆ ಗದ್ದಲ ಆರಂಭ. ‘ಇದೊಂದು ಹನಿಟ್ರ್ಯಾಪ್‌ ಸರ್ಕಾರ’ ಎಂದು ಪರಿಷತ್‌ನಲ್ಲೂ ಕೂಗಿದರು. ಹರಿಪ್ರಸಾದ್‌ ಅಷ್ಟಕ್ಕೇ ಸುಮ್ಮನಾಗದೇ ಏರುಧ್ವನಿಯಲ್ಲಿ, “ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುಸ್ತಕವಿದೆ, ಅದನ್ನೊಮ್ಮೆ ತಿರುವಿ, ನೀವೆಲ್ಲಾ ಆರ್ ಎಸ್ ಎಸ್ ಹಿಂಬಾಲಕರು ತಾನೇ? ಅದರಲ್ಲಿದೆ, ದೇಶದಲ್ಲಿ ಮೊದಲ ಬಾರಿಗೆ ಹನಿಟ್ರ್ಯಾಪ್‌ಗೆ ಒಳಗಾಗಿದದ್ದು ಸಂಜಯ್ ಜೋಶಿ ಎನ್ನುವವರು. ಅದನ್ನು ಮಾಡಿಸಿದವರು ಪ್ರಧಾನಿ ನರೇಂದ್ರ ಮೋದಿಯವರು ಎನ್ನುವ ಮೂಲಕ ಹನಿಟ್ರ್ಯಾಪ್‌ ಪಿತಾಮಹ ನರೇಂದ್ರ ಮೋದಿ” ಎಂದು ಒತ್ತಿ ಹೇಳಿದರು.

ಕೆ ಎನ್‌ ರಾಜಣ್ಣನಿಗೆ ಅನ್ಯಾಯ ಆಗಿದೆ ಎಂದ ಬಿಜೆಪಿ ಸದಸ್ಯರು ಹನಿಟ್ರ್ಯಾಪ್‌ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಆಗ್ರಹಿಸಿದರು. ಅತ್ಯಾಚಾರ ಆರೋಪಿ ಬಿಜೆಪಿಯ ಶಾಸಕ ಮುನಿರತ್ನ ಇದೆಲ್ಲ ಸದಾಶಿವನಗರ ಸಿಡಿ ಪ್ಯಾಕ್ಟರಿ ಕೆಲಸ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ನತ್ತ ಬೊಟ್ಟು ಮಾಡಿದರು.

ಕರ್ನಾಟಕದ ಶಾಸಕವೃಂದ ತಮ್ಮನ್ನು ರಾಜ್ಯ ಚುನಾಯಿಸಿ ಕಳುಹಿಸಿರುವುದು ನಮ್ಮ ಜನಪ್ರತಿನಿಧಿಗಳಾಗಿ, ವಿಧಾನಮಂಡಲದಲ್ಲಿ ಶಾಸನ ರಚನೆ ಮಾಡಿ, ಕಾರ್ಯಕ್ರಮ ಅನುಷ್ಠಾನಗಳ ಬಗ್ಗೆ ಚರ್ಚೆ ಮಾಡಿ, ನಮ್ಮ ಕೆಲಸಗಳಿಗೆ ಉತ್ತರದಾಯಿತ್ವ ಇರಲಿ ಎಂದು. ಆದರೆ ತಮ್ಮ ಖಾಸಗಿ ತೆವಲುಗಳು, ಹನಿಟ್ರ್ಯಾಪು ಇತ್ಯಾದಿಗಳನ್ನೆಲ್ಲ ಸದನದಲ್ಲಿ ಚರ್ಚೆ ಮಾಡುವ ಮೂಲಕ ಇವರೆಲ್ಲ ಮಾಡಿದ್ದು ಕರ್ನಾಟಕ ಘನತೆಗೆ ಧಕ್ಕೆ ತರುವ ಕೆಲಸ.

ಹನಿಟ್ರ್ಯಾಪ್‌ಗಳು ಹೊಸತೇನಲ್ಲ

ರಾಜ್ಯದಲ್ಲಿ ಹನಿಟ್ರ್ಯಾಪ್‌ಗಳು ಹೊಸತೇನಲ್ಲ. ನಿರಂತರವಾಗಿ ಒಂದಲ್ಲ ಒಂದು ಹನಿಟ್ರ್ಯಾಪ್ ಪ್ರಕರಣಗಳು ಮುನ್ನಲೆಗೆ ಬರುತ್ತಲೇ ಇವೆ. ಅದೆಷ್ಟೋ ರಾಜಕಾರಣಿಗಳು, ಉದ್ಯಮಿಗಳು ಈ ಬಲೆಗೆ ಬಿದ್ದು, ಸಾಕಷ್ಟು ಹಣ ಕಳೆದುಕೊಂಡಿದ್ದಿದೆ. ಕೆಲವು ಉದ್ಯಮಿಗಳು ತಮ್ಮ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾದದ್ದು ಇದೆ.

