2028ರ ಚುನಾವಣೆ ವೇಳೆ ನಾನು ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ. ಹುದ್ದೆಗಳು ಪಕ್ಷವನ್ನು ಮುನ್ನಡೆಸುವಂತೆ ಮಾಡುವುದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಪರಾಜಿತ ಅಭ್ಯರ್ಥಿಗಳ ಜತೆ ಸೋಮವಾರ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮತನಾಡುವ ವೇಳೆ, ‘2028ರ ಚುನಾವಣೆ ನಿಮ್ಮ ನಾಯಕತ್ವದಲ್ಲೇ ನಡೆಯಲಿದೆಯೇ’ ಎಂದು ಸುದ್ದಿಗಾರು ಪ್ರಶ್ನಿಸಿದಾಗ ಉತ್ತರಿಸಿದರು.
“ನಾಯಕತ್ವ, ಬದ್ಧತೆ, ದೂರದೃಷ್ಟಿ ಪಕ್ಷ ಮುನ್ನಡೆಸಲು ಮುಖ್ಯ. ನಾನು ಏನೇ ಆಗಬಹುದು ಅದು ಮುಖ್ಯವಲ್ಲ. ಪಕ್ಷ ಕೊಟ್ಟಿರುವ ಶಕ್ತಿಯಿಂದ ನಾವು ನಾಯಕರಾಗಿದ್ದು, ಕಾಂಗ್ರೆಸಿಗನಾಗಿ ಪಕ್ಷಕ್ಕೆ ಶಕ್ತಿ ತುಂಬಿ ಮುನ್ನಡೆಸುವುದು ಮುಖ್ಯ” ಎಂದು ತಿಳಿಸಿದರು.
“ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಸಾಧ್ಯತೆಗಳಿವೆ ಎಂದು ನಮ್ಮ ಆಂತರಿಕ ಸಮೀಕ್ಷೆಗಳು ವರದಿ ನೀಡಿವೆ. ಈ ಹಿನ್ನೆಲೆಯಲ್ಲಿ ಪರಾಜಿತ ಅಭ್ಯರ್ಥಿಗಳ ಕಷ್ಟ ಆಲಿಸಿ, ಮುಂದಿನ 2028ರ ಚುನಾವಣೆಗೆ ಸಜ್ಜಾಗಿ ಎಂದು ಸೂಚನೆ ನೀಡಲಾಗಿದೆ” ಎಂದರು.
“ನಾವು ಸೋತಿದ್ದ 86 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕರೆಸಿ ಅವರ ಕಷ್ಟ ಆಲಿಸಿ, ಮುಂದಿನ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಪರಾಜಿತ ಅಭ್ಯರ್ಥಿಗಳು ಸುಮ್ಮನೆ ಕೂರದೆ ಕಾರ್ಯಪ್ರವೃತ್ತರಾಗಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ. ಎಐಸಿಸಿ ಜತೆ ಚರ್ಚೆ ಮಾಡಿ ಪಕ್ಷಕ್ಕೆ ಹಿನ್ನಡೆ ಇರುವ ಉಳಿದ 20 ಕ್ಷೇತ್ರಗಳಲ್ಲಿ ಪಕ್ಷವನ್ನು ಯಾವ ರೀತಿ ಕಟ್ಟಬೇಕು ಎಂದು ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ” ಎಂದು ತಿಳಿಸಿದರು.
“ಮಾರ್ಚ್ 23ರಿಂದ ಏಪ್ರಿಲ್ 1ರವರೆಗೂ ನಾನು, ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಸಚಿವರು, ಉಸ್ತುವಾರಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕಿದೆ. ಅದಕ್ಕೂ ಮುನ್ನವೇ ಶನಿವಾರ ಅಥವಾ ಭಾನುವಾರ ಸಮಯ ಸಿಕ್ಕರೆ ಸಭೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವಕಾಶ ನೀಡಲಾಗುವುದು. ಕಾರ್ಯಕರ್ತರ ಸಭೆಯಲ್ಲಿ ಮಂಡಳಿ, ಸಂಘ, ಸಂಸ್ಥೆ, ಸಮಿತಿಗಳಲ್ಲಿ ಸರ್ಕಾರದಿಂದ ನಾಮನಿರ್ದೇಶನವಾಗಿರುವ ಕಾರ್ಯಕರ್ತರಿಗೆ ಸನ್ಮಾನ ಮಾಡಬೇಕು. ಆಮೂಲಕ ಅವರನ್ನು ಗುರುತಿಸಿ ಅವರ ಜವಾಬ್ದಾರಿ ತಿಳಿಸುವ ಕೆಲಸ ಮಾಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಣಿಪುರ ರಾಜ್ಯಪಾಲರ ಆದೇಶ ನಾಗರಿಕರು ಪಾಲಿಸಲಿ
“ಕಳೆದ 5 ವರ್ಷಗಳಿಂದ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಬಡ್ತಿ ನೀಡಲು ಮುಂದಾಗಿದ್ದೇವೆ. ಬ್ಲಾಕ್ ಅಧ್ಯಕ್ಷರಿಗೆ ಸರ್ಕಾರಿ ನಾಮನಿರ್ದೇಶನ ಮಾಡಲು ಸೂಚಿಸಲಾಗಿದೆ. ಪರಮೇಶ್ವರ್ ಅವರ ನೇತೃತ್ವದ ಸಮಿತಿ ಮಾಡಿರುವ ಪಟ್ಟಿಯಲ್ಲಿ ಬ್ಲಾಕ್ ಅಧ್ಯಕ್ಷರಿಗೆ ಆದ್ಯತೆ ನೀಡಲು ಮುಂದಾಗಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಒಂದು ವಾರದಲ್ಲಿ ಅಂತಿಮಗೊಳಿಸಲಾಗುವುದು” ಎಂದು ಹೇಳಿದರು.
