ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದಕ್ಕೆ ವೈಯಕ್ತಿಕವಾಗಿ ನನ್ನ ವಿರೋಧವಿದೆ ಎಂದು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇಪ್ಪತ್ತು ವರ್ಷದಿಂದ ಜೆಡಿಎಸ್ ಜೊತೆ ನಾನು ಸೆಣಸಾಟ ನಡೆಸಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಜೊತೆ ಮೈತ್ರಿ ನೋಡಿದ್ದೇನೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ” ಎಂದು ಹೇಳಿದ್ದಾರೆ.
“ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕೃತವಾಗಿ ಘೋಷಣೆಯಾದ ಮೇಲೆ ನನ್ನ ಮುಂದಿನ ನಿರ್ಧಾರ ಮಾಡುತ್ತೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗಳಿಗೆ ಮತ ಹಾಕಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಅದೇ ಆಗುತ್ತದೆ” ಎಂದು ಹೇಳಿದ್ದಾರೆ.