ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನದ್ದು ಎನ್ನಲಾದ ಲೈಂಗಿಕ ಹಗರಣ ಪ್ರಕರಣವು ಕರ್ನಾಟಕದಲ್ಲಿ ಮಾತ್ರವಲ್ಲ ಪ್ರಸ್ತುತ ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದು ದೇಶದಲ್ಲೇ ಅತೀ ದೊಡ್ಡ ಲೈಂಗಿಕ ಹಗರಣವೆಂದು ಹೇಳಲಾಗುತ್ತಿದೆ. ಗಂಭೀರ ಆರೋಪ ಹೊತ್ತಿರುವ ಪ್ರಜ್ವಲ್, ವಿದೇಶಾಂಗ ಸಚಿವಾಲಯದ ಅನುಮತಿ ಇಲ್ಲದೆಯೇ ವಿದೇಶಕ್ಕೆ ಪ್ರಯಾಣ ಮಾಡಿರುವುದು ಕೂಡಾ ಚರ್ಚೆ ಮತ್ತು ಅನುಮಾನಗಳಿಗೆ ಕಾರಣವಾಗಿದೆ.
ಬಂಧನದ ಭೀತಿ ಎದುರಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಯಾವುದೇ ಅನುಮತಿ ಪಡೆಯದೆಯೇ ರಾಜತಾಂತ್ರಿಕ ಪಾಸ್‌ಪೋರ್ಟ್ ಮೂಲಕ ಜರ್ಮನಿಗೆ ಪಲಾಯನ ಮಾಡಿದ್ದಾರೆ. ಈ ಸಂದರ್ಭದಲ್ಲೆ ಈ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕೇಂದ್ರ ಸರ್ಕಾರವು ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ್ದ ವಿಚಾರ ಕೂಡಾ ಮುನ್ನಲೆಗೆ ಬಂದಿದೆ.
ಅನುಮತಿ ಪಡೆಯುವುದು ಅವಶ್ಯಕ
ಸಾಮಾನ್ಯವಾಗಿ ಸಂಸದರಾಗಲಿ ಅಥವಾ ಶಾಸಕರಾಗಲಿ ದೇಶ ಬಿಟ್ಟು ವಿದೇಶಕ್ಕೆ ಪ್ರಯಾಣ ಮಾಡುವಾಗ ರಾಜ್ಯಸಭೆ ಅಥವಾ ಲೋಕಸಭೆಯ ಮುಖ್ಯಸ್ಥರ (ಸ್ಪೀಕರ್) ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆಯದೆ ಯಾರೂ ಕೂಡಾ ವಿದೇಶ ಪ್ರಯಾಣ ಮಾಡುವಂತಿಲ್ಲ. ಮುಖ್ಯಮಂತ್ರಿ ಆಗಿದ್ದರೂ ಕೂಡಾ ಅವರು ಸ್ಪೀಕರ್ ಅನುಮತಿ ಪಡೆಯದೆ ವಿದೇಶಕ್ಕೆ ಹೋಗುವ ಅವಕಾಶವಿಲ್ಲ.
ಇದನ್ನು ಓದಿದ್ದೀರಾ? ಲೈಂಗಿಕ ದೌರ್ಜನ್ಯ ಪ್ರಕರಣ | ಪ್ರಜ್ವಲ್ ಯಾವುದೇ ದೇಶದಲ್ಲಿದ್ದರೂ ಹಿಡಿದು ತರುತ್ತೇವೆ: ಸಿಎಂ ಸಿದ್ದರಾಮಯ್ಯ
ಪ್ರಜ್ವಲ್ ರೇವಣ್ಣ ಸೇರಿದಂತೆ ಎಲ್ಲ ಸಂಸದರ ಬಳಿ ರಾಜತಾಂತ್ರಿಕ ಪಾಸ್‌ಪೊರ್ಟ್ ಇರುತ್ತದೆ. ರಾಜತಾಂತ್ರಿಕ ಪಾಸ್‌ಪೊರ್ಟ್‌ನಲ್ಲಿಯೂ ಕೂಡಾ ಒಂದೆರಡು ವರ್ಗಗಳಿವೆ. ಒಂದು ರೆಡ್ ಪಾಸ್‌ಪೋರ್ಟ್ ಆಗಿದ್ದು ಇದನ್ನು ಟಾಪ್ ಪಾಸ್‌ಪೋರ್ಟ್ ಎಂದು ಪರಿಗಣಿಸಲಾಗುತ್ತದೆ. ಇನ್ನೊಂದು ವೈಟ್ ಪಾಸ್‌ಪೋರ್ಟ್ ಆಗಿದ್ದು, ಇದನ್ನು ರೆಡ್ ಪಾಸ್‌ಪೋರ್ಟ್‌ಗಿಂತ ಕೊಂಚ ಕಡಿಮೆ ದರ್ಜೆಯ ಪಾಸ್‌ಪೋರ್ಟ್ ಆಗಿ ಪರಿಗಣಿಸಲಾಗುತ್ತದೆ. ಯಾವುದೇ ಪಾಸ್‌ಪೋರ್ಟ್ ಆದರೂ ಕೂಡಾ ಅದು ರಾಜತಾಂತ್ರಿಕ ಪಾಸ್‌ಪೋರ್ಟ್ ಆಗಿದ್ದಲ್ಲಿ ವಿದೇಶ ಪ್ರಯಾಣಕ್ಕೆ ಅನುಮತಿ ಪತ್ರ ಕಡ್ಡಾಯ.
