ದೆಹಲಿ ವಿಧಾನಸಭೆ ಚುನಾವಣೆಗೆ ಹತ್ತು ದಿನಗಳಿಗಿಂತ ಕಡಿಮೆ ಅವಧಿ ಇರುವಾಗ ನಿನ್ನೆ ಎಎಪಿ ತನ್ನ 15 ಗ್ಯಾರಂಟಿಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದಾದ ಬಳಿಕ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಕೇಜ್ರಿವಾಲ್ ತನ್ನ ಜಾತಿಯನ್ನು ಒತ್ತಿ ಹೇಳಿದರು. “ನಾನು ಬನಿಯಾ, ನಾನು ಭರವಸೆ ನೀಡಿದ ಯೋಜನೆಗಳಿಗೆ ಹಣವನ್ನು ಹೇಗೆ ಹೊಂದಿಸಬೇಕು ಎಂದು ನನಗೆ ತಿಳಿದಿದೆ” ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ ಪಾಲಂ, ಮಟಿಯಾಲ ಮತ್ತು ಬಿಜ್ವಾಸನ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಸಭೆಗಳಲ್ಲಿ ಕೇಜ್ರಿವಾಲ್ ಎಎಪಿ ಆಡಳಿತ ಮಾದರಿಯ ಬಗ್ಗೆ ಮಾತನಾಡಿದರು. ಹಾಗೆಯೇ ಉಚಿತ ವಿದ್ಯುತ್, ನೀರು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಕಲ್ಯಾಣ ಯೋಜನೆಗಳ ಕುರಿತು ಪ್ರಶ್ನೆಗಳು ಮತ್ತು ಟೀಕೆಗಳಿಗೆ ಉತ್ತರಿಸಿದರು.
ಇದನ್ನು ಓದಿದ್ದೀರಾ? ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಯತ್ನ: ದೆಹಲಿ ಸಿಎಂ ಗಂಭೀರ ಆರೋಪ
ಹಾಗೆಯೇ ಎಎಪಿ ವಿಧಾನವನ್ನು ಬಿಜೆಪಿಯೊಂದಿಗೆ ಹೋಲಿಸಿದ ಕೇಜ್ರಿವಾಲ್, “ಎಎಪಿ ಸಾಮಾನ್ಯ ಜನರಿಗಾಗಿ ಇರುವ ಪಕ್ಷವಾಗಿದೆ, ಆದರೆ ಬಿಜೆಪಿ ಶ್ರೀಮಂತರಿಗಾಗಿ ಇರುವ ಪಕ್ಷವಾಗಿದೆ” ಎಂದಿದ್ದಾರೆ.
“ಬಿಜೆಪಿ ಅಧಿಕಾರಕ್ಕೆ ಬಂದರೆ ಎಎಪಿಯ ಕಲ್ಯಾಣ ಯೋಜನೆಗಳನ್ನು ಸ್ಥಗಿತಗೊಳಿಸುವ ಉದ್ದೇಶವನ್ನು ಹೊಂದಿದೆ. ಸರ್ಕಾರಿ ಶಾಲೆಗಳು, ವಿದ್ಯುತ್ ಮತ್ತು ಬಸ್ ಪ್ರಯಾಣದಂತಹ ಉಚಿತ ಸೌಲಭ್ಯಗಳನ್ನು ಮುಚ್ಚುವುದಾಗಿ ಬಿಜೆಪಿ ಹೇಳಿದೆ. ಶಾಲೆಗಳನ್ನು ನಿರ್ಮಿಸುವ ಎಎಪಿ ಬೇಕೋ ಅಥವಾ ಅವುಗಳನ್ನು ಮುಚ್ಚುವ ಬಿಜೆಪಿ ಬೇಕೋ ಎಂಬುದನ್ನು ನಿರ್ಧರಿಸುವುದು ನಿಮಗೆ ಬಿಟ್ಟದ್ದು” ಎಂದು ಜನರಿಗೆ ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ಎಂದಿಗೂ ಅತಿಯಾದ ಆತ್ಮವಿಶ್ವಾಸ ಇರಬಾರದು: ಅರವಿಂದ್ ಕೇಜ್ರಿವಾಲ್
ಎಎಪಿ ಆಡಳಿತ ಮಾದರಿಯ ಬಗ್ಗೆ ವಿವರಿಸಿದ ಕೇಜ್ರಿವಾಲ್, ದೆಹಲಿಯ ಪ್ರತಿ ಮನೆಗೆ ತಿಂಗಳಿಗೆ 25,000 ರೂ. ಮೌಲ್ಯದ ನೇರ ಪ್ರಯೋಜನಗಳನ್ನು ಒದಗಿಸಲಾಗುವುದು. ಆದರೆ ಬಿಜೆಪಿ ಸಾರ್ವಜನಿಕ ನಿಧಿಯನ್ನು ಬಳಸಿಕೊಂಡು ತನ್ನ ‘ಶ್ರೀಮಂತ ಸ್ನೇಹಿತರ’ ಸಾಲವನ್ನು ಮನ್ನಾ ಮಾಡುತ್ತದೆ ಎಂದು ಆರೋಪಿಸಿದರು.
ದೆಹಲಿ ವಿಧಾನಸಭೆ ಚುನಾವಣೆ ಫೆಬ್ರವರಿ 5ರಂದು ನಡೆಯಲಿದ್ದು, ಫಲಿತಾಂಶ ಫೆಬ್ರವರಿ 8ರಂದು ಪ್ರಕಟವಾಗಲಿದೆ. ಎಎಪಿ ಸತತ ಮೂರನೇ ಅವಧಿಗೆ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದೆ, ಆದರೆ ಬಿಜೆಪಿ 25 ವರ್ಷಗಳ ನಂತರ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ.