ಹನಿಟ್ರ್ಯಾಪ್ ಎನ್ನುವುದು ಹೊಸದಾಗಿ ಹುಟ್ಟಿಕೊಂಡಿರುವುದಲ್ಲ. ಹಲವು ದಶಕಗಳ ಹಿಂದಿನಿಂದಲೂ ಹೆಣ್ಣನ್ನು ಬಳಸಿಕೊಂಡು ಗೌಪ್ಯ ಮಾಹಿತಿ, ಚಿನ್ನ, ಹಣ ಲಪಾಟಯಿಸಿರುವುದು ನಡೆದಿದೆ. ಆದರೆ, ಅಂದು ಹನಿಟ್ರ್ಯಾಪ್ ಎಂಬ ಹೆಸರಿರಲಿಲ್ಲ ಅಷ್ಟೇ. ಅದರಲ್ಲೂ ಮುಖ್ಯವಾಗಿ ಭಾರತೀಯ ಸೇನೆ ಮತ್ತು ವಾಯುಸೇನೆಯ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿರುವುದೂ ಕೂಡಾ ಇದೆ. ಅದು ರಹಸ್ಯ ಮಾಹಿತಿಗಳನ್ನು ಪಡೆಯಲು.

ಆದರೆ, ಇತ್ತೀಚಿನ ಹನಿಟ್ರ್ಯಾಪ್‌ಗಳು ವಿರೋಧಿ ಬಣದ ಮೇಲೆ ಹಿಡಿತ ಸಾಧಿಸಲು, ಅವರನ್ನು ತಾಳಕ್ಕೆ ತಕ್ಕಂತೆ ಕುಣಿಸಲು, ತಮ್ಮ ಕ್ಯಾಂಪ್‌ ಬದಲಾಯಿಸುವವರನ್ನು ಬಗ್ಗು ಬಡಿಯಲು, ಸ್ವಪಕ್ಷವೇ ಇರಲಿ ಅಥವಾ ವಿರೋಧ ಪಕ್ಷವೇ ಇರಲಿ ತಮ್ಮ ಎದುರಾಳಿಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು, ಅಧಿಕಾರದ ಲಾಭ ಪಡೆಯಲು… ಹೀಗೆ ಹಲವಾರು ಕಾರಣಗಳಿಗಾಗಿ ಹನಿಟ್ರ್ಯಾಪ್‌ ರಾಜಕೀಯದೊಳಗೆ ಬಂದು ಕೂತಿದೆ. ಬ್ಲ್ಯಾಕ್‌ಮೇಲ್‌ ರಾಜಕಾರಣವನ್ನು ಮುಂದುಮಾಡಿದೆ.

ಎಚ್‌ ವೈ ಮೇಟಿ ಹನಿಟ್ರ್ಯಾಪ್‌

2016ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್‌ ವೈ ಮೇಟಿ ಹನಿಟ್ರ್ಯಾಪ್‌ಗೆ ಬಲಿಯಾದರು. ಅವರ ಅಶ್ಲೀಲ ಸಿಡಿಯೊಂದು ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಈ ಸುದ್ದಿಯಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಮೇಟಿಯವರಿಗೆ ರಾಜೀನಾಮೆ ಪಡೆದಿದ್ದರು. ಪ್ರಕರಣದ ಹಿಂದೆ ಸ್ಥಳೀಯ ವಿರೋಧಿ ಪಕ್ಷದ ನಾಯಕರು ಮತ್ತು ಪ್ರಮುಖ ಸುದ್ದಿ ವಾಹಿನಿಯೊಂದರ ಪತ್ರಕರ್ತ ಇದ್ದ ಎಂಬ ಆರೋಪಗಳು ಹರಿದಾಡಿದ್ದವು.

