ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ನೀಡುವುದಾಗಿ ತಿಳಿಸಿದ್ದಾರೆ.
ತಾವು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದು, ಇನ್ಮುಂದೆ ಪರಿಸರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಾಗಿ ಸ್ಷಷ್ಟಪಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಎ.ಟಿ.ರಾಮಸ್ವಾಮಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿ-ಜೆಡಿಎಸ್ ವಿಚಾರವಾಗಿ ಅಸಮಾಧಾನಗೊಂಡು ಬಿಜೆಪಿ ಕಾರ್ಯಚಟುವಟಿಕೆಗಳಿಂದಲೂ ದೂರ ಉಳಿದಿದ್ದರು. ಇದೀಗ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಏನಿದೆ?
“ವಿಶ್ವ ತಾಪಮಾನ ವಿಪರೀತ ಏರಿಕೆಯಿಂದಾಗಿ ಹವಾಮಾನದ ಅಸಮತೋಲನ ಉಂಟಾಗಿದೆ. ಇದರಿಂದ ನೆರೆ, ಬರ, ಚಂಡಮಾರುತ, ಭೂಕಂಪನಗಳು ಸೃಷ್ಟಿಯಾಗುತ್ತಿವೆ. ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ವಿಷಪೂರಿತವಾಗಿವೆ. ಬೆಟ್ಟ, ಗುಡ್ಡ, ಅರಣ್ಯಗಳ ನಾಶದಿಂದ ನದಿ, ತೊರೆಗಳೂ ಬತ್ತಿ ಹೋಗಿವೆ. ಅಂತರ್ಜಲ ಕುಸಿದಿದೆ. ಜೀವ ಸಂಕುಲಗಳಿಗೆ ಸಂಕಷ್ಟ ಬಂದೊದಗಿದೆ. ಈ ಹೊತ್ತಿನಲ್ಲಾದರೂ ನಾವು ಜನರಲ್ಲಿ ಜಾಗೃತಿ ಮೂಡಿಸಿ ಪರಿಸರ ಸಂರಕ್ಷಣೆ ಕಾರ್ಯ ಮಾಡಬೇಕಾಗಿದೆ. ಪರಿಸರ ಉಳಿದರೆ ಜೀವ ಸಂಕುಲಗಳೂ ಉಳಿಯುತ್ತವೆ. ಈ ಸನ್ನಿವೇಶದಲ್ಲಿ ರಾಜಕಾರಣಕ್ಕಿಂತ ಪರಿಸರ ಸಂರಕ್ಷಣೆ ಅತ್ಯಂತ ಮಹತ್ವವೆಂದು ಭಾವಿಸಿರುತ್ತೇನೆ. ನನ್ನ ಪೂರ್ಣ ಸಮಯವನ್ನು, ನನ್ನ ಬದುಕಿನ ಕೃಷಿಯ ಜೊತೆಗೆ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿರುತ್ತೇನೆ. ಈ ಬಗ್ಗೆ ಈಗಾಗಲೇ ನಾನು ದಿನಾಂಕ 11-04-2025ರಂದು ದೂರವಾಣಿ ಮೂಲಕ ತಮ್ಮ ಜೊತೆ ಮಾತನಾಡಿರುತ್ತೇನೆ. ಆದುದರಿಂದ ನಾನು ಭಾರತೀಯ ಜನತಾ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ತಾವೆಲ್ಲರೂ ತೋರಿದ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆಗಳು” ಎಂದು ಎ.ಟಿ.ರಾಮಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.
ರಾಜಕೀಯ ಹಿನ್ನೆಲೆ
ಎಂ.ಎಸ್ಸಿ(ಎಜಿ) ಓದಿ, ಕೃಷಿ ಕೆಲಸ ಮಾಡಿಕೊಂಡಿರುವ ರಾಮಸ್ವಾಮಿ ಅವರು ಮೂರು ಸಲ ಶಾಸಕರಾಗಿದ್ದಾರೆ. 90ರ ದಶಕದಲ್ಲಿ ಹಾಸನ ಜಿಲ್ಲೆ ದೇವೇಗೌಡ ಮತ್ತು ಜಿ.ಪುಟ್ಟಸ್ವಾಮಿಗೌಡರ ನಡುವಿನ ಜಿದ್ದಾಜಿದ್ದಿನ ರಾಜಕಾರಣದ ಅಖಾಡವಾಗಿತ್ತು. 1999ರಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎ.ಮಂಜು ಗೆದ್ದು ಶಾಸಕರಾದರೆ, ಕಾಂಗ್ರೆಸ್‌ನ ಎ.ಟಿ.ರಾಮ ಸ್ವಾಮಿ ಸೋತಿದ್ದರು. ಗೆದ್ದ ಮಂಜುರನ್ನು ಪುಟ್ಟಸ್ವಾಮಿಗೌಡರು ಕಾಂಗ್ರೆಸ್‌ಗೆ ಕರೆತಂದು ಬಲ ಹೆಚ್ಚಿಸಿಕೊಂಡರು. ಆಗಿನ ಸಿಎಂ ಎಸ್.ಎಂ. ಕೃಷ್ಣ ಕೂಡ ಕೈ ಜೋಡಿಸಿದರು. ಸೋತಿದ್ದ ರಾಮಸ್ವಾಮಿಗೆ ಶಾಕ್ ಆಗಿ, ವಿಧಿ ಇಲ್ಲದೆ ಜೆಡಿಎಸ್ ಸೇರಿದ್ದರು.
