- ‘ಬಿಎಸ್ವೈ ಅವರನ್ನು ಬಿಟ್ಟರೆ ನಾನೇ ಲಿಂಗಾಯತ ಹಿರಿಯ ನಾಯಕ‘
- ‘ವಿಧಾನಸಭೆಗೆ ಹೋದರೆ ಅಧಿಕಾರ ಕೇಳುತ್ತೇನೆಂದು ಭಾವಿಸಿದ್ದರು‘
ಬಿಜೆಪಿಯವರು ನನ್ನನ್ನು ಚಿಕ್ಕ ಬಾಲಕನಂತೆ ನಡೆಸಿಕೊಂಡಿದ್ದಾರೆ. ಲಿಂಗಾಯತ ನಾಯಕರಲ್ಲಿ ನಾನು ಹಿರಿಯ, ಈ ಉದ್ದೇಶದಿಂದಲೇ ಕಡೆಗಣಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಧಾನ ವ್ಯಕ್ತಪಡಿಸಿದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿ ಎಸ್ ಯಡಿಯೂರಪ್ಪ ಅವರನ್ನು ಬಿಟ್ಟರೆ ಲಿಂಗಾಯತ ಸಮುದಾಯದಲ್ಲಿ ನಾನೇ ಹಿರಿಯ ನಾಯಕ. ನಾನು ವಿಧಾನಸಭೆಗೆ ಹೋದರೆ ಅಧಿಕಾರ ಕೇಳುತ್ತೇನೆ ಎಂದು ಭಾವಿಸಿದ್ದರು. ಆದ್ದರಿಂದಲೇ ವ್ಯವಸ್ಥಿತವಾಗಿ ನನ್ನನ್ನು ಪಕ್ಷದಿಂದ ಹೊರಹಾಕಿದ್ದಾರೆ” ಎಂದು ಬಿಜೆಪಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.
“ಬಿಜೆಪಿ ನೀಡಿದ ಎಲ್ಲ ಜವಾಬ್ದಾರಿಗಳನ್ನು ನಾನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಕಳೆದ ಆರು ತಿಂಗಳಿಂದ ನನ್ನನ್ನು ಕಡೆಗಣಿಸಲಾಗಿದೆ. ನನಗೆ ಬಿಜೆಪಿ ಗೌರವ ನೀಡಲಿಲ್ಲ” ಎಂದು ಹೇಳಿದರು.
“ಕಾಂಗ್ರೆಸ್ನ ತತ್ವ ಸಿದ್ದಾಂತ ಒಪ್ಪಿ ಕಾಂಗ್ರೆಸ್ ಸೇರಿದ್ದೇನೆ. ಜನರ ಅಭಿಪ್ರಾಯ ಪಡೆದು ಈ ನಿರ್ಧಾರಕ್ಕೆ ಬಂದಿದ್ದೇನೆ. ಹುಬ್ಬಳಿ ಜನರಿಗೆ ನನ್ನ ಮೇಲೆ ಪ್ರೀತಿ ಇದೆ. ಅವರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ” ಎಂದು ಎಂದರು.
“ರಾಜ್ಯದಲ್ಲಿ ನಾನು ಬಿಜೆಪಿಯನ್ನು ಕಟ್ಟಿ ಬೆಳೆಸಿರುವೆ. ಆದರೆ, ನನ್ನ ಮನೆಯಿಂದಲೇ ನನ್ನನ್ನು ಹೊರದೂಡಲಾಗಿದೆ. ಬಿಜೆಪಿ ಕೆಲವೇ ಕೆಲವು ನಾಯಕರ ಹಿಡಿತದಲ್ಲಿದೆ. ಅವರು ತಮ್ಮ ಹಿತಾಸಕ್ತಿಗೆ ಕೆಲಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ
ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, “ನಾನು ಅಧಿಕಾರ ಕೇಳಲಿಲ್ಲ. ಕೇವಲ ಆರು ತಿಂಗಳ ಕಾಲ ಶಾಸಕನಾಗಿ ಆಮೇಲೆ ರಾಜಕೀಯ ನಿವೃತ್ತಿ ಘೋಷಿಸುವೆ ಎಂದಿದ್ದೆ. ಆದರೆ, ಅವರು ಅದಕ್ಕೂ ಅವಕಾಶ ನೀಡಲಿಲ್ಲ” ಎಂದು ನೊಂದು ನುಡಿದರು.
“ಈ ಬೆಳವಣಿಗೆ ದೆಹಲಿ ನಾಯಕರ ಗಮನಕ್ಕೆ ಬರುತ್ತಿಲ್ಲ. ನಾನು ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ವಿರುದ್ಧ ಮಾತನಾಡುವುದಿಲ್ಲ” ಎಂದು ಹೇಳಿದರು.
“ಬಿಜೆಪಿ ನಾಯಕರು ಹಿರಿಯ ನಾಯಕರನ್ನು ನಡೆಸಿಕೊಳ್ಳುವ ರೀತಿ ಸರಿ ಇಲ್ಲ. ನಾನು ಕಾಂಗ್ರೆಸ್ ಸೇರಿದ್ದೇನೆ. ಇನ್ನು ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಇದು ಹೊಸ ಅಧ್ಯಾಯ, ನನಗೂ ಹೊಸ ಅದ್ಯಾಯ” ಎಂದರು.
“ನನಗೆ ಈ ಬಾರಿ ಟಿಕೆಟ್ ಸಿಗುತ್ತದೆ ಎನ್ನುವ ಭರವಸೆ ಇತ್ತು. ಅಧಿಕಾರದ ಆಸೆಗೆ ನಾನು ರಾಜಕಾರಣ ಮಾಡಿಕೊಂಡು ಬಂದಿಲ್ಲ. ಪಕ್ಷದಲ್ಲಿ ಹಿರಿಯರನ್ನು ನಡೆಸಿಕೊಳ್ಳುವ ರೀತಿ ಇದೆನಾ” ಎಂದು ಪ್ರಶ್ನಿಸಿದರು.
ನೀವು ನಿಜವಾಗಿಯೂ ಲಿಂಗಾಯತರಾಗಿದ್ದರೆ ಧರ್ಮದ ಮಾನ್ಯತೆಯ ಪ್ರಕರಣ ಕೇಂದ್ರದಿಂದ ಹಿಂದಿರುಗಿಸಿದ್ದಾಗಲೇ ರಾಜಿನಾಮೆ ಕೊಡಬೇಕಾಗಿತ್ತು. ಈಗ ಹೈಕಮಾಂಡ್ ನಿರ್ಲಕ್ಷ ಮಾಡಿದಾಗ ಲಿಂಗಾಯತರೆಂಬುದು ಅರಿವಿಗೆ ಬಂದಿದೆಯಾ?. ಲಿಂಗಾಯತ ಧರ್ಮದ ಮಾನ್ಯತೆಯ ಬಗ್ಗೆ ಸಾಕಷ್ಟು ರ್ಯಾಲಿಗಳು ನಡೆಸಿದ್ದರೂ ನೀವು ಮೌನವಾಗಿದ್ದರ ಪ್ರತಿಫಲ ಈಗ ಅನುಭವಿಸಬೇಕಾಗಿದೆ. ಲಿಂಗಾಯತ ಶಾಸಕರೆಲ್ಲರೂ ಒಗ್ಗಟ್ಟು ತೋರಿಸಿದ್ದರೆ, ಧರ್ಮದ ಮಾನ್ಯತೆಯ ಪ್ರಕರಣ ವಾಪಸ್ಸು ಬರುತ್ತಿರಲಿಲ್ಲ.