- ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ
- ಈಗ ನಿಮ್ಮದೆ ಸರ್ಕಾರ ಇದೆ, 40 ಪರ್ಸೆಂಟ್ ನಿಜಾಂಶ ಹೊರಗೆ ತನ್ನಿ
ನನಗೆ ರಾಜಕಾರಣದಲ್ಲಿ ಒಲವಿಲ್ಲ. ಸಿಎಂ ಸ್ಥಾನದಿಂದ ಕೆಳಗೆ ಇಳಿದಾಗಲೇ ತೀರ್ಮಾನ ಮಾಡಬೇಕು ಎಂದುಕೊಂಡಿದ್ದೆ. ಆದ್ರೆ, ಕಾರ್ಯಕರ್ತರಿಗೋಸ್ಕರ ಇದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ನಿಲ್ಲುವ ನಿರ್ಧಾರವಾಗಿಲ್ಲ. ಜಿಲ್ಲಾವಾರು ಜೆಡಿಎಸ್ ಮುಖಂಡರ ಸಭೆ ಮಾಡಿದ್ದೇನೆ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಮುಖಂಡರು ಹೇಳಿದ್ದಾರೆ. ಏನು ಮಾಡಬೇಕು ಎಂಬುದನ್ನ ಆ ಸಂದರ್ಭದಲ್ಲಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿನ ವಿಷಯಕ್ಕೆ ಸ್ಪಷ್ಟೀಕರಣ ನೀಡಿದ ಕುಮಾರಸ್ವಾಮಿ ಸದ್ಯಕ್ಕೆ ಅಂತಹ ಯಾವುದೇ ಮಾತುಕತೆ ಆಗಿಲ್ಲ. ಅಂತಹ ಸಂದರ್ಭ ಬಂದಾಗ ನಿರ್ಧಾರ ಮಾಡೋಣ ಎಂದರು.
ಇನ್ನು ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ “ನನಗೆ ರಾಜಕಾರಣದಲ್ಲಿ ಒಲವಿಲ್ಲ. ಸಿಎಂ ಸ್ಥಾನದಿಂದ ಕೆಳಗೆ ಇಳಿದಾಗಲೇ ತೀರ್ಮಾನ ಮಾಡಬೇಕು ಎಂದುಕೊಂಡಿದ್ದೆ. ಆದ್ರೆ, ಕಾರ್ಯಕರ್ತರಿಗೋಸ್ಕರ ಇದ್ದೇನೆ”ಎನ್ನುವ ಮೂಲಕ ರಾಜಕೀಯ ನಿವೃತಿ ಸುಳಿವು ನೀಡಿದರು.
ಚುನಾವಣಾ ರಾಜಕಾರಣದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಈಗಿನ ಚುನಾವಣಾ ರಾಜಕಾರಣವೇ ಭಯ ಹುಟ್ಟಿಸುತ್ತಿದೆ. ಯಾಕೆಂದರೆ ಭ್ರಷ್ಟಾಚಾರ ಅಷ್ಟರಮಟ್ಟಿಗಿದೆ. ನನ್ನದು ಬಿಡಿ, ಇದೀಗ ಸಂಸದ ಡಿ ಕೆ ಸುರೇಶ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅವರೇ ರಾಜಕೀಯ ನಿವೃತ್ತಿ ಬಗ್ಗೆ ಯೋಚನೆ ಮಾಡಬೇಕಾದರೇ ನನ್ನಂತವನ ಪರಿಸ್ಥಿತಿ ಏನು ಎಂದರು.
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಜಾರಿ ವಿಚಾರವಾಗಿ ಮಾತನಾಡಿದ ಅವರು, ಈ ಯೋಜನೆಗಳ ಬಗ್ಗೆ ಚರ್ಚೆ ಮಾಡುವುದು ಪ್ರೀ ಮೆಚ್ಯುರ್. ಚರ್ಚೆ ಮಾಡುವುದಕ್ಕೆ ಇನ್ನೂ ಸಮಯ ಇದೆ. ಸರ್ಕಾರಕ್ಕೆ ಯಾವುದೇ ಕಾರ್ಯಕ್ರಮ ಕೊಡಬೇಕಾದರೆ ಹಣ ಒದಗಿಸುವುದು ಕಷ್ಟವಲ್ಲ. ಆದರೆ ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ತಲಪಿಸುತ್ತಾರೆ ಎಂಬುದು ಮುಖ್ಯ ಎಂದು ಹೇಳಿದರು.