ಮುನಿರತ್ನ ಏಡ್ಸ್‌ ಹನಿಟ್ರ್ಯಾಪ್

ಇತ್ತೀಚೆಗೆ ರಾಜ್ಯ ಮಾತ್ರವಲ್ಲ ದೇಶದಾದ್ಯಂತ ಬಿಜೆಪಿ ಶಾಸಕ ಮುನಿರತ್ನ ನಡೆಸಿದ ಹಲವಾರು ಏಡ್ಸ್‌ ಹನಿಟ್ರ್ಯಾಪ್ ಪ್ರಕರಣಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರ ಪಕ್ಷದ ಆರ್‌ ಅಶೋಕ್‌ ಅವರೇ ಏಡ್ಸ್‌ ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ್ದಾರೆ. ಹಲವು ಮಂದಿ ಈ ವಿಕೃತ ಕೃತ್ಯವನ್ನು ಮಾಡಿದ ಮುನಿರತ್ನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮುನಿರತ್ನ ಬಲೆಗೆ ಬಿದ್ದ ಎಷ್ಟೋ ಮಂದಿಯ ಜೀವವೂ ಅಪಾಯದಲ್ಲಿದೆ. ಆದರೂ ಇಂದಿಗೂ ಮುನಿರತ್ನ ಶಾಸಕರಾಗಿಯೇ ಇರುವುದು, ಬಿಜೆಪಿ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಂಡಿದೆ.

ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ಮತ್ತು ಉದ್ಯಮಿ ಮುಮ್ತಾಜ್ ಅಲಿ‌ ಆತ್ಮಹತ್ಯೆ ಪ್ರಕರಣದ ಹಿಂದೆಯೂ ಹನಿಟ್ರ್ಯಾಪ್ ಸದ್ದು ಕೇಳಿಸಿದೆ. ಮುಮ್ತಾಜ್ ಅಲಿ ಅವರು ಮಂಗಳೂರಿನ ಕೂಳೂರು ಸಮೀಪದ ಸೇತುವೆ ಬಳಿ ಕಾರು ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹನಿಟ್ರ್ಯಾಪ್​ಗೆ ಹೆದರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ದೂರು ದಾಖಲಿಸಿದ್ದನ್ನು ಇಲ್ಲಿ ಗಮನಿಸಬಹುದು.

ಕರ್ನಾಟಕ ರಾಜ್ಯದಲ್ಲಿ 2000ನೇ ಇಸವಿಯಿಂದ ಈವರೆಗೆ ರಾಜಕೀಯ ನಾಯಕರ ಅತಿದೊಡ್ಡ ಲೈಂಗಿಕ ಹಗರಣಗಳು ನಡೆದಿವೆ. ಅದರಲ್ಲಿ 2007ರಿಂದ ಶಾಸಕ ರೇಣುಕಾಚಾರ್ಯ ಅವರಿಂದ ಆರಂಭವಾದ ಲೈಂಗಿಕ ಹಗರಣದ ಪ್ರಕರಣಗಳ ಸಂಖ್ಯೆ ಬೆಳೆಯುತ್ತಲೇ ಹೋಗಿವೆ. ಅದರಲ್ಲಿಯೂ ಒಬ್ಬರಿಗಿಂತ ಮತ್ತೊಬ್ಬರದ್ದು ದೊಡ್ಡ ದೊಡ್ಡ ಹಗರಣಗಳೇ ಬಯಲಿಗೆ ಬರುತ್ತಿವೆ.

ಶಾಸಕ ರೇಣುಕಾಚಾರ್ಯ ಲೈಂಗಿಕ ಪ್ರಕರಣ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಲೈಂಗಿಕ ಹಗರಣವೊಂದು ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೆಚ್ಚಿ ಬೀಳಿಸಿತ್ತು. ಆಸ್ಪತ್ರೆಯ ನರ್ಸ್ ಜಯಲಕ್ಷ್ಮಿ ಎನ್ನುವವರು ಸಚಿವರಾಗಿದ್ದ ರೇಣುಕಾಚಾರ್ಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಜೊತೆಗೆ, ಇದಕ್ಕೆ ಸಾಕ್ಷಿಯಾಗಿ ಚುಂಬಿಸುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಸಚಿವರು ತಮ್ಮನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ್ದು, ಫೊಟೋ ವೈರಲ್ ಬಳಿಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಆದರೆ, 3 ವರ್ಷಗಳ ನಂತರ ಸ್ವತಃ ನರ್ಸ್ ಜಯಲಕ್ಷ್ಮಿ ಪ್ರಕರಣವನ್ನು ವಾಪಸ್ ಪಡೆದರು.

