ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ವಸತಿ ಸಚಿವ ಝಮೀರ್ ಅಹಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿ, ಇಲಾಖೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆಯಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಗೃಹಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಅವರ ಜತೆಗೂಡಿ ಮಂಡಳಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಚಿಕ್ಕಜಾಲ ಇಂಟಿಗ್ರಟೇಡ್ ಟೌನ್ ಶಿಪ್ ಹಾಗೂ ಕುಂಬಳಗೋಡು ಉಪನಗರ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಗರಂ ಆದರು. ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜಿಸಿ ಮೂರು ತಿಂಗಳಲ್ಲಿ ಪ್ರಗತಿ ತೋರಿಸುವಂತೆ ನಿರ್ದೇಶನ ನೀಡಿದರು.
ಮಂಡಳಿ ಜಮೀನು ಸ್ವಾಧೀನ ಸೇರಿ ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳದ ಹಾಗೂ ಲಕ್ಷಾಂತರ ರೂ. ವ್ಯಯ ಆದರೂ ಒಂದೇ ಒಂದು ಪ್ರಕರಣ ಇತ್ಯರ್ಥವಾಗದ ಬಗ್ಗೆ ಸಿಡಿಮಿಡಿಗೊಂಡ ಸಚಿವರು, ಸದ್ಯದಲ್ಲೇ ಅಡ್ವೋಕೆಟ್ ಜನರಲ್ ಜತೆ ಸಭೆ ನಿಗದಿ ಮಾಡುವುದಾಗಿ ಸಚಿವರು ತಿಳಿಸಿದರು.
ಗೃಹಮಂಡಳಿ ಮೂಲೆ ನಿವೇಶನ ಹರಾಜು ಹಾಕಿ ಸಂಪನ್ಮೂಲ ಸಂಗ್ರಹಕ್ಕೆ ಒತ್ತು ಕೊಡಬೇಕು. ಮೂರು ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ. ಕ್ರೋಢೀಕರಿಸಿ ಹೊಸ ಬಡಾವಣೆ ನಿರ್ಮಿಸಲು ಜಾಮೀನು ಗುರುತಿಸಬೇಕು ಎಂದು ಝಮೀರ್ ಅಹಮದ್ ಖಾನ್ ಸೂಚನೆ ನೀಡಿದರು.
ಇದನ್ನು ಓದಿದ್ದೀರಾ? ಎತ್ತಿನಹೊಳೆ ಕಾಮಗಾರಿಗೆ 500 ಎಕರೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ: ಡಿಸಿಎಂ ಡಿ.ಕೆ. ಶಿವಕುಮಾರ್
ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಕೂಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, “ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಗೃಹ ಮಂಡಳಿ ನಿವೇಶನಗಳಿಗೆ ಬೇಡಿಕೆ ಇದೆ. ಸೂಕ್ತ ರೀತಿಯಲ್ಲಿ ಹೊಸ ಬಡಾವಣೆ ರಚನೆಗೆ ಕ್ರಮ ಕೈಗೊಳ್ಳಬೇಕು” ಎಂದು ತಾಕೀತು ಮಾಡಿದರು.
ಸಭೆಯಲ್ಲಿ ವಸತಿ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಕವಿತಾ ಮಣ್ಣಿಕೇರಿ, ಪ್ರಧಾನ ಅಭಿಯಂತರ ಶರಣಪ್ಪ ಉಪಸ್ಥಿತರಿದ್ದರು.