ಪಕ್ಷ ಸಂಘಟನೆ ವಿಚಾರವಾಗಿ ಸುನೀಲ್ ಕನಗೋಲು ಅವರ ಸಲಹೆ ಸೂಚನೆ ಪರಿಗಣಿಸುತ್ತೀರಾ ಎಂದು ಕೇಳಿದಾಗ, “ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಮಾಡುತ್ತಾರೆ. ಅವರು ಇಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿದ್ದು, ಪಕ್ಷದ ಹಿತಕ್ಕಾಗಿ ಅವರು ಕೊಡುವ ಸಲಹೆಗಳನ್ನು ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನೀವುಗಳು ಪಕ್ಷಕ್ಕೆ ಒಳ್ಳೆಯದಾಗುವ ಸಲಹೆ ಕೊಟ್ಟರೆ ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇವೆ” ಎಂದು ತಿಳಿಸಿದರು.
ಕೇಂದ್ರ ಸಚಿವರ ಭೇಟಿ ನಂತರ ಸಮಯ ಸಿಕ್ಕರೆ ಎಐಸಿಸಿ ನಾಯಕರ ಭೇಟಿ
“ಮಂಗಳವಾರ ದೆಹಲಿಗೆ ತೆರಳಿದಾಗ ಯಾವ ಎಐಸಿಸಿ ನಾಯಕರನ್ನು ಭೇಟಿ ಮಾಡುತ್ತಿದ್ದೀರಿ ಎಂದು ಕೇಳಿದಾಗ, “ನಾನು ದೆಹಲಿಗೆ ಹೋಗುತ್ತಿರುವುದು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲು. ನಾನು ರಾಜಸ್ಥಾನದಲ್ಲಿ ನಡೆದ ಸಮ್ಮೇಳನಕ್ಕೆ ಹೋದಾಗ ನಾನು ನಮ್ಮ ನೀರಾವರಿ ಯೋಜನೆಗಳ ವಿಚಾರವನ್ನು ಪ್ರಸ್ತಾಪಿಸಿದೆ. ಅದಕ್ಕೆ ಅವರು ನಾಳೆ ಸಭೆ ಮಾಡಲು ಸಮಯ ನೀಡಿದ್ದಾರೆ. ನಮ್ಮ ರಾಜ್ಯದವರೇ ಆದ ಸೋಮಣ್ಣ ಅವರ ಮೂಲಕವೇ ಕಡತ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಅವರನ್ನು ಬಿಟ್ಟು ನಾನು ಮಾತನಾಡುವುದು ಸರಿಯಲ್ಲ. ಸೋಮಣ್ಣ ಅವರಿಗೂ ನಾನು ಪತ್ರ ಬರೆದಿದ್ದೇನೆ. ನಾಳೆ 11-12 ಗಂಟೆಗೆ ಸಭೆ ಇದೆ” ಎಂದರು.
ಬೆಳಗಾವಿಯಲ್ಲಿ ಮರಾಠಿಗರಿಂದ ಬಸ್ ಕಂಡಕ್ಟರ್ ಮೇಲೆ ಹಲ್ಲೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದಾಗ, “ಗೃಹಸಚಿವರು ಹಾಗೂ ಸಾರಿಗೆ ಸಚಿವರು ಈ ಪ್ರಕರಣವನ್ನು ನಿಭಾಯಿಸುತ್ತಿದ್ದಾರೆ. ಇವರು ಬೆಳಗಾವಿಗೆ ತೆರಳಿದ್ದಾರೆ. ಅವರು ಪರಿಸ್ಥಿತಿ ಅಲೋಕಿಸಿದ ನಂತರ ನಮ್ಮ ಬಳಿ ಚರ್ಚೆ ಮಾಡಲಿದ್ದಾರೆ. ನಮ್ಮದು ಶಾಂತಿ ಪ್ರಿಯ ರಾಜ್ಯ. ನಾವು ಎಲ್ಲರ ಜತೆ ಸಹೋದರರಂತೆ ಬಾಳಲು ಬಯಸುತ್ತೇವೆ” ಎಂದು ತಿಳಿಸಿದರು.
ಮುನಿರತ್ನ ಅವರು ನಿಮ್ಮ ವಿರುದ್ಧ 2 ಸಾವಿರ ಕೋಟಿ ಅಕ್ರಮದ ಆರೋಪದ ಬಗ್ಗೆ ಕೇಳಿದಾಗ, “ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವ ಪ್ರಕರಣಗಳ ಬಗ್ಗೆ ಯಡಿಯೂರಪ್ಪ, ಆರ್.ಅಶೋಕ್ ಅವರು ಉತ್ತರ ನೀಡಲಿ. ಆನಂತರ ನಾನು ಉತ್ತರ ನೀಡುತ್ತೇನೆ” ಎಂದು ತಿಳಿಸಿದರು.