ಹರತಾಳು ಹಾಲಪ್ಪ ಲೈಂಗಿಕ ಹಗರಣ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ 2009ರ ಅವಧಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪ ಅವರು ತಮ್ಮ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ಆರೋಪದಿಂದಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಬ್ಲೂ ಬಾಯ್ಸ್‌ / ಕಲಾಪದ ವೇಳೆ ಅಶ್ಲೀಲ ವಿಡಿಯೋ ವೀಕ್ಷಣೆ

ಇದು ಬಿಜೆಪಿ ಸರ್ಕಾರ ಅವಧಿಯಲ್ಲಿ ಜನ್ಮತಾಳಿದ ಪದ. 2012ರಲ್ಲಿ ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಂದಿನ ಆಡಳಿತಾರೂಢ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ಶಾಸಕರಾದ ಲಕ್ಷ್ಮಣ್‌ ಸವದಿ, ಸಿಸಿ ಪಾಟೀಲ್‌ ಹಾಗೂ ಕೃಷ್ಣ ಪಾಲೇಮಾರ್‌ ಅವರು ಅಶ್ಲೀಲ ವಿಡಿಯೋಗಳನ್ನ ಸದನದಲ್ಲಿ ವೀಕ್ಷಿಸಿದ್ದು, ಭಾರೀ ಸುದ್ದಿಯಾಗಿತ್ತು. ಇನ್ನೂ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ್ದರಿಂದ ಜನಾಕ್ರೋಶವೂ ವ್ಯಕ್ತವಾಗಿತ್ತು.

ಅರವಿಂದ ಲಿಂಬಾವಳಿ ವಿರುದ್ಧ ಹರಿಬಿಟ್ಟ ಸೆಕ್ಸ್‌ಟೇಪ್

ಮಹದೇವಪುರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು 2019ರಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾದ ಸೆಕ್ಸ್ ಟೇಪ್ ರಾಜ್ಯ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತ್ತು.

ಸಿ.ಡಿ ಪ್ರಕರಣ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಕೆಪಿಟಿಸಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೊತೆಗೆ, ಇದಕ್ಕೆ ಸಂಬಂಧಪಟ್ಟಂತೆ ಸಿಡಿಯಲ್ಲಿ ಸೆರೆ ಹಿಡಿಯಲಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರೋಪದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಇನ್ನು ಒಟ್ಟು 3 ಎಫ್‌ಐರ್ ಕೇಸ್ ದಾಖಲಾಗಿದ್ದು, 2 ಪ್ರಕರಣ ಇತ್ಯರ್ಥವಾಗಿದ್ದು ಅದರಲ್ಲಿ ನಿರ್ದೋಷಿ ಆಗಿದ್ದಾರೆ. ಇನ್ನೂ ಒಂಂದು ಪ್ರಕರಣ ತನಿಖಾ ಹಂತದಲ್ಲಿದೆ.

2013ರಲ್ಲಿ ಸಿಡಿ ಕಂಟಕವಾಗಿ ಕಾಡಿದ್ದು ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್​ ಅವರಿಗೆ. ಶಾಸಕ ರಘುಪತಿ ಭಟ್​ ಅವರು ಯುವತಿಯೊಬ್ಬಳೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದಾರೆ ಎನ್ನಲಾದ ವಿಡಿಯೋ 2013ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹರಿದಾಡಿ ಬೆಂಗಳೂರನ್ನೂ ತಲುಪಿತ್ತು. ಕೊನೆಗೆ ಅವರು ರಾಜೀನಾಮೆಯೂ ನೀಡಬೇಕಾಗಿ ಬಂತು.

2010ರಲ್ಲಿ ಯಡಿಯೂರಪ್ಪ ಕ್ಯಾಬಿನೆಟ್​ನಲ್ಲಿ ಸಂಪುಟದಲ್ಲಿ ಸಚಿವರಾಗಿದ್ದ ರಾಮ್​ದಾಸ್ ಅವರನ್ನೂ ಸಿಡಿ ಬಿಟ್ಟಿಲ್ಲ. 2014ರಲ್ಲಿ ಪ್ರೇಮಾಕುಮಾರಿ ಎಂಬಾಕೆ ರಾಮ್​ದಾಸ್​ ತನ್ನನ್ನು ವಿವಾಹವಾಗುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇವರಿಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಸಿಡಿ ಕೂಡ ಬಿಡುಗಡೆಯಾಗಿತ್ತು. ಅದು ರಾಮ್​ದಾಸ್​ ಮತ್ತು ಪ್ರೇಮಾಕುಮಾರಿ ನಡುವೆಯೇ ನಡೆದ ಸಂಭಾಷಣೆ ಎಂದು ವಿಧಿವಿಜ್ಞಾನ ಪ್ರಯೋಗಾಲಯವೂ ದೃಢಪಡಿಸಿತ್ತು.

