ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಯನ್ನು ನನಗೆ ನೀಡುವ ಬಗ್ಗೆ ಮಾಹಿತಿ ಇಲ್ಲ. ನಾನು ಕೇಂದ್ರದಲ್ಲಿ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಶೋಭಾ ಕರಂದ್ಲಾಜೆ ಅವರ ಹೆಸರೂ ಕೂಡ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಬಗ್ಗೆ ಚರ್ಚೆಗಳು ನಡೆದಿಲ್ಲ. ಆ ಬಗ್ಗೆ ನನಗೆ ಮಾಹಿತಿಯೂ ಇಲ್ಲ. ನಾನು ಕೇಂದ್ರದಲ್ಲಿ ಕೃಷಿ ಸಚಿವೆಯಾಗಿದ್ದೇನೆ. ಆ ಸ್ಥಾನದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ಧೇನೆ. ಅದರೊಂದಿಗೆ ನಾನು ಖುಷಿಯಾಗಿದ್ದೇನೆ” ಎಂದು ಹೇಳಿದ್ದಾರೆ.
“ನನಗೆ ಹೈಕಮಾಂಡ್‌ನಿಂದ ಯಾವುದೇ ಸೂಚನೆ ಬಂದಿಲ್ಲ. ನಾನು ರಾಜ್ಯಾಧ್ಯಕ್ಷೆಯಾಗುತ್ತೇನೆ ಎಂಬ ಸುದ್ದಿಗಳು ಹೇಗೆ ಬರುತ್ತಿವೆಯೋ ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ದಸರಾ ಮಹೋತ್ಸವದ ಕೇಂದ್ರಬಿಂದುವಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಜೊತೆಗಿರುವ ಮಾವುತರು ಮತ್ತು ಕಾವಾಡಿಗರಿಗೆ ಕರಂದ್ಲಾಜೆ ಅವರು ಇಂದು ಉಪಾಹಾರ ವ್ಯವಸ್ಥೆ ಮಾಡಿದ್ದರು. ಎಲ್ಲರಿಗೂ ಹೋಳಿಗೆ ಬಡಿಸಿದ್ದರು.