ʼಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಯಾರೆಂಬುದೇ ನನಗೆ ಗೊತ್ತಿಲ್ಲʼ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸ್ವಪಕ್ಷದ ಸಚಿವ ಮಧು ಬಂಗಾರಪ್ಪ ವಿರುದ್ಧ ಗುಡುಗಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಕೇವಲ ಶಾಸಕ ಅಷ್ಟೇ. ಮೊದಲು ಮಧು ಬಂಗಾರಪ್ಪ ಉಸ್ತುವಾರಿ ಸಚಿವರಾಗಿದ್ದರಂತೆ. ಈಗ ಉಸ್ತುವಾರಿ ಸಚಿವರು ಯಾರು ಅಂತಾ ನನಗೆ ಗೊತ್ತಿಲ್ಲ. ಇವತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೆಡಿಪಿ ಸಭೆ ಇದೆಯಂತೆ. ಕೆಡಿಪಿ ಸಭೆಗೆ ನನಗೆ ಆಹ್ವಾನವಿಲ್ಲ” ಎಂದರು.
“ಬಿಜೆಪಿ ನಾಯಕರು ಬರ ಅಧ್ಯಯನ ನಡೆಸುತ್ತಿದ್ದಾರೆ. ರಾಜ್ಯದ ವಿಪಕ್ಷ ಮುಖಂಡರು ಬರ ವೀಕ್ಷಣೆಗೆ ಹೊರಟಿದ್ದಾರೆ. ಆದರೆ ರಾಜಕೀಯ ಮಾಡೋದು ಖಂಡನೀಯ. ಬರಪರಿಹಾರಕ್ಕೆ ಮುಖ್ಯಮಂತ್ರಿಯವರು ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ವಿಪಕ್ಷ ನಾಯಕನೇ ಇಲ್ಲ. ಇದರ ನಡುವೆ ಬರ ಅಧ್ಯಯನ ಮಾಡುತ್ತಿದ್ದಾರೆ. ನಿಮ್ಮ ಕಾಲದಲ್ಲಿ ನೆರೆ ಬಂತು ಏನಾದರೂ ಪರಿಹಾರ ಕೊಟ್ಟಿದ್ದೀರಾ” ಎಂದು ಪ್ರಶ್ನಿಸಿದರು.
“ಕೇವಲ ಸಮೀಕ್ಷೆ ಮಾಡಿ ಕೈ ಬಿಟ್ಟಿದ್ದೀರಿ. ನಿಮ್ಮ ಪ್ರಧಾನಿ, ನಿಮ್ಮ ಸರ್ಕಾರ ಏನಾದರೂ ಪರಿಹಾರ ಕೊಟ್ಟಿದ್ದಾರೆ? ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ. ಬರ ಅಧ್ಯಯನ ಮಾಡುತ್ತೀವಿ ಅಂತೀರಲ್ಲ ನಿಮಗೆ ಮಾನ ಮರ್ಯಾದೆ ಇದೆಯಾ? ನಮ್ಮ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೀನಿ. ಜಿಲ್ಲಾ ಮಂತ್ರಿಗಳು ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು. ಬರದ ಬಗ್ಗೆ ಸಮೀಕ್ಷೆ ನಡೆಸಬೇಕು. ಬರ ಪರಿಹಾರ ನೀಡಲು ಸಮರ್ಪಕವಾಗಿ ಶ್ರಮಿಸಬೇಕು” ಎಂದರು.
“ಕುಮಾರಸ್ವಾಮಿ ಇವತ್ತು ರೆಸಾರ್ಟ್‌ನಲ್ಲಿ ಶಾಸಕರನ್ನು ಕೂಡಿ ಹಾಕಿಕೊಂಡಿದ್ದಾರೆ. ನೀವು ಕೂಡಿ ಹಾಕಿಕೊಂಡರೂ ಅವರು ಯಾರು ಇರಲ್ಲ. ಬಿಜೆಪಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಶ್ವರಪ್ಪ ಅವರಿಗೇ ನೆಲೆ ಇಲ್ಲ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಯಾವ ಯೋಗ್ಯತೆ ಇದೆ” ಎಂದು ಹರಿಹಾಯ್ದರು.
