ಹನಿಟ್ರ್ಯಾಪ್‌ಗೆ ಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ಸದಾಶಿವನಗರದ ಗೃಹಕಚೇರಿಯಲ್ಲಿ ಮಂಗಳವಾರ ಸಂಜೆ ಭೇಟಿ ಮಾಡಿ ಮನವಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, “ಹನಿಟ್ರ್ಯಾಪ್‌ಗೆ ಯತ್ನ ಆಗಿದೆ ಎಂಬ ವಿಷಯ ಸದನದಲ್ಲಿ ಚರ್ಚೆಗೆ ಬಂದಾಗ, ನನ್ನ ಮೇಲೆ ಪ್ರಯತ್ನ ಆಗಿದೆ ಎಂದು ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದ್ದರು. ಗೃಹ ಸಚಿವರಿಗೆ ಮನವಿ ಕೊಡುತ್ತೇನೆ ಎಂದಿದ್ದರು. ಆ ಪ್ರಕಾರ ಈ ದಿನ ಮನವಿ ನೀಡಿದ್ದಾರೆ” ಎಂದರು.
“ಮನವಿ ಸ್ವೀಕರಿಸಿದ್ದು, ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸುತ್ತೇನೆ. ಯಾವ ಹಂತದಲ್ಲಿ, ಯಾರಿಂದ ತನಿಖೆಯಾಗಬೇಕು ಎಂಬುದನ್ನು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸದನದಲ್ಲಿ ಚರ್ಚೆಯಾಗಿರುವ ಹಿನ್ನೆಲೆಯಲ್ಲಿ ಮನವಿ ನೀಡಿದ್ದಾರೆ. ಇದರ ಆಧಾರದ ಮೇಲೆ ಮುಂದೆ ಏನು ಮಾಡಬೇಕು ಎಂಬುದನ್ನು ಕಾನೂನು ತಜ್ಞರ ಜೊತೆ ಚರ್ಚಿಸುತ್ತೇನೆ. ಸಚಿವ ರಾಜಣ್ಣ ಅವರು ನೀಡಿರುವ ಮನವಿಯಲ್ಲಿರುವ ಅಂಶಗಳನ್ನು ಬಹಿರಂಗಪಡಿಸುವುದಿಲ್ಲ” ಎಂದು ಹೇಳಿದರು.
“ಸದನದಲ್ಲಿ ಚರ್ಚೆಯಾಗಿರುವ ಹನಿಟ್ರ್ಯಾಪ್ ಯತ್ನ ವಿಷಯಕ್ಕೆ ಸಂಬಂಧಿಸಿದಂರೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್‌ನ ತೀರ್ಪಿಗಾಗಿ ಕಾಯುವುದಿಲ್ಲ. ಅದನ್ನು ಪ್ರತ್ಯೇಕವಾಗಿ ಪರಿಗಣಿಸುತ್ತೇವೆ. ಹನಿಟ್ರ್ಯಾಪ್ ಯತ್ನ ವಿಷಯ ಸದನದಲ್ಲಿ ಚರ್ಚೆಯಾಗಿರುವುದರಿಂದ ಸುವೋ ಮೋಟೋ (ಸ್ವಯಂ ಪ್ರೇರಿತ ದೂರು) ದಾಖಲಿಸಲು ಬರುವುದಿಲ್ಲ. ಸ್ಪೀಕರ್ ಅವರು ಸುಮೋ ಮೋಟೋ ದಾಖಲಿಸುವಂತೆ ಸೂಚಿಸಬಹುದಿತ್ತು. ಅವರು ಹೇಳಿದ್ದರೆ ಬೇರೆ ವಿಷಯವಾಗುತ್ತಿತ್ತು. ಆ ರೀತಿ ಆಗಿಲ್ಲ. ವಿಷಯ ಸದನದಲ್ಲಿ ಪ್ರಸ್ತಾಪವಾಗುವ ಮೊದಲು ಸಚಿವ ರಾಜಣ್ಣ ಅವರಾಗಲಿ ಮತ್ತು ಅವರ ಪುತ್ರ ಆರ್.ರಾಜೇಂದ್ರ ಅವರಾಗಲಿ ನನ್ನ ಬಳಿ ಚರ್ಚಿಸಿಲ್ಲ” ಎಂದು ಹೇಳಿದರು.