“ಗೃಹಜ್ಯೋತಿ” ಫಲಾನುಭವಿಗಳ ಆಯ್ಕೆ ಗೊಂದಲದ ಬಗ್ಗೆ ಬೆಳಕು ಚೆಲ್ಲಿದ ಹೆಚ್ ಡಿಕೆ, ಯೋಜನೆ ವಿಚಾರದಲ್ಲಿ ಬಾಡಿಗೆದಾರರು ಓನರ್ ಗಳ ನಡುವೆ ಈಗ ಗೊಂದಲವಾಗಿದೆ. ಓನರ್ ಗಳು ಅಗ್ರಿಮೆಂಟ್ ಪೇಪರ್ ಕೊಡಲು ತಯಾರಿಲ್ಲ. ಬಾಡಿಗೆಯವರು ಇದಕ್ಕೇನು ಮಾಡಬೇಕು? ಎಂದ ಅವರು, ಯೋಜನೆ ಘೋಷಣೆ ಮಾಡಿದಾಗ ನನಗೂ 200, ನಿನಗೂ 200 ಎಂದು ಹೇಳಿದವರು ಈಗ ಏನು ಹೇಳುತ್ತಿದ್ದಾರೆ? ಅವತ್ತು ಪರಿಜ್ಞಾನ ಎಲ್ಲಿತ್ತು ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ?: ಗೃಹಜ್ಯೋತಿ ಯೋಜನೆ | ಹೊಸ ಮನೆಗೆ ಇನ್ನೂರಲ್ಲ 58 ಯೂನಿಟ್ ಫ್ರೀ: ಸಚಿವ ಜಾರ್ಜ್
40 ಕಮಿಷನ್ ಬಗ್ಗೆ ರಾಜ್ಯಾದ್ಯಂತ ಗುತ್ತಿಗೆದಾರರು ಹುಯಿಲೆಬ್ಬಿಸಿದರು. ಅವರ ಬಳಿಯೇ 5 ಪರ್ಸೆಂಟ್ ತಂದುಕೊಡಿ ಎಂದು ಯಾರು ಕೇಳುತ್ತಿದ್ದಾರೆ ಎನ್ನುವ ಸತ್ಯವನ್ನು ಈಗ ಹೇಳಬೇಕು. 40 ಪರ್ಸೆಂಟ್ ಎಂದು ಡಂಗೂರ ಹೊಡೆದುಕೊಂಡು ಬಂದ ಇವರು, ಲೋಕಾಯುಕ್ತಕ್ಕೆ ದೂರು ಕೊಡಲಿಲ್ಲ ಎಂದು ಕುಮಾರಸ್ವಾಮಿ ಗುಡುಗಿದರು.
ಈಗ ನಿಮ್ಮದೆ ಸರ್ಕಾರ ಇದೆ. ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. 40 ಪರ್ಸೆಂಟ್ ಹೊರಗೆ ತನ್ನಿ. ಬಿಬಿಎಂಪಿ ಬಿಡುಗಡೆ ಮಾಡಿದ 675 ಕೋಟಿ ಎಲ್ ಒಸಿ ಅನ್ನು ಇನ್ನೂ ಯಾಕೆ ಬಿಡುಗಡೆ ಮಾಡಿಲ್ಲ. ಅದನ್ನ ಜನತೆ ಮುಂದೆ ಇಡಿ ಎಂದು ಕುಮಾರಸ್ವಾಮಿ ಹೇಳಿದರು.
ವಿದ್ಯುತ್ ದರ ಏರಿಕೆ ವಿಚಾರದಲ್ಲಿ ಕಿಡಿಕಾರಿದ ಕುಮಾರಸ್ವಾಮಿ, ಕರೆಂಟ್ ದರ ಏರಿಕೆ ಎರಡೂ ರಾಜಕೀಯ ಪಕ್ಷಗಳಿಂದಾಗಿದ್ದು, ನಾನು ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗಲೇ ಭವಿಷ್ಯದಲ್ಲಿನ ವಿದ್ಯುತ್ ದರ ಏರಿಕೆ ಪರಿಣಾಮ ಬಗ್ಗೆ ಎಚ್ಚರಿಕೆ ನೀಡಿದ್ದೆ ಎಂದರು.