ಹುಬ್ಬಳ್ಳಿ ಪ್ರಕರಣ ವಾಪಸ್‌ಗೆ ಕೂಗೆಬ್ಬಿಸಿರುವ ಬಿಜೆಪಿ ಹಿಂಪಡೆದ ಗಲಭೆ ಕೇಸ್‌ಗಳ ಪ್ರಕರಣಗಳೆಷ್ಟು ಗೊತ್ತಾ?

Date:

Advertisements

2022ರಲ್ಲಿ ನಡೆದಿದ್ದ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆಯುತ್ತಿದೆ ಎಂಬ ವಿಚಾರ ಭಾರೀ ಗದ್ದಲ ಸೃಷ್ಟಿಸಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಗಲಭೆ ಪ್ರಕರಣವನ್ನು ಹಿಂಪಡೆಯದಂತೆ ಒತ್ತಾಯಿಸುತ್ತಿದ್ದಾರೆ. ಹಿಂಸಾಚಾರ, ಗಲಭೆ ಪ್ರಕರಣಗಳನ್ನು ಹಿಂಪಡೆಯದಂತೆ ಪ್ರತಿಭಟಿಸುವ ನೈತಿಕತೆ ಬಿಜೆಪಿಗಿದೆಯೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಹತ್ತಾರು ಕಾರಣಗಳಿವೆ.

ಅಂದಹಾಗೆ, 2022ರಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. ಹಾಲಿ ಸಂಸದ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರು. ಆ ವರ್ಷ, ಏಪ್ರಿಲ್ 16ರಂದು ಮುಸ್ಲಿಂ ಸಮುದಾಯದ ವಿರುದ್ಧ ದುಷ್ಕರ್ಮಿಯೊಬ್ಬ ಅವಹೇಳನಕಾರಿ ಪೋಸ್ಟ್‌ ಹಾಕಿದ್ದನೆಂದು ಮುಸ್ಲಿಂ ಸಮುದಾಯ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿತ್ತು. ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿತ್ತು.

ಪ್ರತಿಭಟನೆ ಹೆಚ್ಚಾದ ಕಾರಣ, ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಆತನನ್ನು ತಮಗೆ ಒಪ್ಪಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಈ ವೇಳೆ, ಕೆಲ ಕಿಡಿಗೇಡಿಗಳು ಪೊಲೀಸ್‌ ಠಾಣೆಗೆ ಕಲ್ಲು ಹೊಡೆದು, ವಾಹನಗಳಲ್ಲಿ ಬೆಂಕಿ ಹಚ್ಚಿದ್ದರು. ಪೊಲೀಸರು ಲಾಠಿ ಚಾರ್ಜ್‌ ನಡೆಸಿ, ಅಶ್ರುವಾಯು ಪ್ರಯೋಗಿಸಿದ್ದರು.

Advertisements

ಘಟನೆಯಲ್ಲಿ ಇನ್‌ಸ್ಪೆಕ್ಟರ್ ಸೇರಿದಂತೆ 12 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಗಲಾಟೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ಕೆಲವು ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿಯೂ ಪ್ರಕರಣ ದಾಖಲಿಸಿದ್ದರು. ಪ್ರತಿಭಟನೆ ನಡೆಸಿದವರು ಮುಸ್ಲಿಮರು ಎಂಬ ಕಾರಣಕ್ಕಾಗಿ ಅವರ ವಿರುದ್ಧ ದೇಶದ್ರೋಹದ ಯುಎಪಿಎ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಬಿಜೆಪಿ ಸರ್ಕಾರದ ವಿರುದ್ಧವೂ ಕೋಮು ರಾಜಕಾರಣದ ಕಾರಣಕ್ಕೆ ಆಕ್ರೋಶವೂ ವ್ಯಕ್ತವಾಗಿತ್ತು.

