ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ತನ್ನ ಪ್ರಚಾರವನ್ನು ದ್ವಿಗುಣಗೊಳಿಸಲು ಲಖನೌ, ಭೋಪಾಲ್ ಮತ್ತು ಜೈಪುರದಲ್ಲಿ ಒಂದು ಉದ್ದೇಶದೊಂದಿಗೆ ಜಂಟಿ ರ‍್ಯಾಲಿಗಳನ್ನು ನಡೆಸಲು ‘ಇಂಡಿಯಾ’ ಒಕ್ಕೂಟ ಸೆಪ್ಟೆಂಬರ್ 12ರಂದು ಸಭೆ ನಡೆಸಲಿದೆ.
ಮುಂಬೈನಲ್ಲಿ ನಡೆದ ಇಂಡಿಯಾ ಸಭೆಯಲ್ಲಿ ರಚಿಸಲಾದ 21 ಸದಸ್ಯರ ಪ್ರಚಾರ ಸಮಿತಿಯು ಮಂಗಳವಾರ ಎರಡನೇ ಬಾರಿಗೆ ಸಭೆಯ ಯೋಜನೆಗಳನ್ನು ಅಂತಿಮಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶ ಮತ್ತು ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂಬ ಸಲಹೆಗಳು ಬಂದ ನಂತರ ರ‍್ಯಾಲಿ ಬಗ್ಗೆ ತೀರ್ಮಾನಿಸಲಾಗಿದೆ.
ಸೆಪ್ಟೆಂಬರ್ 6 ರಂದು ಡಿಎಂಕೆ ಸಂಸದ ತಿರುಚ್ಚಿ ಶಿವ ಅವರ ನಿವಾಸದಲ್ಲಿ ನಡೆದ ಮೊದಲ ಸಭೆಯಲ್ಲಿ, ಪ್ರಚಾರ ಸಮಿತಿಯು ರ‍್ಯಾಲಿಗಳನ್ನು ಶೀಘ್ರದಲ್ಲಿ ನಡೆಸುವ ನಿರ್ಧಾರಕ್ಕೆ ಅಂತಿಮ ರೂಪು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಸಭೆಯಲ್ಲಿ ಸೂಚಿಸಿದಂತೆ, “ಸಾರ್ವಜನಿಕ ಕಾಳಜಿ ಮತ್ತು ಪ್ರಾಮುಖ್ಯತೆ” ವಿಷಯಗಳ ಕುರಿತು ಪಾಟ್ನಾ, ನಾಗ್ಪುರ, ಚೆನ್ನೈ, ಗುವಾಹಟಿ ಮತ್ತು ದೆಹಲಿಯಲ್ಲಿ ಸಾರ್ವಜನಿಕ ರ‍್ಯಾಲಿಗಳನ್ನು ನಡೆಸಲಾಗುವುದು.
ಈ ಸುದ್ದಿ ಓದಿದ್ದೀರಾ? 5 ರಾಜ್ಯಗಳ ಚುನಾವಣೆಯನ್ನು ಮುಂದೂಡುವುದೇ ‘ಒಂದು ರಾಷ್ಟ್ರ ಒಂದು ಚುನಾವಣೆ’ ಗುರಿ: ಪ್ರಶಾಂತ್ ಭೂಷಣ್
ಜಾತಿ ಗಣತಿ ವಿಷಯದ ಕುರಿತು ಮೊದಲ ಸಭೆಯನ್ನು ಪಾಟ್ನಾದಲ್ಲಿ ನಡೆಸುವಂತೆ ಪ್ರಚಾರ ಸಮಿತಿ ಸೂಚಿಸಿದೆ. ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಹಿಂದುಳಿದ ವರ್ಗದ ವಿಷಯವನ್ನು ಮುಂದಿಡುವುದು ‘ಇಂಡಿಯಾ’ ಒಕ್ಕೂಟದ ವಿಷಯವಾಗಿದ್ದು, ಜಾತಿ ಗಣತಿ ವಿಷಯದ ಕುರಿತು ಮೊದಲ ಸಭೆಯನ್ನು ಪಾಟ್ನಾದಲ್ಲಿ ನಡೆಸುವಂತೆ ಪ್ರಚಾರ ಸಮಿತಿ ಸೂಚಿಸಿದೆ.
