ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ನಾವು ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಣೆ ಮಾಡಲು ಮುಂದಾಗಿದ್ದೇವೆ. ನಿರಂತರವಾಗಿ ಎರಡು ಮೂರು ದಿನ ಚರ್ಚೆ ನಡೆಸಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ” ಎಂದು ಹೇಳಿದರು.
ಅಭ್ಯರ್ಥಿ ಯಾರಾಗುತ್ತಾರೆ ಎಂದು ಕೇಳಿದಾಗ, “ನಾಮಪತ್ರ ಸಲ್ಲಿಕೆಗೆ ಇನ್ನು 25ನೇ ತಾರೀಕಿನವರೆಗೂ ಸಮಯವಿದೆ. ಗೊತ್ತಾಗುತ್ತದೆ ಸ್ವಲ್ಪ ಕಾಯಿರಿ. ನನಗೆ ಜನ ವಿಶ್ರಾಂತಿ ನೀಡಿದ್ದು, ನಾನು ವಿಶ್ರಾಂತಿಯಲ್ಲಿದ್ದೇನೆ” ಎಂದು ತಿಳಿಸಿದರು.
ಸ್ಪರ್ಧಿಸಲು ಪಕ್ಷ ಒತ್ತಾಯ ಮಾಡಿದರೆ ಏನು ಮಾಡುತ್ತೀರಿ ಎಂದು ಕೇಳಿದಾಗ, “ನನ್ನ ಆಚಾರ, ವಿಚಾರ, ಅಭಿಪ್ರಾಯವನ್ನು ಪಕ್ಷಕ್ಕೆ ತಿಳಿಸಿದ್ದೇನೆ” ಎಂದರು.
ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಬಹುದೇ ಎಂದು ಕೇಳಿದಾಗ, “ಅವರಿಗೂ ನಮಗೂ ಸಂಬಂಧವಿಲ್ಲ. ಮೈತ್ರಿಕೂಟದಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ, ಯಾರು ಸಿಡಿದೇಳುತ್ತಾರೆ, ಅವರ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ನಾವು ನಮ್ಮ ಪಕ್ಷದ ಸಂಘಟನೆ, ನಮ್ಮ ಪಕ್ಷದ ಕಾರ್ಯಕ್ರಮ, ನಮ್ಮ ಕಾರ್ಯಕರ್ತರ ವಿಚಾರದ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇವೆ. ಕಳೆದ ಮೂರು ತಿಂಗಳಿಂದ ಉಪಮುಖ್ಯಮಂತ್ರಿಗಳು, ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿ ಚನ್ನಪಟ್ಟಣಕ್ಕೆ ಹೊಸ ದಿಕ್ಕು ನೀಡಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಚುನಾವಣೆ ಮಾಡುತ್ತೇವೆ” ಎಂದು ತಿಳಿಸಿದರು.
ಹಣಕಾಸು ವ್ಯವಹಾರವಾಗಿಲ್ಲವಾದರೆ ಇಡಿ ಪ್ರವೇಶ ಮಾಡಿದ್ದು ಹೇಗೆ ಎಂದು ಕೇಳಿದಾಗ, “ಲೋಕಾಯುಕ್ತ ತನಿಖೆಯಲ್ಲಿ ಸಂಶಯಾಸ್ಪದವಾಗಿ 120 ಬಿ ಸೆಕ್ಷನ್ ಹಾಕಲಾಗಿದ್ದು, ಇದರಿಂದ ಲೋಕಾಯುಕ್ತ ಪ್ರವೇಶವಾಗಿದೆ. ಈ ತನಿಖೆ ನಡೆದಾಗ ಸತ್ಯಾಂಶ ಹೊರಗೆ ಬರುತ್ತದೆ. ಇ.ಡಿ ಅವರು ವಿಚಾರಣೆ ಮಾಡಲು ಹಣಕಾಸಿನ ವ್ಯವಹಾರವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸರ್ಕಾರ ಆರೋಪಮುಕ್ತವಾಗಲಿದೆ” ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಮುಳುಗಿಸಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರು ಮಂತ್ರಿಯಾದ ಬಳಿಕ ಆ ರೀತಿ ಆಗಿದೆ” ಎಂದು ತಿರುಗೇಟು ಕೊಟ್ಟರು.
ಪ್ರಲ್ಹಾದ್ ಜೋಶಿ ಅವರು ಮುಕ್ತವಾಗಿ ಸತ್ಯಾಂಶ ತಿಳಿಸಲಿ
ಪ್ರಲ್ಹಾದ್ ಜೋಶಿ ಅವರ ಸೋದರ ಮತ್ತು ಸೋದರಿ ಜೆಡಿಎಸ್ ಅಭ್ಯರ್ಥಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, “ಅದು ಅವರವರ ಪಕ್ಷದ ವಿಚಾರ. ಇಲ್ಲಿ ಜೋಶಿ ಅವರು ಉತ್ತರ ನೀಡಬೇಕು. ನಾನು ಹೇಗೆ ಉತ್ತರ ನೀಡಲು ಸಾಧ್ಯ? ಈ ಪ್ರಕರಣದಲ್ಲಿ ನಾವೇನಾದರೂ ಮಾತನಾಡಿದರೆ ನಾವೇ ಈ ಪ್ರಕರಣ ಮಾಡಿಸಿದ್ದೇವೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ. ಅವರಿಗೆ ಸಂಬಂಧಿಸಿದ ವಿಚಾರವನ್ನು ಅವರ ಬಳಿಯೇ ಕೇಳಿ. ಅವರು ಎಲ್ಲಾ ವಿಚಾರದಲ್ಲೂ ಮಾತನಾಡುತ್ತಾರೆ. ಅದೇ ರೀತಿ ಈ ವಿಚಾರದಲ್ಲೂ ಮುಕ್ತವಾಗಿ ಮಾತನಾಡಿ ಜನರಿಗೆ ಸತ್ಯಾಂಶವನ್ನು ತಿಳಿಸಲಿ” ಎಂದು ಹೇಳಿದರು.