ಇದೀಗ, ಆ ಪ್ರಕರಣವೂ ಸೇರಿದಂತೆ ಹಲವು ಪ್ರಕರಣಗಳನ್ನು ಹಿಂಪಡೆಯುವುದು ಸರ್ಕಾರ ಹೇಳಿದೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವನ್ನು ಅನುಮೋದಿಸಲಾಗಿದೆ. ಹುಬ್ಬಳ್ಳಿ ಪ್ರಕರಣ ಮಾತ್ರವಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ರೈತ ಹೋರಾಟ, ಮಹಿಳಾ ಹೋರಾಟ, ದಲಿತ ಹೋರಾಟ, ಪ್ರತಿಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಹಾಗೂ ಕಾರ್ಮಿಕರು – ನೌಕರರು ನಡೆಸಿದ ಪ್ರತಿಭಟನೆಗಳ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರತಿಭಟನೆಗಳ ವಿರುದ್ಧ ದಾಖಲಿಸಲಾಗಿದ್ದ ಸುಮಾರು 43 ಪ್ರಕರಣಗಳನ್ನು ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆಯಲು ಮುಂದಾಗಿದೆ.

ಆದರೆ, ಈ ಪೈಕಿ ಹಳೇ ಹುಬ್ಬಳ್ಳಿ ಪ್ರಕರಣವನ್ನು ಬಿಜೆಪಿ ತನ್ನ ಕೋಮು ರಾಜಕಾರಣಕ್ಕೆ ಬಳಸಿಕೊಳ್ಳಲು ಹೊರಟಿದೆ. ಪ್ರಕರಣದ ಚರ್ಚೆಯನ್ನು ಮುನ್ನೆಲೆಗೆ ತಂದು ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲು ಹವಣಿಸುತ್ತಿದೆ.

ಹಾಗೆ ನೋಡಿದರೆ, ಎಲ್ಲ ಪಕ್ಷಗಳು ಅಧಿಕಾರದಲ್ಲಿದ್ದಾಗ ಹತ್ತಾರು ಪ್ರಕರಣಗಳನ್ನು ಹಿಂಪಡೆಯುತ್ತವೆ. ಇದು ಸಾಮಾನ್ಯವಾಗಿ ಪ್ರತಿ ವರ್ಷವೂ ನಡೆಯುತ್ತಲೇ ಇರುತ್ತದೆ. ಬಿಜೆಪಿ ಕೂಡ ಅಧಿಕಾರದಲ್ಲಿದ್ದಾಗ ನೂರಾರು ಪ್ರಕರಣಗಳನ್ನು ಹಿಂಪಡೆದುಕೊಂಡಿದೆ. ಗಮನಾರ್ಹವಾಗಿ, ಈಗ ಕಾಂಗ್ರೆಸ್‌ ಸರ್ಕಾರ ಹಿಂಪಡೆದಿರುವ ಬಹುತೇಕ ಎಲ್ಲ ಪ್ರಕರಣಗಳು ಜನಪರ ಹೋರಾಟಗಳಿಗೆ ಸಂಬಂಧಿಸಿದವು. ಆದರೆ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಬಿಜೆಪಿ, ಆರ್‌ಎಸ್‌ಎಸ್‌, ಬಜರಂಗದಳ ಸೇರಿದಂತೆ ಹಿಂದುತ್ವವಾದಿ ಸಂಘಟನೆಗಳು ಹಾಗೂ ಹಿಂದುತ್ವವಾದಿ ಕೋಮು ಕಾರ್ಯಕರ್ತರು ಮಾತ್ರವೇ ಭಾಗಿಯಾಗಿದ್ದ, ಆರೋಪಿಗಳಾಗಿದ್ದ ಪ್ರಕರಣಗಳನ್ನು ಮಾತ್ರವೇ ಹಿಂಪಡೆದುಕೊಂಡಿತ್ತು ಎಂಬುದು ಮರೆಮಾಚಲಾಗದ ಸಂಗತಿ.

