ಹರಿಯಾಣದಲ್ಲಿ ಬಿಜೆಪಿ ಸೋಲುವುದು ಖಚಿತವಾಗಿತ್ತು. ಕಾಂಗ್ರೆಸ್ ಪರವಾದ ಅಲೆಯೂ ಇತ್ತು. ರೈತ ಹೋರಾಟವು ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ವಾತಾವರಣ ನಿರ್ಮಿಸಿತ್ತು. ಆದರೆ, ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರ ಮೂರ್ಖತನದಿಂದಾಗಿ ಎಲ್ಲವೂ ತಲೆಕೆಳಗಾಯಿತು ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಅಧ್ಯಕ್ಷ ಗುರ್ನಾಮ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಭೂಪಿಂದರ್ ಹೂಡಾ ಅಪ್ಪಟ ಮೂರ್ಖ. ರೈತರು ಹರಿಯಾಣದಲ್ಲಿ ಕಾಂಗ್ರೆಸ್ ಪರವಾದ ಅಲೆ ಸೃಷ್ಠಿಸಿದದರು. ಆದರೆ, ಹೂಡಾ ಯಾವುದಕ್ಕೂ ರಾಜಿ ಮಾಡಿಕೊಳ್ಳಲಿಲ್ಲ. ಪಕ್ಷವೂ ಎಲ್ಲವನ್ನೂ ಆತನಿಗೇ ಬಿಟ್ಟುಕೊಟ್ಟಿತು. ಪರಿಣಾಮ, ಕಾಂಗ್ರೆಸ್ ಸೋಲುಂಡಿತು” ಎಂದು ಅವರು ಹೇಳಿದ್ದಾರೆ.
“ಈಗಲಾದರೂ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕು. ಹರಿಯಾಣ ವಿಧಾನಸಭೆಯಲ್ಲಿ ವಿಪಕ್ಷ ನಾಯಕನನ್ನಾಗಿ ಭೂಪಿಂದರ್ ಹೂಡಾರನ್ನು ಆಯ್ಕೆಮಾಡಬಾರದು. ಕಳೆದ 10 ವರ್ಷಗಳಲ್ಲಿ ವಿಪಕ್ಷ ನಾಯಕನಾಗಿ ಹೂಡಾ ಎಂದಿಗೂ ತನ್ನ ಜವಾಬ್ದಾರಿಯನ್ನು ನಿಭಾಯಿಸಿಲ್ಲ. ನಿಜವಾಗಿಯೂ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದು ಬಿಕೆಯು ಮತ್ತು ರೈತರು” ಎಂದು ಹೇಳಿದ್ದಾರೆ.