ಸ್ಯಾಂಡಲ್‌ವುಡ್ ಸ್ಟಾರ್ ನಟ ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣಕ್ಕಾಗಿ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ನೂರಾರು ಮರಕ್ಕೆ ಕೊಡಲಿ ಏಟು ನೀಡಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಅಲ್ಲದೇ, ಮರ ಕಡಿದಿರುವ ಬೆಂಗಳೂರು ಪೀಣ್ಯ ಪ್ಲಾಂಟೇಷನ್ 1 ಮತ್ತು 2ರ ಪ್ರದೇಶಕ್ಕೆ ಮಂಗಳವಾರ ಖುದ್ದಾಗಿ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರ ಕಡಿದಿರುವ ಬಗ್ಗೆ ಸಿನಿಮಾ ತಂಡದವರನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಖಂಡ್ರೆ, “ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ” ಎಂದು ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರು ಪೀಣ್ಯ ಪ್ಲಾಂಟೇಷನ್ 1 ಮತ್ತು 2ರಲ್ಲಿ ಒಟ್ಟು 599 ಎಕರೆ ಮೀಸಲು ಅರಣ್ಯ ಎಂದು ಗೆಜೆಟ್ ಅಧಿಸೂಚನೆ ಆಗಿದ್ದು, ಇದನ್ನು 1960ರ ದಶಕದಲ್ಲಿ ಡಿನೋಟಿಫಿಕೇಷನ್ ಮಾಡದೆ ಕಾನೂನು ಬಾಹಿರವಾಗಿ ಎಚ್.ಎಂ.ಟಿ. ಸಂಸ್ಥೆಗೆ ದಾನ, ಮಂಜೂರು ಹೆಸರಲ್ಲಿ ಹಸ್ತಾಂತರಿಸಲಾಗಿರುತ್ತದೆ. ಸುಪ್ರೀಂಕೋರ್ಟ್ ‘Once a forest is always a forest unless de-notified’ ಎಂದು ಹೇಳಿದ್ದು, ಡಿ ನೋಟಿಫಿಕೇಷನ್ ಆಗದ ಎಚ್.ಎಂ.ಟಿ. ವಶದಲ್ಲಿರುವ ಭೂಮಿ ಅರಣ್ಯವೇ ಆಗಿರುತ್ತದೆ. ಜೊತೆಗೆ ತನ್ನ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಎಚ್.ಎಂ.ಟಿ. ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದು, ಇಲ್ಲಿ ಅರಣೇತರ ಚಟುವಟಿಕೆ ನಡೆಯುತ್ತಿರುತ್ತದೆ. ಈ ಅರಣ್ಯ ಪ್ರದೇಶದಲ್ಲಿ ಮರ ಗಿಡಗಳನ್ನು ಕಡಿದಿರುವುದು ಉಪಗ್ರಹ ಚಿತ್ರದಿಂದ ಗೋಚರಿಸುತ್ತಿದೆ ಎಂದು ತಿಳಿಸಿದ್ದಾರೆ.

ಎಚ್.ಎಂ.ಟಿ. ತನ್ನ ವಶದಲ್ಲಿರುವ ಅರಣ್ಯ ಭೂಮಿಯನ್ನು ಸಿನಿಮಾ ಚಿತ್ರೀಕರಣಕ್ಕೆ ಮತ್ತು ಖಾಲಿ ಜಾಗವನ್ನು ದಿನದ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿರುವುದನ್ನೂ ಗಮನಿಸಿದ್ದೇನೆ. ಇನ್ನು ಕೆನರಾ ಬ್ಯಾಂಕ್ ಗೆ ಎಚ್.ಎಂ.ಟಿ. ಮಾರಾಟ ಮಾಡಿದೆ ಎನ್ನಲಾದ ಅರಣ್ಯ ಭೂಮಿಯಲ್ಲಿ ಟಾಕ್ಸಿಕ್’ ಎಂಬ ಹೆಸರಿನ ಚಲನಚಿತ್ರಕ್ಕಾಗಿ ಹಲವು ತಿಂಗಳಿನಿಂದ ಚಿತ್ರೀಕರಣ ನಡೆಯುತ್ತಿದ್ದು, ಬೃಹತ್ ಸೆಟ್ ಹಾಕಲಾಗಿದೆ. ಇದಕ್ಕಾಗಿ ಇಲ್ಲಿದ್ದ ನೂರಾರು ಮರ -ಗಿಡ ಕಡಿಯಲಾಗಿದೆ. ನಿಯಮಾನುಸಾರ ಅನುಮತಿ ಇಲ್ಲದೆ ಇಲ್ಲದೆ ಮರ ಕಡಿಯುವುದು ಅದರಲ್ಲೂ ಅರಣ್ಯ ಭೂಮಿಯಲ್ಲಿ ಮರ ಗಿಡಗಳ ಅಕ್ರಮ ಕಡಿತಲೆ ದಂಡನೀಯ ಅಪರಾಧ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಹಿಂದಿನ ಮತ್ತು ಇಂದಿನ ಉಪಗ್ರಹ ಚಿತ್ರಗಳನ್ನು ಪಡೆದು, ಎಷ್ಟು ಮರ ಕಡಿಯಲಾಗಿದೆ? ಇದಕ್ಕೆ ನಿಯಮಾನುಸಾರ ಅನುಮತಿ ಪಡೆಯಲಾಗಿದೆಯೇ.. ಅನುಮತಿ ಕೊಟ್ಟಿದ್ದರೆ ಅರಣ್ಯ ಭೂಮಿಯಲ್ಲಿ ಮರ ಕಡಿತಲೆಗೆ ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು, ಅನುಮತಿ ಇಲ್ಲದೆ ಮರ ಕಡಿತಲೆ ಮಾಡಿದ್ದಲ್ಲಿ ಅದಕ್ಕೆ ಕಾರಣರಾದ ಎಲ್ಲರ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