2020, 2022 ಹಾಗೂ 2023ರಲ್ಲಿ ಬರೋಬ್ಬರಿ 169 ಪ್ರಕರಣಗಳನ್ನು ಹಿಂಪಡೆದಿದೆ. ಆ ಎಲ್ಲ ಪ್ರಕರಣಗಳಲ್ಲಿಯೂ ಬಿಜೆಪಿ, ಆರ್‌ಎಸ್‌ಎಸ್‌, ಬಜರಂಗದಳದಂತಹ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರೇ ಆರೋಪಿಗಳಾಗಿದ್ದರು. ಬಿಜೆಪಿ ಸರ್ಕಾರ ಹಿಂಪಡೆದ 169 ಪ್ರಕರಣಗಳ ಪೈಕಿ ಒಂದೇ ಒಂದು ಪ್ರಕರಣವೂ ಜನಪರ ಹೋರಾಟಗಳಿಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಬಿಜೆಪಿಯ ಹಿಂದುತ್ವ ಅಜೆಂಡಾಗಳ ಮೇಲೆ ನಡೆದ ಕೋಮು ಗಲಾಟೆಗಳಿಗೆ ಸಂಬಂಧಿಸಿದವು.

ಅದರಲ್ಲಿಯೂ ಮುಖ್ಯವಾಗಿ, 2020ರಲ್ಲಿ 122 ಪ್ರಕರಣಗಳನ್ನು ಹಿಂಪಡೆದುಕೊಂಡಿದೆ. ಆ ಪೈಕಿ, ಪರೇಶ್ ಮೆಸ್ತಾ ಸಾವಿನ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹಿಂದುತ್ವವಾದಿಗಳು ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದ 36 ಪ್ರಕರಣಗಳು ಹಾಗೂ ಶಿವಮೊಗ್ಗದಲ್ಲಿ ಯುವತಿ ನಂದಿತಾ ಸಾವಿನ ವಿರುದ್ಧ ಇದೇ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ನಡೆಸಿದ ಪ್ರತಿಭಟನೆ, ಗಲಾಟೆ, ಗಲಭೆಗೆ ಸಂಬಂಧಿಸಿದ 31 ಪ್ರಕರಣಗಳು ಸೇರಿವೆ.

2017ರಲ್ಲಿ ಪರೇಶ್‌ ಮೆಸ್ತಾ ಹತ್ಯೆಯಾಗಿತ್ತು. ಆ ಹತ್ಯೆಯನ್ನು ಖಂಡಿಸಿ ಹಿಂದುತ್ವವಾದಿಗಳು ಶಿರಸಿ ಬಂದ್‌ಗೆ ಕರೆಕೊಟ್ಟಿದ್ದರು. ಆ ವೇಳೆ, ಅಲ್ಪಸಂಖ್ಯಾತರ ಅಂಗಡಿಗಳು, ವಾಹನಗಳನ್ನು ಸುಟ್ಟು ಹಾಕಿದ್ದರು. ಹಿಂದುತ್ವ ಕೋಮು ಕಾರ್ಯಕರ್ತರ ದಾಂಧಲೆ ವಿರುದ್ಧ ಪೊಲೀಸರು ಐಪಿಸಿಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ 30ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದರು. ಆ ಎಲ್ಲ ಪ್ರಕರಣಗಳನ್ನೂ ಬಿಜೆಪಿ ಸರ್ಕಾರ 2020ರಲ್ಲಿ ಹಿಂಪಡೆದುಕೊಂಡಿತು.