ಅನುಮತಿ ಪಡೆದಿದ್ರಾ ಪ್ರಜ್ವಲ್ ರೇವಣ್ಣ?
ವಿದೇಶ ಪ್ರಯಾಣಕ್ಕೆ ಅನುಮತಿ ಕಡ್ಡಾಯ ಆಗಿರುವಾಗ ಪ್ರಜ್ವಲ್ ರೇವಣ್ಣ ಅವರು ತನ್ನ ವಿದೇಶ ಪ್ರಯಾಣದ ಬಗ್ಗೆ ಲೋಕಸಭೆಯ ಸ್ಪೀಕರ್‌ಗೆ ಮಾಹಿತಿ ನೀಡಿದ್ರಾ? ಸರ್ಕಾರದಿಂದ ಅನುಮತಿ ಪಡೆದಿದ್ರಾ ಎಂಬ ಪ್ರಶ್ನೆಗಳು ಎದುರಾಗಿವೆ. ಆದರೆ ಅದಕ್ಕೆ ಬರುವ ಉತ್ತರ ‘ಅನುಮತಿ ಪಡೆದಿಲ್ಲ’. ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ವಿದೇಶ ಪ್ರಯಾಣ ಮಾಡುವಾಗ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ಲೈಂಗಿಕ ಹಗರಣ | ಸಂತ್ರಸ್ತೆ ಅಪಹರಣ; ರೇವಣ್ಣ ಸಹಚರ ಸತೀಶ್ ಬಾಬಣ್ಣ ಬಂಧನ
“ಪ್ರಜ್ವಲ್ ರೇವಣ್ಣಗೆ ರಾಜಕೀಯ ಅನುಮತಿ (ಪೊಲಿಟಿಕಲ್ ಕ್ಲಿಯರೆನ್ಸ್) ಅಥವಾ ವಿದೇಶಾಂಗ ಇಲಾಖೆಯ ಅನುಮತಿ ನೀಡಿರಲಿಲ್ಲ. ಆದರೆ ವಿದೇಶಾಂಗ ಸಚಿವಾಲಯದಿಂದ ಯಾವುದೇ ಅನುಮತಿ ಪಡೆಯದೆ ರಾಜತಾಂತ್ರಿಕ ಪಾಸ್‌ಪೋರ್ಟ್ ಮೂಲಕ ಜರ್ಮನಿಗೆ ತೆರಳಿದ್ದಾರೆ” ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಅನುಮತಿ ಪಡೆಯದೆ ಹೋಗಲು ಹೇಗೆ ಸಾಧ್ಯ?
ರಾಜತಾಂತ್ರಿಕ ಪಾಸ್‌ಪೋರ್ಟ್ ಇರುವವರು ಇಮಿಗ್ರೇಷನ್ ಕೌಂಟರ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ಅನ್ನು ನೀಡುವಾಗ ಕೂಡಲೇ ಅಲ್ಲಿನ ಸಿಬ್ಬಂದಿಗಳು ಕೇಳುವುದು ವಿದೇಶಾಂಗ ಸಚಿವಾಲಯದ ಅಥವಾ ಸಂಬಂಧಿಸಿದ ಮುಖ್ಯಸ್ಥರ ಅನುಮತಿ ಪತ್ರವನ್ನು. ರಾಜತಾಂತ್ರಿಕ ಪಾಸ್‌ಪೋರ್ಟ್ ಇರುವವರು ವೈಯಕ್ತಿಕ ಕಾರ್ಯಕ್ಕಾಗಿ ವಿದೇಶಕ್ಕೆ ಪ್ರಯಾಣ ಮಾಡುವುದಾದರೂ ಕೂಡಾ ಅವರು ಅನುಮತಿ ಪಡೆಯುವುದು ಅವಶ್ಯಕ.