ಆದರೆ, ಟಿಎಂಸಿ ಜಾತಿ ಗಣತಿ ಬಗ್ಗೆ ತಕರಾರು ಹೊಂದಿರುವ ಕಾರಣ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದುನೋಡಬೇಕು. ಎಲ್ಲಿಯವರೆಗೆ ಧರ್ಮವನ್ನು ಎಳೆದು ತರುವುದಿಲ್ಲವೋ ಅಲ್ಲಿಯವರೆಗೆ ಜಾತಿ ಗಣತಿಗೆ ವಿರೋಧವಿಲ್ಲ ಎಂಬುದು ತೃಣಮೂಲದ ನಿಲುವು. ಮುಂಬೈ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅದರ ಬಗ್ಗೆ ಉತ್ಸುಕರಾಗಿರಲಿಲ್ಲ .
ಆರ್‌ಎಸ್‌ಎಸ್ ಪ್ರಧಾನ ಕಚೇರಿ ಇರುವ ನಾಗ್ಪುರದಲ್ಲಿ ಜಾತ್ಯತೀತ ಸಿದ್ಧಾಂತದ ತನ್ನ ಬದ್ಧತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಇಂಡಿಯಾ ಒಕ್ಕೂಟದ ಮತ್ತೊಂದು ಸ್ಥಳವನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ.
ಈಶಾನ್ಯವನ್ನು ಪ್ರತಿನಿಧಿಸಲು ಗುವಾಹಟಿಯನ್ನು ಆಯ್ಕೆ ಮಾಡಲಾಗಿದೆ. ಅಲ್ಲಿ ಮಣಿಪುರ ಮತ್ತು ಇತರ ರಾಜ್ಯ ಗಳ ದುಃಸ್ಥಿತಿಯನ್ನು ಎತ್ತಿ ತೋರಿಸಲು ಒಕ್ಕೂಟ ಯೋಜಿಸಿದೆ. ಚೆನ್ನೈ ರ‍್ಯಾಲಿಯು ರಾಜ್ಯ -ಕೇಂದ್ರ ಸಂಬಂಧಗಳು ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸುತ್ತದೆ. ದೆಹಲಿ ಕಾರ್ಯಕ್ರಮವು ಆರ್ಥಿಕ ವಿಷಯಗಳ ಮೇಲೆ ಗಮನ ನೀಡುತ್ತದೆ.
ಮೊದಲ ಸಭೆಯಲ್ಲಿ, ಸಮಿತಿಯ ಸದಸ್ಯರು ಲಖನೌ, ಜೈಪುರ ಮತ್ತು ಭೋಪಾಲ್‌ನಲ್ಲಿ ರ‍್ಯಾಲಿಗಳನ್ನು ನಡೆಸಲು ಪರಿಗಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂಡಿಯಾ ಒಕ್ಕೂಟ ಅಕ್ಟೋಬರ್ 2 ರಂದು ‘ವಿಷನ್ ಡಾಕ್ಯುಮೆಂಟ್’ ತರಲು ಮುಂದಾಗಿದೆ. ಈ ಡಾಕ್ಯುಮೆಂಟ್ ದೇಶದ ಸಮಸ್ಯೆಗಳ ನಿವಾರಣೆಗೆ ಒಳಗೊಂಡಿರುವ ಕಾರ್ಯಸೂಚಿಯಾಗಿದೆ. ವಿಷನ್ ಡಾಕ್ಯುಮೆಂಟ್ ಅನ್ನು ಸಿದ್ಧಪಡಿಸಲು 11 ಸದಸ್ಯರ ಕಾರ್ಯಕಾರಿ ಸಮಿತಿಗೆ ತಿಳಿಸಲಾಗಿದೆ.