2004ರ ಚುನಾವಣೆಯಲ್ಲಿ, ರಾಮಸ್ವಾಮಿ ಜೆಡಿಎಸ್‌ನಿಂದ ಗೆದ್ದುಬಂದರು.
2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿದ್ದಾಗ ಬೆಂಗಳೂರು ಸುತ್ತಮುತ್ತ ಸರಕಾರಿ ಭೂ ಒತ್ತುವರಿ ಪ್ರಕರಣಗಳನ್ನು ಪತ್ತೆಹಚ್ಚಲು ಶಾಸಕ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಜಂಟಿ ಸದನ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಜಂಟಿ ಸದನ ಸಮಿತಿಗೆ 14 ಎಂಎಲ್‌ಎಗಳು, 6 ಎಂಎಲ್ಸಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ರಾಮಸ್ವಾಮಿಯವರು ಪ್ರಾಮಾಣಿಕತೆ, ದಕ್ಷತೆ, ನಿಷ್ಠುರತೆಯಿಂದ ಶ್ರಮವಹಿಸಿ ವರದಿ ತಯಾರಿಸಿದ್ದರು.
2007ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿ, ಬೆಂಗಳೂರು ಸುತ್ತಮುತ್ತ ಸುಮಾರು 40 ಸಾವಿರ ಕೋಟಿ ರೂ. ಮೌಲ್ಯದ 27 ಸಾವಿರ ಎಕರೆ ಕಂದಾಯ, ಅರಣ್ಯ, ಪಶು ಸಂಗೋಪನಾ ಇಲಾಖೆ ಸೇರಿದಂತೆ ಬಿಡಿಎ, ಬಿಬಿಎಂಪಿ ಹಾಗೂ ಕೆಎಚ್‌ಬಿಗೆ ಸಂಬಂಧಿಸಿದ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಎಲ್ಲಾ ಪಕ್ಷಗಳ ಪ್ರಭಾವಿ ರಾಜಕೀಯ ಮುಖಂಡರು ಭಾಗಿಯಾಗಿದ್ದಾರೆಂದು ವರದಿ ನೀಡಿ, ಭೂ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳ ಜತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಿ ಜೈಲಿಗೆ ಹಾಕಿಸಬೇಕು. ಸಾವಿರಾರು ಕೋಟಿ ರೂ. ಬೆಲೆಬಾಳುವ ಸಾರ್ವಜನಿಕರ ಸ್ವತ್ತಾದ ಸರಕಾರಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದ್ದನ್ನು ಗನಿಸಬಹುದು.
2008ರಲ್ಲಿ ಅಪ್ಪ-ಮಕ್ಕಳ ರಾಜಕಾರಣ ಅಸಹ್ಯ ಹುಟ್ಟಿಸಿ ದಿಗ್ಭ್ರಮೆಗೊಳಿಸಿದೆ ಎಂದು ಹೇಳುವ ಮೂಲಕ ಎ ಟಿ ರಾಮಸ್ವಾಮಿ ‘ರಾಜಕಾರಣ ನಮ್ಮಂತಹವರಿಗಲ್ಲ’ ಎಂದು ಹೇಳಿ ನಿವೃತ್ತಿ ಬಗ್ಗೆ ಮಾತನಾಡಿದ್ದರು. ಅವರ ಹೇಳಿಕೆ ದೊಡ್ಡ ಸುದ್ದಿಯಾಗಿತ್ತು. 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಾರೆ. 2018ರ ರಲ್ಲಿ ಮತ್ತೆ ಗೆಲುವು ಸಾಧಿಸುತ್ತಾರೆ. 2023ರಲ್ಲಿ ಅರಕಲಗೂಡಿನ ಮಾಜಿ ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಅವರು ಶನಿವಾರ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಅನುರಾಗ್ ಠಾಕೂರ್ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.