“ಬಾಬರಿ ಮಸೀದಿ ಬೀಳಿಸಿದಾಗ ನಾನೂ ಹೋಗಿದ್ದೆ. ಟೆಂಟ್‌ನೊಳಗೆ ಗೊಂಬೆ ಇಟ್ಟು ರಾಮ ಅಂದಿದ್ರು” ಎಂದಿರುವ ತನ್ನ ಹೇಳಿಕೆಯ ಬಗ್ಗೆ ಗಟ್ಟಿಯಾಗಿ ನಿಂತಿರುವ ಸಚಿವ ಕೆ ಎನ್ ರಾಜಣ್ಣ, “ರಾಮನ ವಿಚಾರವಾಗಿ ನನ್ನ ಹೇಳಿಕೆಗೆ ನಾನು ಬದ್ಧ. ಆ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಹಿಂದೆ ರಾಮನ ಕುರಿತು ವೇದಿಕೆಯೊಂದರಲ್ಲಿ ನೀಡಿದ್ದ ಹೇಳಿಕೆಗೆ ನಾನು ಬದ್ಧ. 90ರ ದಶಕದಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದಾಗ, ಭೇಟಿ ಕೊಟ್ಟಾಗ ನಾನು ಕಂಡ ಚಿತ್ರಣವನ್ನು ಅವತ್ತು ಹೇಳಿಕೊಂಡಿದ್ದೇನೆ ಅಷ್ಟೇ. ಬೊಂಬೆಯನ್ನ ದೇವರು ಅಂತಾ ಹೇಳಿದ್ರೆ ಏನು ತಪ್ಪು? ಬೊಂಬೆಯಲ್ಲಿ ದೈವತ್ವ ಇರೋದಿಲ್ಲವೇ? ಅಯೋಧ್ಯೆಗೆ ಭೇಟಿ ನೀಡಿದಾಗ ನನಗೆ ಕಂಡಿದ್ದನ್ನು, ನನ್ನ ಅನಿಸಿಕೆಯನ್ನು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ನಾನು ಹೇಳಿದ ರೀತಿಯಲ್ಲಿ ಇರಲಿಲ್ಲ ಎಂಬುದನ್ನು ಬಿಜೆಪಿಯವರು ತಿಳಿಸಲಿ” ಎಂದು ಹೇಳಿದರು.
“ಬೊಂಬೆ ಅನ್ನೋ ಕಾರಣಕ್ಕೆ ಬಿಜೆಪಿಯವರು ತಿರಸ್ಕಾರ ಮನೋಭಾವದಿಂದ ಮಾತನಾಡುತ್ತಿದ್ದಾರಲ್ಲ, ಅದು ಸರೀನಾ? ಅವತ್ತಿನ ವಾತಾವರಣ ಟೂರಿಂಗ್ ಟಾಕೀಸ್ ರೀತಿಯೇ ಇತ್ತು. ಅದನ್ನ ಬಿಟ್ಟು ದೇವರನ್ನೇ ಟೂರಿಂಗ್ ಟಾಕೀಸ್ ಅಂದಿಲ್ಲ. ಹೊಲದಲ್ಲಿ ಸಗಣಿ ಮೂರ್ತಿ ಮಾಡಿ ಗರಿಕೆ ಹುಲ್ಲು ಇಟ್ಟು ಪೂಜೆ ಮಾಡುತ್ತೇವೆ. ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡುತ್ತಾರೆ. ಅದು ನಮ್ಮ ನಂಬಿಕೆ. ಅದನ್ನು ಗೌರವಿಸುತ್ತೇನೆ” ಎಂದು ತಮ್ಮ ಹೇಳಿಕೆಯ ಬಗ್ಗೆ ಉಂಟಾದದ ವಿವಾದದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯವರು ಟೀಕಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಬಿಜೆಪಿಯವರು ನನಗೆ ರಾವಣ ಎಂದಿದ್ದಾರೆ. ನನಗೆ ಬೇಜಾರಿಲ್ಲ, ರಾವಣ ಎಂದು ಅನಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ರಾವಣನಂತ ದೈವ ಭಕ್ತ ಯಾರೂ ಇರಲಿಲ್ಲ. ಇವರೆಲ್ಲ ಡೋಂಗಿ ದೈವ ಭಕ್ತರು. ಹಿಂದೆ ತಮಿಳುನಾಡಿನ ಅಣ್ಣಾದೊರೈ ರಾಮಾಯಣಕ್ಕೆ ಬದಲಾಗಿ ರಾವಣಾಯಣ ನಾಟಕ ಆಡಿದ್ದರು. ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡೋದಿಲ್ಲ. ಆತನ ತಂಗಿಯನ್ನು ಕಳುಹಿಸಿ, ಮನವೊಲಿಸಲು ಯತ್ನಿಸಿದ್ದ. ಇದು ರಾವಣನ ದೊಡ್ಡ ಗುಣ. ಆತ ಶಿವನ ಭಕ್ತನಾಗಿದ್ದ” ಎಂದರು.
ಇದನ್ನು ಓದಿದ್ದೀರಾ? ಒಳ ಮೀಸಲಾತಿ | ಹೊಣೆ ಕೇಂದ್ರದ ಹೆಗಲಿಗೆ ಹಾಕಿ ರಾಜ್ಯ ಸರ್ಕಾರದಿಂದ ರಾಜಕೀಯ: ದೇವೇಗೌಡ ಆರೋಪ
“ನಾನು ರಾಮ ಮತ್ತು ರಾವಣ ಇಬ್ಬರ ಪರನೂ ಇದ್ದೇನೆ. ನನ್ನ ಹೇಳಿಕೆಯನ್ನ ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ನನ್ನ ಹೇಳಿಕೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ. ನಾನು ಏನೆಲ್ಲ ಹೇಳಿಕೆ ಕೊಟ್ಟಿದ್ದೇನೋ ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ” ಎಂದು ಮತ್ತೊಮ್ಮೆ ಸಚಿವ ಕೆ ಎನ್ ರಾಜಣ್ಣ ಸ್ಪಷ್ಟಪಡಿಸಿದರು.
ರಾವಣನ ಬಗ್ಗೆ ಸಚಿವರ ನಿಲುವು ಸತ್ಯವಾದುದು,, ಢೋಂಗಿ ದೇಶಭಕ್ತರು, ನಕಲಿ ರಾಷ್ಟ್ರವಾದಿಗಳಿಗೆ ಸರಿಯಾಗಿ ತಿರುಗಿಸಿದ್ದಾರೆ