ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆಯುವ ನಿರ್ಧಾರದ ಹಿಂದೆ ಅಲ್ಪಸಂಖ್ಯಾತರ ಮತ ಗಟ್ಟಿಗೊಳಿಸುವ ತಂತ್ರ ಅಡಗಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರವು ಕಾನೂನುಬಾಹಿರ ಕೆಲಸ ಮಾಡಿ, ಕ್ಯಾಬಿನೆಟ್ ದುರುಪಯೋಗ ಪಡಿಸಿಕೊಂಡಿದೆ ಎಂದು ಸಂಸದ ಜಗದೀಶ ಶೆಟ್ಟರ್ ಕಿಡಿಕಾರಿದರು.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಇದು ದಂಗೆ ಪ್ರಕರಣ. ಹಲವರು ಪೊಲೀಸ್ ಠಾಣೆ, ಮನೆಗಳ ಮೇಲೆ ದಾಳಿ ಮಾಡಿದ್ದರು. ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಯಾಗಿತ್ತು. ಆದರೆ, ಪೊಲೀಸರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿತ್ತು. ಗಂಭೀರವಾದ ಈ ಪ್ರಕರಣ ಹಿಂದಕ್ಕೆ ಪಡೆಯುವ ಕುರಿತಾಗಿ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯ ವಾಪಸ್ ಪಡೆಯದಿದ್ದರೆ, ಬಿಜೆಪಿಯಿಂದ ಉಗ್ರಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿರುವ ಸಿದ್ದರಾಮಯ್ಯ ಅವರು, ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ನಡೆದ ಹೋರಾಟದಲ್ಲಿ ಭಾಗಿಯಾದವರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ನಾವು ಹಿಂದಕ್ಕೆ ಪಡೆದಿದ್ದೇವೆ. ಆದರೆ, ಈ ಪ್ರಕರಣ ಹಿಂದಕ್ಕೆ ಪಡೆಯುವಂಥದ್ದಲ್ಲ. ಇದನ್ನು ವಾಪಸ್ ಪಡೆಯುವುದಾದರೆ, ಮಹದಾಯಿ ಹೋರಾಟದಲ್ಲಿ ರೈತರ ಮೇಲೆ ಪ್ರಕರಣ ಏಕೆ ಹಿಂದಕ್ಕೆ ಪಡೆಯಲಿಲ್ಲ” ಎಂದು ಪ್ರಶ್ನಿಸಿದರು.
ಕಳಸಾ–ಬಂಡೂರಿ, ಮಹದಾಯಿ ಯೋಜನೆ ಕಾಮಗಾರಿ ವಿಳಂಬವಾಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, ‘ಕೇಂದ್ರ ಪರಿಸರ ಇಲಾಖೆ ಸಚಿವರಿಗೆ ಭೇಟಿಯಾಗಿ ಈ ವಿಷಯ ಮನವರಿಕೆ ಮಾಡಿಕೊಟ್ಟಿರುವೆ. ಈ ಬಗ್ಗೆ ತ್ವರಿತವಾಗಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ. ಕಾಮಗಾರಿ ಆರಂಭಕ್ಕಾಗಿ ಎಲ್ಲ ಹಂತದಲ್ಲೂ ಪ್ರಯತ್ನಿಸುತ್ತಿದ್ದೇವೆ” ಎಂದರು.