ಪೆನ್‌ ಡ್ರೈ ಪ್ರಕರಣ

ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಸುಮಾರು 2,800ಕ್ಕೂ ಅಧಿಕ ವಿಡಿಯೋಗಳು ಇರುವ ಪೆನ್‌ಡ್ರೈವ್ ಲೋಕಸಭಾ ಚುನಾವಣೆ ಹೊತ್ತಲ್ಲಿ ದೊಡ್ಡ ಸಂಚಲನ ಮೂಡಿಸಿತು. ಇದರಲ್ಲಿ 16ರಿಂದ 50 ವರ್ಷದವರೆಗಿನ ಬಾಲಕಿಯರು ಹಾಗೂ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ಈ ವಿಡಿಯೋ ಹೊರಬಂದ ನಂತರ ಮಹಿಳೆಯೊಬ್ಬರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ್ದಾರೆ. ಈಗ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರದಿಂದ ಎಸ್‌ಐಟಿ ತನಿಖೆಗೆ ವಹಿಸಿದೆ.

ಟೆಲಿಪೋನ್​​ ಕದ್ದಾಲಿಕೆ

80ರ ದಶಕದ ಆರಂಭದಲ್ಲಿ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಗೇರಿದ ಪ್ರಥಮ ಕಾಂಗ್ರೆಸೇತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ. ಅಧಿಕಾರ ಸೂತ್ರ ಹಿಡಿದ ಗಳಿಗೆಯಿಂದಲೇ ಮೌಲ್ಯಾಧಾರಿತ ರಾಜಕಾರಣವನ್ನು ಉಸಿರಾಡಿದವರು. ಆದರೆ ಸಾರಾಯಿ ಬಾಟ್ಲಿಂಗ್‌ ಗುತ್ತಿಗೆ ಹಗರಣದಲ್ಲಿ ಹೆಗಡೆಯವರ ಸರಕಾರ ತಪ್ಪೆಸಗಿದೆ ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿತ್ತು. ಲೋಪದ ನೈತಿಕ ಹೊಣೆ ಹೊತ್ತು 1986 ಫೆಬ್ರವರಿ 13ರಂದು ಹೆಗಡೆ ಮುಖ್ಯಮಂತ್ರಿ ಪದವಿ ತ್ಯಜಿಸಿದ್ದರು. ಕೊನೆಗೆ ಅವರ ಸಚಿವ ಸಂಪುಟದ ಸಚಿವರು ಮತ್ತು ಅತ್ಯಧಿಕ ಸಂಖ್ಯೆಯ ಶಾಸಕರು, ಹೆಗಡೆ ಅವರು ರಾಜೀನಾಮೆ ಹಿಂಪಡೆಯಬೇಕೆಂದು ಪಟ್ಟು ಹಿಡಿದಿ ಕಾರಣ ಹೆಗಡೆ ರಾಜೀನಾಮೆ ವಾಪಸ್‌ ಪಡೆದಿದ್ದರು.

ಆದರೆ, 1988 ಆಗಸ್ವ್‌ 10ರಂದು ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣ ಸೈದ್ಧಾಂತಿಕ ಬದ್ಧತೆಯನ್ನು ಎತ್ತಿ ಹಿಡಿಯಲೇಬೇಕಾದ ಸಂದರ್ಭ ಸೃಷ್ಟಿಯಾಯಿತು. ಆಗ ಭಾರತದ ಉದ್ದಗಲಕ್ಕೂ ಪ್ರತಿಧ್ವನಿಸಿದ್ದು ಟೆಲಿಫೋನ್‌ ಕದ್ದಾಲಿಕೆಯ ಹಗರಣ. ಭಾರತದ ರಾಷ್ಟ್ರಪತಿ ಆಗಿದ್ದ ಗ್ಯಾನಿ ಜೇಲ್‌ ಸಿಂಗ್‌ ಅವರ ಟೆಲಿಫೋನ್‌ ಅನ್ನೂ ರಾಜೀವ್‌ ಗಾಂಧಿ ಅವರ ಸರಕಾರ ಕದ್ದಾಲಿಸಿತ್ತು ಎನ್ನುವ ಆರೋಪ ಬಂದಿತ್ತು. ಜೇಲ್‌ ಸಿಂಗ್‌ ಅವರೇ ರಾಷ್ಟ್ರಪತಿ ಭವನದ ಟೆಲಿಫೋನ್‌ಗಳನ್ನು ಕದ್ದಾಲಿಸುತ್ತಿದ್ದಾರೆ ಎಂದು ದೂರಿದ್ದರು.

