ಗ್ಯಾರಂಟಿ ಯೋಜನೆಗೆ ಯಾರಪ್ಪನ ದುಡ್ಡು ಬಳಕೆ ಮಾಡುತ್ತಿದ್ದೀರಿ? ಮೆಟ್ರೋ ದರ, ಬಸ್ ಪ್ರಯಾಣ ದರ, ಮದ್ಯದ ದರ, ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಏರಿಕೆ ಮಾಡಿ ಗ್ಯಾರಂಟಿ ಕೊಡಲಿಕ್ಕೆ ನೀವೇ ಬೇಕಾ? ಈ ರೀತಿ ಗ್ಯಾರಂಟಿ ಕೊಡುವುದಿದ್ದರೆ ನಾನು ತಿಂಗಳಿಗೆ ₹10,000 ಗ್ಯಾರಂಟಿ ಕೊಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ನನಗೆ ಒಮ್ಮೆ 20 ತಿಂಗಳು, ಇನ್ನೊಮ್ಮೆ 14 ತಿಂಗಳು ಜನಪರ ಆಡಳಿತ ನಡೆಸಿದ ಬಗ್ಗೆ ತೃಪ್ತಿ ಇದೆ. ನೀವು ಗ್ಯಾರಂಟಿ ಎಂದು ಮಾಡಿದ್ದೀರಿ. ನಿಮ್ಮ ಮನೆ ಹಣದಿಂದ ಯೋಜನೆ ಮಾಡಿದ್ದೀರಾ” ಎಂದು ಪ್ರಶ್ನಿಸಿದರು.
ಇಷ್ಟಬಂದಂತೆ ಲೋಕಾಯುಕ್ತ ವರದಿ
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ನಾಲ್ವರು ಆರೋಪಿಗಳ ಅಪರಾಧದ ಕುರಿತು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವ ಲೋಕಾಯುಕ್ತ ಸಂಸ್ಥೆಯನ್ನು ದೇವರೇ ಕಾಪಾಡಬೇಕು. ಸರಕಾರ ನಡೆಸುವ ಮುಖ್ಯಮಂತ್ರಿ ತಮಗೆ ಇಷ್ಟಬಂದಂತೆ ಲೋಕಾಯುಕ್ತ ವರದಿಯನ್ನು ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.
“ಮುಡಾ ಹಗರಣದಲ್ಲಿ ಏನೆಲ್ಲ ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಲೋಕಾಯುಕ್ತ ವರದಿಯಿಂದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಕಾರಣ, ಪ್ರತಿ ಹಂತದಲ್ಲಿಯೂ ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದೆ. ಈ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ನಮಗೆ ಕಿರುಕುಳ ನೀಡಲಾಗುತ್ತಿದೆ. ನಮ್ಮ ಜಮೀನು ತನಿಖೆಗೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಐಎಎಸ್ ಎಸ್‌ಐಟಿ ರಚನೆ ಮಾಡಲಾಗಿದೆ. ಐವರು ಐಎಎಸ್ ಅಧಿಕಾರಿಗಳನ್ನು ಎಸ್‌ಐಟಿಗೆ ನೇಮಕ ಮಾಡಿದ್ದಾರೆ”ಎಂದು ಕಿಡಿಕಾರಿದರು.
ಕನ್ನಡಿಗರಿಗೆ ರಕ್ಷಣೆ ಇಲ್ಲ
ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ವಿಚಾರವಾಗಿ ಮಾತನಾಡಿ, “ಸರ್ಕಾರ ಯಾರಿಗೆ ರಕ್ಷಣೆ ಕೊಡುತ್ತದೆ? ಮಂತ್ರಿಗಳೊಬ್ಬರು ಮರಾಠಿಯಲ್ಲೇ ಭಾಷಣ ಮಾಡಿದ್ದಾರೆ. 2006-07ರಲ್ಲಿ ನಾನು ಸಿಎಂ ಆಗಿದ್ದಾಗ
ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಬಳಿ ನಿಯೋಗ ಹೋಗಿದ್ದರು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನ ಮಾಡಿದರು. ಆದರೆ, ನಾನು ಅದಕ್ಕೆ ಅವಕಾಶ ಕೊಡಲಿಲ್ಲ. ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿ ಮಾಡಿ, ಅಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದೆ. ಈ ಸರ್ಕಾರದ ಆಡಳಿತದಲ್ಲಿ ಬೆಳಗಾವಿ ಪರಿಸ್ಥಿತಿ ಅಯೋಮಯವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ರಾಜಕೀಯ ವೈರಾಗ್ಯ ಬಂದ ಹಾಗಿದೆ. ರಾಜೀನಾಮೆ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಕೀಯದಲ್ಲಿ ಮರ್ಯಾದಸ್ಥರು ಇರುವುದು ಒಳ್ಳೆಯದಲ್ಲ ಎಂದು ಅವರಿಗೆ ಅನಿಸಿರಬೇಕು. 136 ಕ್ಷೇತ್ರಗಳನ್ನು ಗೆದ್ದಿರುವ ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ಯಾವ ವಿಚಾರದಲ್ಲಿಯೂ ಇವರಿಗೆ ನಿಯಂತ್ರಣ ಇಲ್ಲ. ಆದರೂ, ಸಚಿವ ಮಹದೇವಪ್ಪ ಅವರು ಸಿಎಂ ರೆಕಾರ್ಡ್ ಮಾಡಬೇಕು ಎನ್ನುತ್ತಾರೆ. ಮಹದೇವಪ್ಪ ಅವರೇ, ಎಷ್ಟು ವರ್ಷ ಆಡಳಿತ ನಡೆಸಿದಿರಿ ಎನ್ನುವುದು ಮುಖ್ಯವಲ್ಲ. ಅಧಿಕಾರ ನಡೆಸಿದ ಸಂದರ್ಭದಲ್ಲಿ ಈ ನಾಡಿನ ಜನರ ಎಷ್ಟು ಸಮಸ್ಯೆ ಬಗೆಹರಿಸಿದಿರಿ ಎನ್ನುವುದು ಮುಖ್ಯ” ಎಂದರು.
“ಬಹಳ ದಿನಗಳಿಂದ ಜಾತಿ ಗಣತಿ ವರದಿ ಗುಮ್ಮ ಬಿಡಲಾಗುತ್ತಿದೆ. ವರದಿ ಕೈ ಸರ್ಕಾರದ ಕೈ ಸೇರಿದೆ. ಬಿಡುಗಡೆ ಮಾಡುವುದು ಬಿಟ್ಟು ಮಾಧ್ಯಮಗಳ ಮೂಲಕ ಬಿಡುಗಡೆ ಏಕೆ ಸೋರಿಕೆ ಮಾಡಲಾಗುತ್ತಿದೆ. ಜಾತಿಗಣತಿ ವರದಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದೀರಾ ಹೇಗೆ” ಎಂದು ಪ್ರಶ್ನಿಸಿದರು.
ಉದಯಗಿರಿ ಗಲಭೆಯ ಆರೋಪಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು
“ಮೈಸೂರಿನ ಉದಯಗಿರಿ ಗಲಭೆಯ ಗಲಭೆಕೋರರು ಯಾರೇ ಆಗಿದ್ದರೂ ಅವರನ್ನು ನಿರ್ದಯವಾಗಿ ಶಿಕ್ಷೆಗೆ ಗುರಿ ಮಾಡಬೇಕು. ಪೊಲೀಸ್ ವಾಹನಗಳ ಮೇಲೆ ಕಲ್ಲು ಹೊಡೆಯುತ್ತಾರೆ ಎಂದರೆ ನಮ್ಮ ರಾಜ್ಯದ ಶಾಂತಿ ಸುವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬುದನ್ನು ಗಮನಿಸಬಹುದು” ಎಂದು ಕುಮಾರಸ್ವಾಮಿ ಕಿಡಿಕಾರಿದರು.
“ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದವರನ್ನ ಬಲಿ ಹಾಕಬೇಕು. ಎಷ್ಟು ದಿನ ಅಂತ ಇಂತಹವರನ್ನು ಸಹಿಸಿಕೊಳ್ತೀರಿ. ಯಾರನ್ನೋ ಓಲೈಸಲು ಸರ್ಕಾರ ಇರುವುದಲ್ಲ. ಎಲ್ಲರ ಸರ್ಕಾರ ಎಂಬುದನ್ನು ಕಾಂಗ್ರೆಸ್ ಮರೆಯಬಾರದು. ಕಾನೂನು ಬಾಹಿರ ಚಟುವಟಿಕೆ ನಡೆಸುವವನು ಯಾರೇ ಇರಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಮೂಟೆಗಟ್ಟಲೆ ಕಲ್ಲು ತಂದು ಹೊಡೆದವರನ್ನು ರಕ್ಷಣೆ ಮಾಡಬೇಕಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಕೊಡಗು ಕ್ಷೇತ್ರದ ಲೋಕಸಭೆ ಸದಸ್ಯರಾದ ಯದುವೀರ ಚಾಮರಾಜ ಒಡೆಯರ್, ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ಮಾಜಿ ಮೇಯರ್ ರವಿ ಕುಮಾರ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಮಹೇಶ್ ಸೇರಿದಂತೆ ಅನೇಕ ಗಣ್ಯರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.