ಕಾಂಗ್ರೆಸ್ ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನೆ ಮಾಡುವುದು ನಾನೊಬ್ಬನೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ ಪ್ರವಾಸದಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ.
‘ಕುಮಾರಸ್ವಾಮಿ ಕಳ್ಳ’ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಅಂಟಿಸಿಕೊಳ್ಳಲಿ ಯಾರು ಬೇಡ ಅಂತಾರೆ, ನನ್ನ ಜೀವನ ತೆರೆದ ಪುಸ್ತಕ. ನನ್ನ ಬಗ್ಗೆ ಇವರಿಗೆ ಯಾರೂ ಏನೂ ಮಾಡಲು ಆಗಲ್ಲ. ನನಗೆ ಯಾರು ಏನೂ ಮಾಡೋಕಾಗಲ್ಲ. ಸರ್ಕಾರದ ತಪ್ಪುಗಳನ್ನ ಏಕಾಂಗಿಯಾಗಿ ಪ್ರಶ್ನೆ ಮಾಡುವುದು ಕುಮಾರಸ್ವಾಮಿ ಒಬ್ಬನೆ ಎಂದು ಹೇಳಿದರು.
ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರಿಗೆ ಹೆದರಲ್ಲ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಇವರ ದುಡ್ಡಿಗೆ, ಪೊಗರಿಗೆ, ರೌಡಿಸಂಗೆ ಹೆದರುತ್ತೇನಾ? ನಾನು ಅದಕ್ಕೇನು ಹೆದರುವವನಲ್ಲ, ಅದ್ಯಾವನೋ ಬಂದು ಕರೆಂಟ್ ಕನೆಕ್ಷನ್ ಕೊಟ್ಟಿದ್ದಾನೆ, ನಾನು ನಿಂತುಕೊಂಡು ಹಾಕ್ಸಿದ್ದೀನಾ. ಎಲ್ಲ ಹೇಳಿದ್ರೂ ಯಾರು ಕನೆಕ್ಷನ್ ಕೊಟ್ಟವ್ನೆ ಅವನ ಮೇಲೆ ಕ್ರಮ ತೆಗೊಳ್ಳಲಿ ಅಂತ. ನಾನು ಆ ಕೆಲಸ ಮಾಡಿದ್ದೀನಾ? ಓಪನ್ ಆಗಿ ಧೈರ್ಯವಾಗಿ ಹೇಳಿದೆ. ನನ್ನ ಮನೇಲಿ ಆಗಿದೆ, ಯಾವನೋ ಮಾಡಿರುವ ತಪ್ಪಿರಬಹುದು, ನಾನೇ ವಿಷಾದ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದೆ ಎಂದರು.
ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ಬಗ್ಗೆ ಧ್ವನಿ ಎತ್ತಿದ್ದು ನಾನು. ನಾನು ಇಲ್ಲಿವರೆಗೂ ಏನು ಹೇಳಿದ್ದೇನೆಯೋ ಅದಕ್ಕೆ ಸರ್ಕಾರ ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬರದ ವಿಚಾರವಾಗಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರಿಗೆ ಯಾವುದೇ ಪರಿಹಾರ ಹಣವನ್ನು ಇನ್ನೂ ಕೊಟ್ಟಿಲ್ಲ. ರಾಜ್ಯದಲ್ಲಿ ಈ ವರ್ಷದಲ್ಲಿ 33,700 ಕೋಟಿ ರೂ. ಬೆಳೆ ನಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೆನ್‌ಡ್ರೈನ್ ಬಿಡುಗಡೆ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ್ದಕ್ಕೆ ಉತ್ತರಿಸಿದ ಮಾಜಿ ಸಿಎಂ, ಪೆನ್‌ಡ್ರೈವ್ ತೋರಿಸಿದಾಗ ಎಷ್ಟು ಜನ ಮಂತ್ರಿಗಳು ನನಗೆ ಫೋನ್ ಮಾಡಿದ್ರು, ಎಷ್ಟು ಜನ ನನ್ನ ಹತ್ತಿರ ಅಣ್ಣಾ ಅಣ್ಣಾ ಅಂತ ಬಂದು ಗೋಗರೆದರು ಎಂದು ನಿಮಗೆ ಗೊತ್ತಾ? ಎನ್ನುವ ಮೂಲಕ ಹೊಸ ವಿಷಯವನ್ನು ಕುಮಾರಸ್ವಾಮಿ ಬಹಿರಂಗಗೊಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಜನರ ಬಲಿಗೆ ಕಾಯುತ್ತಿದೆಯೇ ಟ್ರಾಫಿಕ್ ಬೋರ್ಡ್?
ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ನಾಯಕ ಸಿ.ಎಂ.ಇಬ್ರಾಹಿಂ ಅವರು ತಾವು ಈಗಲೂ ಜೆಡಿಎಸ್ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾಗಿದ್ದು, ತಮ್ಮ ಅಮಾನತು ನಿರ್ಧಾರದ ವಿರುದ್ಧ ಕೋರ್ಟ್ ಮೊರೆ ಹೋಗುವುದಾಗಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಅವರು ನೀಡುತ್ತಿರುವ ಹೇಳಿಕೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕೆ ಪ್ರತಿಕ್ರಿಯೆ ನೀಡಬೇಕಾದ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.