ಕರ್ನಾಟಕ ಕೂಡ ಆಗ ಟೆಲಿಫೋನ್‌ ಕದ್ದಾಲಿಕೆ ವಿಚಾರದಿಂದ ಹೊರತಾಗಿರಲಿಲ್ಲ. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವಣ ಅಂತಃಕಲಹ ತಾರಕಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗಾದಿಯಲ್ಲಿದ್ದ ರಾಮಕೃಷ್ಣ ಹೆಗಡೆ, ತಮ್ಮ ರಾಜಕೀಯ ವಿರೋಧಿಗಳ ಟೆಲಿಫೋನ್‌ ಕದ್ದಾಲಿಸಿರಬಹುದು ಎನ್ನುವ ಸುಳಿವು ಕೇಂದ್ರ ಸರಕಾರಕ್ಕಿತ್ತು. ಇದನ್ನಾಧರಿಸಿ ಕೇಂದ್ರ ಬೇಹುಗಾರಿಕೆ ದಳದ ನೆರವನ್ನು ಪಡೆದು ಕರ್ನಾಟಕದಲ್ಲಿ ಟೆಲಿಫೋನ್‌ ಕದ್ದಾಲಿಕೆ ಮಾಡಿರುವ ಸಮಗ್ರ ವರದಿಯನ್ನು ಕೇಂದ್ರ ಕಮ್ಯೂನಿಕೇಷನ್‌ ಸಚಿವ ಬೀರ್‌ ಬಹದ್ದೂರ್‌ ಸಿಂಗ್‌ ಪಡೆದಿದ್ದರು.

ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಹಾಗೆ ಮರುದಿನ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ದೈನಿಕವು ಹೆಗಡೆ ಸರಕಾರದ ಟೆಲಿಫೋನ್‌ ಕದ್ದಾಲಿಕೆಗೆ ಸಂಬಂಧಿಸಿದ ಇನ್ನೊಂದು ಸ್ಫೋಟಕ ವರದಿ ಪ್ರಕಟಿಸಿತ್ತು. ಆ ವರದಿಯಲ್ಲಿ ಜನತಾ ಪಕ್ಷ ದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಜಿತ್‌ ಸಿಂಗ್‌ ಮತ್ತು ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ಬದ್ಧವೈರಿ ಹಾಗೂ ಭಿನ್ನಮತೀಯ ನಾಯಕ ಎಚ್‌.ಡಿ.ದೇವೇಗೌಡ ಅವರ ನಡುವೆ ನಡೆದ ಟೆಲಿಫೋನಿಕ್‌ ಸಂಭಾಷಣೆಯ ಸಮಗ್ರ ವಿವರ ಪ್ರಕಟಿಸಲಾಗಿತ್ತು.

ಇದು ರಾಜ್ಯ ರಾಜಕಾರಣದಲ್ಲಿ ದೊಡ್ಡ ರಾಜಕೀಯ ವಿಪ್ಲವಕ್ಕೆ ನಾಂದಿ ಹಾಡಿತ್ತು. ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಮಕೃಷ್ಣ ಹೆಗಡೆ, ”ಟೆಲಿಫೋನ್‌ ಕದ್ದಾಲಿಕೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಮೌಲ್ಯಾಧಾರಿತ ರಾಜಕಾರಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇನೆ” ಎಂದಿದ್ದರು.

ಟೇಪ್ ಹಗರಣ

ರಾಜ್ಯದಲ್ಲಿ ಶಾಸಕರನ್ನು ಸೆಳೆಯುವುದು ಹೊಸದಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೂ ಮುನ್ನ 1983 ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಉರುಳಿಸಲು ವೀರಪ್ಪ ಮೊಯ್ಲಿ ಅವರು ಸಿ.ಬೈರೇಗೌಡರಿಗೆ ಹಣ ನೀಡಿ ಕಾಂಗ್ರೆಸ್‌ಗೆ ಸೆಳೆಯಲು ಯತ್ನಿಸಿದ್ದ ಪ್ರಕರಣ ದೊಡ್ಡ ಸುದ್ದಿಯಾಗಿತ್ತು.

ಯಡಿಯೂರಪ್ಪ ಅವರು ಗುರುಮಿಟ್ಕಲ್ ಶಾಸಕ ನಾಗನಗೌಡ ಕುಂದಕೂರ್ ಸೆಳೆಯಲು ಅವರ ಪುತ್ರನ ಮೂಲಕ ಯತ್ನಿಸಿದ್ದರು ಎಂಬ ಆಡಿಯೋ ಸಹ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ಸದನದಲ್ಲೂ ಇದು ಪ್ರತಿಧ್ವನಿಸಿತ್ತು. ಆದರೆ, ಆಪರೇಷನ್‌ ಕಮಲದ ನಂತರ ಸದಸ್ಯರೇ ಕೋಟಿ ಕೋಟಿ ರೂ. ಆಫರ್ ಬಗ್ಗೆ ಸದನದಲ್ಲಿ ಮಾತನಾಡಿದ್ದು ದಾಖಲಾಗಿದೆ.