ಯಾವುದೇ ಸಂಸದರು ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಹೋಗುವುದಾದರೆ ವೀಸಾ ಅಗತ್ಯವಿರುವುದಿಲ್ಲ. ಆದರೆ, ಅನುಮತಿಯನ್ನು ಪಡೆಯುವುದು ಅವಶ್ಯಕವಾಗಿದೆ. ಜೊತೆಗೆ ವಿದೇಶಾಂಗ ಸಚಿವಾಲಯ ವೀಸಾ ನೋಟ್ ಜಾರಿ ಮಾಡಬೇಕಾಗುತ್ತದೆ. ಆದರೆ, ಪ್ರಜ್ವಲ್ ರೇವಣ್ಣ ಅವರಿಗೆ ಯಾವುದೇ ವೀಸಾ ನೋಟ್ ಜಾರಿ ಮಾಡಿಲ್ಲ. ಇದನ್ನು ವಿದೇಶಾಂಗ ಸಚಿವಾಲಯವೇ ಸ್ಪಷ್ಟಪಡಿಸಿದೆ. ಹಾಗಿರುವಾಗ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಪ್ರಯಾಣಿಸಲು ಹೇಗೆ ಸಾಧ್ಯ?
ಹಲವು ನಾಯಕರಿಗೆ ಅನುಮತಿ ನಿರಾಕರಿಸಿದ್ದ ಕೇಂದ್ರ!
ಈ ಹಿಂದೆ ಹಲವಾರು ಬಾರಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದಾರೆ. ಆದರೆ ಅನುಮತಿ ಪಡೆದೇ ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ. ಪ್ರಸ್ತುತ ಸಂಸದ ರಾಘವ್ ಚಡ್ಡಾ ತಮ್ಮ ಕಣ್ಣಿನ ಸರ್ಜರಿಗಾಗಿ ವಿದೇಶಕ್ಕೆ ಹೋಗಿದ್ದು, ಅವರೂ ಕೂಡಾ ಅನುಮತಿ ಪಡೆದಿದ್ದಾರೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕೇಂದ್ರ ಸರ್ಕಾರವು ಈ ಹಿಂದೆ ಅನುಮತಿ ನಿರಾಕರಿಸಿದೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ವಿರುದ್ಧ ಮುನ್ನೂರು ಕೇಸ್ ದಾಖಲಾಗಬೇಕು: ಎಸ್.ಬಾಲನ್
ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಂಗಾಪುರಕ್ಕೆ ಹೋಗಲು ಅನುಮತಿ ಸಿಗದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದು 2022ರಲ್ಲಿ ನಡೆದಿರುವ ಘಟನೆಯಾಗಿದೆ. ಕೇಜ್ರಿವಾಲ್ ಅವರನ್ನು ಸಿಂಗಾಪುರದಲ್ಲಿ ವರ್ಲ್ಡ್ ಸಿಟಿ ಸಮ್ಮಿಟ್‌ಗೆ ಆಹ್ವಾನಿಸಲಾಗಿತ್ತು. ಆದರೆ ವಿದೇಶಾಂಗ ಸಚಿವಾಲಯವು ಅನುಮತಿ ನೀಡಿರಲಿಲ್ಲ.
ಇದಕ್ಕೂ ಮುನ್ನ 2019ರಲ್ಲಿಯೂ ಕೇಜ್ರಿವಾಲ್ ಅವರಿಗೆ ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್‌ನಲ್ಲಿ ನಡೆಯಲಿದ್ದ ಸಮ್ಮೇಳನವೊಂದಕ್ಕೆ ಹೋಗಲು ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ. ಕೊನೆಗೆ ವರ್ಚುವಲ್ ಸಭೆಯಲ್ಲಿ ಕೇಜ್ರಿವಾಲ್ ಭಾಗಿಯಾಗಿದ್ದರು. ಮಮತಾ ಬ್ಯಾನರ್ಜಿ ಅವರಿಗೆ 2021ರಲ್ಲಿಯೇ ಎರಡು ಬಾರಿ ವಿದೇಶ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿದೆ.
I am an elected MLA. I don’t understand why am I being stopped (from going to World Cities Summit). Singapore govt has called me to tell them about Delhi model- growth of services in health&schools. This will promote the country on an international level: Delhi CM Arvind Kejriwal pic.twitter.com/vS56VgG7ow
— ANI (@ANI) July 18, 2022
ಇದು ಮಾತ್ರವಲ್ಲದೆ ಬಿಜೆಪಿ ನಾಯಕರಿಗೂ ಕೂಡಾ ಕೆಲವು ಸಂದರ್ಭದಲ್ಲಿ ಅನುಮತಿ ನಿರಾಕರಿಸಲಾಗಿದೆ. ಹಾಗಾಗಿ, ಅವರು ವಿದೇಶಕ್ಕೆ ಹೋಗುವ ತಮ್ಮ ಕಾರ್ಯಕ್ರಮವನ್ನೇ ರದ್ದು ಮಾಡಬೇಕಾಗಿತ್ತು ಅಥವಾ ವರ್ಚುವಲ್ ಆಗಿ ಸಭೆಯಲ್ಲಿ ಭಾಗಿಯಾಗಬೇಕಾಯಿತು. ಹಾಗಿದ್ದಾಗ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಆರೋಪವನ್ನು ಹೊತ್ತಿರುವ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದು ಹೇಗೆ? ಅನುಮತಿ ಇಲ್ಲದೆಯೇ ಇಮಿಗ್ರೇಷನ್ ಕೌಂಟರ್‌ನಲ್ಲಿ ಹೇಗೆ ವಿದೇಶಕ್ಕೆ ಹೋಗಲು ಬಿಟ್ಟಿದ್ದಾರೆ ಎಂಬ ಪ್ರಶ್ನೆ ಬರುತ್ತದೆ.
