- ಆಗಸ್ಟ್ 1ರಿಂದ ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಎರಡು ದಿನ ಜನತಾ ದರ್ಶನ ನಡೆಸುವೆ
- ಜನತಾ ದರ್ಶನದ ವೇಳೆ ಸಮಸ್ಯೆ ಕಂಡುಬಂದರೆ ಸ್ಥಳದಲ್ಲೇ ಅಧಿಕಾರಿಗಳ ಮೇಲೆ ಕ್ರಮ
ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಆಗಸ್ಟ್ ಒಂದರಿಂದ ಜನತಾ ದರ್ಶನ ಆರಂಭಿಸುವೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಗುರುವಾರ ಕೊಳಗೇರಿ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, “ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಎರಡು ದಿನ ಜನತಾ ದರ್ಶನ ನಡೆಸಲಿದ್ದೇನೆ. ಜಿಲ್ಲೆ ವ್ಯಾಪ್ತಿಯ ಎರಡೂ ಇಲಾಖೆಗಳ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ನನ್ನ ಜೊತೆ ಇರಲಿದ್ದಾರೆ” ಎಂದು ಹೇಳಿದರು.
“ವಸತಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ಸವಲತ್ತು ಮತ್ತು ಸೌಲಭ್ಯಗಳಿಗಾಗಿ ಸಾರ್ವಜನಿಕರು ಬೆಂಗಳೂರುವರೆಗೆ ಬರುವುದನ್ನು ತಪ್ಪಿಸಲು ಜನರ ಬಳಿಗೆ ನಾನೇ ಹೋಗಲು ನಿರ್ಧರಿಸಿದ್ದೇನೆ. ಆಗಸ್ಟ್ ಒಳಗೆ ಎರಡೂ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಪರಿಹರಿಸಲು ಅಧಿಕಾರಿಗಳಿಗೆ ಎರಡು ತಿಂಗಳ ಗಡುವು ನೀಡುತ್ತಿದ್ದೇನೆ” ಎಂದು ಸೂಚಿಸಿದರು.
“ಜನತಾ ದರ್ಶನ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಕಂಡುಬಂದರೆ ಅಥವಾ ಅಧಿಕಾರಿಗಳ ಮಟ್ಟದಲ್ಲಿ ತಪ್ಪು ನಡೆದಿದ್ದರೆ ದೂರುಗಳು ಬಂದರೆ ಅಂತಹವರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಬಿಎಂಪಿ ಚುನಾವಣೆ; ಸಿದ್ದರಾಮಯ್ಯ ಸರ್ಕಾರದ ಮುಂದಿವೆ ಹಲವು ಸವಾಲು
ಅಮಾನತಿಗೆ ಆದೇಶ
ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ವಸತಿ ಸಚಿವ ಜಮೀರ್ ಅಹ್ಮದ್ ಆಕ್ರೋಶಗೊಂಡರು. ಮೇಲಧಿಕಾರಿಗಳ ಅನುಮತಿ ಪಡೆಯದೇ, ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಅನುಮತಿ ಪಡೆಯದೇ ಗೈರಾಗಿದ್ದ ಮಂಡ್ಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದರ್ಶನ್ ಜೈನ್ ಅವರನ್ನು ಸಚಿವರು ಸ್ಥಳದಲ್ಲೇ ಅಮಾನತು ಮಾಡುವಂತೆ ಆದೇಶಿಸಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.