ಆಪರೇಷನ್‌ ಕಮಲ

ಆಪರೇಷನ್ ಕಮಲ ಹುಟ್ಟಿಕೊಂಡಿದ್ದು 2008ರಲ್ಲಿ. ಗಾಲಿ ಜನಾರ್ದನ ರೆಡ್ಡಿ ಅವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಬಹುಮತದ ಸಂಖ್ಯೆ ಕಡಿಮೆ ಇದ್ದ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಪಕ್ಷಾಂತರ ಮಾಡಿ, ಹಣದ ಆಮಿಷದ ಮೂಲಕ ಮೊದಲ ಬಾರಿಗೆ ಆಪರೇಷನ್‌ ಕಮಲ ಹುಟ್ಟಿಗೆ ಕಾರಣರಾದರು. ಯಡಿಯೂರಪ್ಪ ಅವರೇ ಆಪರೇಷನ್‌ ಕಮಲದ ಮೂಲ ರೂವಾರಿ.

ಬಾಂಬೆ ಬಾಯ್ಸ್‌

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರದದಲ್ಲಿ ರಮೇಶ್‌ ಜಾರಕಿಹೊಳಿ ಮುಂದಾಳತ್ವದಲ್ಲಿ ಬಿಜೆಪಿಗೆ ಹಾರಿದ್ದ 17 ಶಾಸಕರನ್ನು ಬಾಂಬೆ ಬಾಯ್ಸ್‌ ಎಂತಲೇ ಕರೆಯಲಾಗುತ್ತಿದೆ. 12 ಮಂದಿ ಕಾಂಗ್ರೆಸ್‌ನಿಂದ ಬಂದವರು. ಮೂವರು ಜೆಡಿಎಸ್, ಇಬ್ಬರು ಪಕ್ಷೇತರ ಸದಸ್ಯರಾಗಿದ್ದರು. ಇವರೆಲ್ಲ ಮೈತ್ರಿ ಸರ್ಕಾರ ಉರುಳಿಸಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಕಾರಣರಾಗಿದ್ದರು.

ಇದಿಷ್ಟು ರಾಜ್ಯದಲ್ಲಿ ಹುಟ್ಟಿದ ಹೊಸ ಪದಗಳ ಹಿಂದಿನ ಗಲೀಜು ಕಥೆಗಳ ಕರಾಳ ಸತ್ಯ. ಮುಖ್ಯವಾಗಿ ಟ್ರ್ಯಾಪ್ ಹಾಕೋರು ಇದ್ದೇ ಇರುತ್ತಾರೆ. ಆದರೆ ನಮ್ಮ ಆಂತರಿಕ ಶಕ್ತಿ ಹಾಗೂ ವಿವೇಕ ಎಷ್ಟು ಜಾಗೃತವಾಗಿದೆ ಎನ್ನುವುದರ ಮೇಲೆ ನಾವು ಆ ಖೆಡ್ಡಾಕ್ಕೆ ಬೀಳುತ್ತೀವೋ ಇಲ್ಲವೋ ಅನ್ನೋದು ನಿರ್ಧಾರವಾಗುತ್ತದೆ. ಆದರೆ ಇಲ್ಲಿ ಬಹುತೇಕರ ಕತೆ ಕಂಡ ಕಂಡಲ್ಲಿ ಕಚ್ಚೆ ಬಿಚ್ಚಿದವರೇ ಹೆಚ್ಚಿದ್ದಾರೆ.

ನಮ್ಮ ರಾಜ್ಯದ ಪ್ರಕರಣದಲ್ಲಿ ಮೊದಲ ಹಂತದಲ್ಲಿ ನಡೆಯುವ ಹನಿಟ್ರ್ಯಾಪ್ ಒಂದು ಆರಂಭ ಅಷ್ಟೇ. ಅದರ ನಿಜವಾದ ಉದ್ದೇಶ, ವ್ಯಕ್ತಿಯ ಚಾರಿತ್ರ್ಯಹರಣಕ್ಕೆ ಬೇಕಾದ ದಾಖಲೆಯನ್ನು ಸಂಗ್ರಹಿಸಿ ಅವನನ್ನು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಅವನ ಸಾರ್ವಜನಿಕ ಬದುಕು, ವೈಯಕ್ತಿಕ ಬದುಕನ್ನು ಹಾಳುಗೆಡುವುವ ಮೂಲಕ ಮೇಲಗೈ ಸಾಧಿಸುವುದಾಗಿದೆ. ಇದು ನಿಜವಾಗಿಯೂ act of crime. ದುರ್ದೈವದ ಸಂಗತಿ ಎಂದರೆ ಇದೊಂದು ಪಕ್ಷಾತೀತವಾದ ವ್ಯಾಧಿಯಾಗಿ ಪರಿಣಿಮಿಸಿರುವುದು ದುರಂತ.