ಮಾತ್ರವಲ್ಲದೆ, ಚಿತ್ರದುರ್ಗ, ಮಂಡ್ಯ, ಶ್ರೀರಂಗಪಟ್ಟಣ, ಅರಸೀಕೆರೆ ಹಾಗೂ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರೋಧಿ, ಟಿಪ್ಪುವನ್ನು ಅವಮಾನಿಸಿ ಹಿಂದುತ್ವವಾದಿಗಳು ಗಲಾಟೆ, ಗಲಭೆ ನಡೆಸಿದ್ದರು. ಟಿಪ್ಪು ವಿಚಾರವಾಗಿ ನಡೆದ ಹಿಂಸಾಚಾರ, ದಾಂಧಲೆ, ಗಲಾಟೆಗಳ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಆ ಎಲ್ಲ ಪ್ರಕರಣಗಳನ್ನು ಬಿಜೆಪಿ ಸರ್ಕಾರ 2020ರಲ್ಲಿಯೇ ಹಿಂಪಡೆದುಕೊಂಡಿದೆ.

ಈ ವರದಿ ಓದಿದ್ದೀರಾ?: ಕರ್ನಾಟಕಕ್ಕೆ ಮೋದಿ ಮೋಸ; ತೆರಿಗೆ ಹಂಚಿಕೆಯಲ್ಲಿ ಮತ್ತೆ ತಾರತಮ್ಯ

ಗಣಪತಿ ವಿಸರ್ಜನೆ ವೇಳೆ ದಾಂಧಲೆ, ಮುಸ್ಲಿಂ ಸಮುದಾಯ ಮತ್ತು ಪ್ರವಾದಿ ಮುಹಮ್ಮದ್ ಅವರಿಗೆ ಅಪಮಾನ, ಈದ್‌ ಮಿಲಾದ್ ವೇಳೆ ಘರ್ಷಣೆ ಹಾಗೂ ಹನುಮ ಜಯಂತಿ ವೇಳೆ ಹಿಂದುತ್ವವಾದಿಗಳು ಗಲಭೆಗಳನ್ನು ಸೃಷ್ಟಿಸಿದ್ದು, ಹಲವು ಪ್ರಕರಣಗಳು ದಾಖಲಾಗಿದ್ದವು. ಆ ಎಲ್ಲ ಪ್ರಕರಣಗಳನ್ನೂ ಬಿಜೆಪಿ ಸರ್ಕಾರ ಹಿಂಪಡೆದುಕೊಂಡಿದೆ.

ಇನ್ನು, 2022ರಲ್ಲಿಯೂ ಸಂಘಪರಿವಾರಕ್ಕೆ ಸಂಬಂಧಿಸಿದವರ ವಿರುದ್ಧ ದಾಖಲಾಗಿದ್ದ 26 ಪ್ರಕರಣಗಳು ಹಾಗೂ 2023ರಲ್ಲಿ 20 ಪ್ರಕರಣಗಳನ್ನು ಬಿಜೆಪಿ ಹಿಂಪಡೆದುಕೊಂಡಿದೆ.

ಮೂರು ವರ್ಷದಲ್ಲಿ ಬಿಜೆಪಿ ಹಿಂಪಡೆದ ಎಲ್ಲ 169 ಪ್ರಕರಣಗಳೂ ಸಂಘಪರಿವಾರದ ಕಾರ್ಯಕರ್ತರು, ಮುಖಂಡರ ವಿರುದ್ಧ ದಾಖಲಾಗಿದ್ದ ಪ್ರಕರಣಗಳೇ ಆಗಿವೆ. ಅದರಲ್ಲೂ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಜೆ.ಸಿ ಮಾಧುಸ್ವಾಮಿ, ಸಿ.ಟಿ ರವಿ, ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ, ಬಿ.ಸಿ ಪಾಟೀಲ್ ಮತ್ತು ಮಾಜಿ ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್ ಹಾಗೂ ಬಿಜೆಪಿ ಶಾಸಕ ಆಲಪ್ಪ ಆಚಾರ್, ರೇಣುಕಾಚಾರ್ಯ ಸೇರಿದಂತೆ ಇತರೆ ಬಿಜೆಪಿ ನಾಯಕರು ಆರೋಪಿಗಳಾಗಿದ್ದ ಪ್ರಕರಣಗಳೂ ಇವೆ.

