ಅಧಿಕಾರ ಹಂಚಿಕೆಯ ಕುರಿತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಒಪ್ಪಂದ ನಡೆದಿಲ್ಲ. ಸರ್ಕಾರದ ನಾಯಕತ್ವಕ್ಕಾಗಿ ನಡೆದ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಗೆದ್ದು ನಾನು ಮುಖ್ಯಮಂತ್ರಿ ಆಗಿದ್ದೇನೆ. ಐದು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ನಾಯಕತ್ವ-ಅಧಿಕಾರ ಹಂಚಿಕೆಗಾಗಿ ನಡೆದಿರುವ ಚುನಾವನೆ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಅವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ. “ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆಗಳು ನಡೆದಿದ್ದವು. ಹಲವಾರು ರೀತಿಯ ಹೇಳಿಕೆಗಳು ಬಂದಿದ್ದವು. ಆದರೆ, ಅಂತಹ ಯಾವುದೇ ಒಪ್ಪಂದ ನಡೆದಿಲ್ಲ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
“ಕಾಂಗ್ರೆಸ್ ಗೆದ್ದಾಗ ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ ಶಾಸಕರನ್ನೊಳಗೊಂಡ ಆಂತರಿಕ ಚುನಾವಣೆ ನಡೆಯಿತು. ಆಗ ನಾನು ಗೆದ್ದಿದ್ದೇನೆ. ಮುಖ್ಯಮಂತ್ರಿ ಆಗಿದ್ದೇನೆ. ಆದರೆ, ಡಿ.ಕೆ ಶಿವಕುಮಾರ್ ಆಗಲಿ ಅಥವಾ ಇತರ ಯಾರೇ ಶಾಸಕರಾಗಲಿ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಡುವುದು ತಪ್ಪಲ್ಲ. ಸದ್ಯ, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ನಾಯಕತ್ವ ಬದಲಾವಣೆ ಆಗುವುದಿಲ್ಲ” ಎಂದು ಹೇಳಿದ್ದಾರೆ.