“ರಾಜ್ಯದಲ್ಲಿ ಬಿಜೆಪಿಗೆ ಈಗ 65 ಸೀಟ್ ಬಂದಿದೆ. ಈಶ್ವರಪ್ಪ, ನಳೀನ್ ಕುಮಾರ್ ಕಟೀಲ್ ನಂಬಿಕೊಂಡು ಹೋದರೆ ಮುಂದೆ 42 ಬರುತ್ತದೆ. ಯಡಿಯೂರಪ್ಪ ಅವರಿಗೆ ಬದ್ದತೆ ಇದ್ದರೆ ಕೇಂದ್ರದಿಂದ ಪರಿಹಾರ ಕೊಡಿಸಿ. ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಪರಿಹಾರ ಕೊಡಿಸಿ” ಎಂದರು.
“ಪಿಎಸ್‌ಐ ಹಗರಣದ ಕಿಂಗ್ ಪಿನ್ ವಿಜಯೇಂದ್ರ ಆ ಸಮಯದಲ್ಲಿ ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳಲಿಲ್ಲ. ಈಗ ಎಫ್‌ಡಿಎ, ಎಸ್‌ಡಿಎ ಹಗರಣ ಮಾತನಾಡ್ತೀರಾ? ಸಂಸದ ರಾಘವೇಂದ್ರ ಚುನಾವಣೆ ಸಮಯದಲ್ಲಿ ಮಾತ್ರ ಓಡಾಡುತ್ತಾರೆ. ನಾನು ಅದು ತಂದೆ, ಇದು ತಂದೆ ಅಂತಾರೆ. ಏರ್‌ಪೋರ್ಟ್ ತಂದೆ ಅಂತಾರೆ. ಏರ್ ಪೋರ್ಟ್ ತಂದಿದ್ದು ಯಡಿಯೂರಪ್ಪ ಅವರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಪ್ರಧಾನ ಮಂತ್ರಿಗಳೆಂದರೆ ಸರ್ವಾಧಿಕಾರಿಯೇ: ಸಿದ್ದರಾಮಯ್ಯ ಪ್ರಶ್ನೆ
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಅವ್ಯವಹಾರದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಸಿಬಿಐ ತನಿಖೆಯಾಗಲಿ ಕೇವಲ ಷಡಾಕ್ಷರಿ ವರ್ಗಾವಣೆ ಮಾಡಿದರೆ ಸಾಲುವುದಿಲ್ಲ. ಭ್ರಷ್ಟಾಚಾರದ ವ್ಯವಹಾರ ಮಾಡಲಾಗಿದೆ ಎಂಬ ಆರೋಪವಿದೆ. ಅಧಿಕಾರಿಗಳ ಬಳಿ ದುಡ್ಡು ಹೊಡೆದು ತಿಂದಿರುವ ಆರೋಪವಿದೆ” ಎಂದರು.
“ವರ್ಗಾವಣೆ ಮಾಡಿದರೆ ಸಾಧನೆಯಾಗಲ್ಲ. ಅದು ಎಲ್ಲಿ, ಯಾವಾಗ ಬೇಕಾದರೂ ಮಾಡಬಹುದು.
ಹೀಗಾಗಿ ಷಡಾಕ್ಷರಿ ವ್ಯವಹಾರ ಸಿಬಿಐ ತನಿಖೆಯಾಗಲಿ. ಡಿಸಿಸಿ ಬ್ಯಾಂಕ್ ಅವ್ಯವಹಾರವೂ ಸಿಬಿಐ ತನಿಖೆಯಾಗಲಿ. ಈಗಾಗಲೇ ಮಂಜುನಾಥ ಗೌಡರು ನಿರ್ದೋಷಿ ಎಂದು ಸಾಬೀತಾಗಿದೆ” ಎಂದು ಹೇಳಿದರು.