ಇದಲ್ಲದೆ, 2019-20ರ ನಡುವೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಒಂದೇ ವರ್ಷದಲ್ಲಿ ಬರೋಬ್ಬರಿ 385 ಕ್ರಿಮಿನಲ್ ಪ್ರಕರಣಗಳನ್ನು ಬಿಜೆಪಿ ಸರ್ಕಾರ ಹಿಂಪಡೆದಿದೆ. ಅದರಲ್ಲಿ, 182 ಪ್ರಕರಣಗಳು ಕೋಮು ಸಂಘರ್ಷ, ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಸಂಘಪರಿವಾರದ ವಿರುದ್ಧವೇ ದಾಖಲಾಗಿದ್ದ ಪ್ರಕರಣಗಳು. ಈ 385 ಪ್ರಕರಣಗಳಲ್ಲಿ ಒಟ್ಟು ಸುಮಾರು 2,000 ಆರೋಪಿಗಳಿದ್ದರು. ಅವರಲ್ಲಿ, 1,000 ಆರೋಪಿಗಳು ಕೋಮು ಸಂಘರ್ಷದಲ್ಲಿ ಭಾಗಿಯಾಗಿದ್ದವರು.

ಯಡಿಯೂರಪ್ಪ-ಬೊಮ್ಮಾಯಿ ಸರ್ಕಾರದಲ್ಲಿ ಒಟ್ಟು 554 ಪ್ರಕರಣಗಳನ್ನು ಹಿಂಪಡೆದುಕೊಂಡಿವೆ. ಆದರೆ, ಇವುಗಳಲ್ಲಿ ಎಣಿಕೆಗಾದರೂ ಒಂದೇ ಒಂದು ಪ್ರಕರಣ ಕೂಡ ಜನಪರ ಪ್ರತಿಭಟನೆ, ಹೋರಾಟಗಳ ಕಾರಣಕ್ಕೆ ದಾಖಲಾದ ಪ್ರಕರಣಗಳಲ್ಲ. ಜನಪರ ಹೋರಾಟಗಳಿಗಾಗಿ ದಾಖಲಾದ ಯಾವುದೇ ಪ್ರಕರಣವನ್ನೂ ಬಿಜೆಪಿ ಸರ್ಕಾರ ಹಿಂಪಡೆದುಕೊಂಡಿರಲಿಲ್ಲ.

ಇದೀಗ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಒಟ್ಟು 43 ಪ್ರಕರಣಗಳನ್ನು ಹಿಂಪಡೆದುಕೊಂಡಿದೆ. ಅವುಗಳಲ್ಲಿ ಹೆಚ್ಚಿನವು ರೈತಪರ, ಮಹಿಳಾಪರ, ದಲಿತಪರ – ಮುಖ್ಯವಾಗಿ ಜನಪರ ಹೋರಾಟಗಳ ಕಾರಣಕ್ಕೆ ದಾಖಲಾಗಿದ್ದ ಪ್ರಕರಣಗಳೇ ಆಗಿವೆ.

ಇನ್ನು, ಹಳೇ ಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ʼʼಹೋರಾಟ ಮಾಡಿದಾಗ ಕೇಸ್ ಹಾಕಿದ್ದರೆ ವಾಪಸ್ ತೆಗೆದುಕೊಳ್ಳುವ ಅವಕಾಶವಿದೆ. ಎಲ್ಲರ ಕಾಲದಲ್ಲೂ ಪ್ರಕರಣ ವಾಪಸ್ ಪಡೆದ ಉದಾಹರಣೆಗಳಿವೆ. ಹಳೇ ಹುಬ್ಬಳ್ಳಿ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಆರೋಪಗಳನ್ನೂ ಮಾಡಲಾಗಿದೆ ಎಂಬ ಕಾರಣಕ್ಕೆ ಆ ಪ್ರಕರಣವನ್ನು ವಾಪಸ್ ಪಡೆದಿದ್ದೇವೆʼʼ ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X