ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ವೇಳೆ ಬಿಜೆಪಿಗರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬಿಜೆಪಿ ಪ್ರತಿಭಟನೆಗೆ ನಾವು ಹೆದರುವುದಿಲ್ಲ. ನಾನಿನ್ನು ಸತ್ತಿಲ್ಲ, ಬದುಕಿದ್ದೇನೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳಾಗಿದ್ದು, ಡಿಸೆಂಬರ್ 27ರಂದು ಶತಮಾನೋತ್ಸವ ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ತಯಾರಿ ಮಾಡುತ್ತಿದೆ. ಸಿದ್ದತೆಗಳ ಬಗ್ಗೆ ಅವಲೋಕನ ನಡೆಸಿರುವ ಡಿ.ಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಗಾಂಧೀಜಿ ಅವರನ್ನು ದಿನನಿತ್ಯ ನೆನೆಯಬೇಕೆಂಬ ಕಾರಣಕ್ಕೆ ಅವರ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಣ ಮಾಡಲಾಗುತ್ತಿದೆ. ಅವರ ಸ್ಮರಣೆಗಾಗಿ ನಡೆಯುವ ಕಾರ್ಯಕ್ರಮದ ವೇಳೆ ಪ್ರತಿಭಟನೆ ಮಾಡುತ್ತೇವೆ ಎಂದರೆ, ನಾವು ಹೆದರುವುದಿಲ್ಲ” ಎಂದು ಹೇಳಿದ್ದಾರೆ.
“ಬಿಜೆಪಿಗರು ಸಿ.ಟಿ ರವಿ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಮಹಿಳೆಯರ ಬಗ್ಗೆ ಅವರ ಆಡಿರುವ ಮಾತುಗಳನ್ನು ಬಿಜೆಪಿಗರು ಪ್ರಶ್ನಿಸುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಬೇಕು” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಅದಾನಿ ಸೋಲಾರ್ ಒಪ್ಪಂದದ ಹಿಂದಿದೆ ಕೇಂದ್ರ-ಆಂಧ್ರ ಸರ್ಕಾರಗಳ ಚಮತ್ಕಾರ
ಸಿ.ಟಿ ರವಿ ಅವರನ್ನು ಫೇಕ್ ಎನ್‌ಕೌಂಟರ್ ಮಾಡಲು ಹುನ್ನಾರ ನಡೆದಿತ್ತು ಎಂದು ಪ್ರಹ್ಲಾದ್ ಜೋಶಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, “ಜೋಶಿ ಅವರ ಆರೋಪಕ್ಕೆ ಗೃಹಸಚಿವರು, ಪೊಲೀಸರು ಉತ್ತರ ನೀಡುತ್ತಾರೆ” ಎಂದಿದ್ದಾರೆ.