ಇಮಿಗ್ರೇಷನ್ ಕೌಂಟರ್ ಯಾರ ಅಡಿಯಲ್ಲಿ ಬರುವುದು?
ಇಮಿಗ್ರೇಷನ್ ಕೌಂಟರ್ ಇಂಟೆಲಿಜೆನ್ಸ್ ಬ್ಯೂರೋ ಅಥವಾ ಐಬಿ ಅಡಿಯಲ್ಲಿದೆ. ಈ ಇಂಟೆಲಿಜೆನ್ಸ್ ಬ್ಯೂರೋ ಬರುವುದು ಕೇಂದ್ರ ಸರ್ಕಾರದ ಅಡಿಯಲ್ಲಿ. ಅಂದರೆ ಕೇಂದ್ರ ಗೃಹಸಚಿವಾಲಯದ ಅಡಿಯಲ್ಲಿ ಈ ಇಂಟೆಲಿಜೆನ್ಸ್ ಬ್ಯೂರೋ ಬರುತ್ತದೆ. ಹಾಗಿದ್ದಾಗ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಲು ಯಾರು ಸಹಾಯ ಮಾಡಿದ್ದು ಎಂಬ ಪ್ರಶ್ನೆ ಮತ್ತೆ ಇಲ್ಲಿ ಬರುತ್ತದೆ?
ಇದನ್ನು ಓದಿದ್ದೀರಾ? ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿಎಂ ಸಿದ್ದರಾಮಯ್ಯ: ವಿಪಕ್ಷ ನಾಯಕ ಅಶೋಕ್ ಆರೋಪ
ಅನುಮತಿ ಪತ್ರ ಇಲ್ಲದೆ, ವೀಸಾ ನೋಟ್ ಇಲ್ಲದೆ ಇಮಿಗ್ರೇಷನ್ ಕೌಂಟರ್ ನಿರ್ವಹಣೆ ಮಾಡುವ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳು ಪ್ರಜ್ವಲ್ ರೇವಣ್ಣಗೆ ವಿದೇಶಕ್ಕೆ ಹೋಗಲು ಅವಕಾಶ ನೀಡಿದ್ದು ಹೇಗೆ? ಈ ಪ್ರಶ್ನೆಗೆ ಉತ್ತರ ಇರುವುದು ಕೇಂದ್ರದ ಮೋದಿ ಸರ್ಕಾರದ ಬಳಿ ಮಾತ್ರ. ಯಾಕೆಂದರೆ ಯಾವ ಸಂಸದರಿಗೂ ಮೋದಿ ಸರ್ಕಾರ, ವಿದೇಶಾಂಗ ಸಚಿವಾಲಯದ ಅನುಮತಿ ಇಲ್ಲದೆ ದೇಶ ತೊರೆಯಲು ಸಾಧ್ಯವಿಲ್ಲ.
ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿರುವು ಸಂಪೂರ್ಣವಾಗಿ ಅಕ್ರಮ ಎಂದರೆ ತಪ್ಪಾಗಲಾರದು. ಪ್ರಜ್ವಲ್ ರೇವಣ್ಣ ವಿದೇಶ ಪ್ರಯಾಣ ಮಾಡಿದ ಬಗ್ಗೆ ರಾಜ್ಯ ಸರ್ಕಾರವು ಉತ್ತರ ನೀಡಬೇಕಾಗುತ್ತದೆ. ಜೊತೆಗೆ ಕೇಂದ್ರ, ರಾಜ್ಯದ ರಾಜಕೀಯ ಕೆಸರೆರಚಾಟಕ್ಕೆ ಸಾವಿರಾರು ಮಹಿಳೆಯರು ಬಲಿಯಾಗುವುದು ಎಷ್ಟು ಸರಿ? ರಾಜ್ಯ ಸರ್ಕಾರವು ಸಂತ್ರಸ್ತ ಮಹಿಳೆಯರಿಗೆ ಭದ್ರತೆ ನೀಡುವುದು ಕೂಡಾ ಅಗತ್ಯ.