ನನ್ನ ವಿಷಯ ಸುದ್ದಿ ಮಾಧ್ಯಮದಲ್ಲಿ ಬರಬಾರದು ಎಂದು ಸ್ಟೇ ತರೋದೇ ಕೆಲ ರಾಜಕಾರಣಿಗಳ ದೊಡ್ಡ ಸಾಧನೆ ಆಗಿ ಹೋಗಿದೆ. ಬಾಂಬೆ ಬಾಯ್ಸ್‌ ಎಲ್ಲ ಸ್ಟೇ ತಂದವರೇ ಆಗಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮಾನಹಾನಿ ಸುದ್ದಿ ಪ್ರಸಾರಕ್ಕೆ ಸ್ಟೇ ತಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಒಟ್ಟಾರೆ ಇವರೆಲ್ಲ ರಾಜ್ಯದ ಮಾನ ಹರಾಜು ಹಾಕಿದ್ದಾರೆ.

16ನೇ ಶತಮಾನದಲ್ಲೇ ಸರ್ವಜ್ಞ ಈ ಬಗ್ಗೆ ಇಂತಹ ಅಪಾಯದ ಬಗ್ಗೆ ಹೇಳಿದ್ದ. ಕಚ್ಚೆ ಕೈ ಬಾಯ್ಗಳು ಇಚ್ಚೆಯಲ್ಲಿ ಇದ್ದಿಹರೆ | ಅಚ್ಯುತನಪ್ಪ ಅಜನಪ್ಪ ಲೋಕದಲಿ | ನಿಶ್ಚಿಂತನಪ್ಪ ಸರ್ವಜ್ಞ. ಅರ್ಥ ಇಷ್ಟೇ; ಕಚ್ಚೆ, ಕೈ ಹಾಗೂ ಬಾಯಿ ಹತೋಟಿಯಲಿದ್ದರೆ ವಿಷ್ಣು ಬ್ರಹ್ಮನಂತೆ ಲೋಕದಲ್ಲಿ ಚಿಂತೆ ಇಲ್ಲದೆ ಬಾಳುವನು ಎಂಬುದು ಸರ್ವಜ್ಞನ ಸಾರ.

ರಾಜ್ಯದಲ್ಲಿಈಗ ‘ಮದ ಭಲೇ’ಯ ಜನಪ್ರತಿನಿಧಿಗಳು ‘ಮಧುಬಲೆ’ಗೆ ಬೀಳುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧದ ಸಮರದಲ್ಲಿ ಕೆ ಎನ್‌ ರಾಜಣ್ಣ ಇಡೀ ಕಾಂಗ್ರೆಸ್‌ನ ಮರ್ಯಾದೆಯನ್ನು ಹಾಳು ಮಾಡಿ, ಪಕ್ಷಕ್ಕೆ ಮುಜುಗರ ತಂದಿಟ್ಟಿದ್ದಾರೆ. ಇಲ್ಲಿ ಡಿ ಕೆ ಶಿವಕುಮಾರ್‌ ಕೂಡ ಸ್ವಪಕ್ಷ ಮತ್ತು ವಿರೋಧ ಪಕ್ಷದ ನಾಯಕರು ತಮ್ಮ ಮೇಲೆ ಹನಿಟ್ರ್ಯಾಪ್‌ ಎಂಬ ಗುರುತರ ಆರೋಪವನ್ನು ಮಾಡುತ್ತಿದ್ದರೂ, “ಅವರು ಹಲೋ ಎಂದಿದ್ದಕ್ಕೆ ಇವರು ಹಲೋ ಎಂದಿರುತ್ತಾರೆ” ಎಂದಷ್ಟೇ ಹೇಳುವ ಮೂಲಕ ಮತ್ತಷ್ಟು ಅನುಮಾನಗಳನ್ನು ಉಳಿಸಿ ಮಾತನಾಡಿದ್ದಾರೆ. ಆದರೆ ಇದೆಲ್ಲದಕ್ಕೂ ಹೆಣ್ಣು ದಾಳವಾಗುತ್ತಿರುವುದು ದುರಂತ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X