- ಉಪ ಸಭಾಪತಿಗಳ ವಿರುದ್ಧ ನಡೆಸುತ್ತಿರುವ ಅನುಚಿತ ವರ್ತನೆ ಖಂಡನೀಯ
- ಗಣ್ಯ ವ್ಯಕ್ತಿಗಳು ರಾಜ್ಯಕ್ಕೆ ಬಂದಾಗ ಐಎಎಸ್ ಅಧಿಕಾರಿಗಳು ಸ್ವಾಗತ ಕೋರುವುದರಲ್ಲಿ ತಪ್ಪಿಲ್ಲ
“ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಇಂಡಿಯಾ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ದೇಶದ ಅನೇಕ ರಾಜ್ಯಗಳ ಹಾಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರುಗಳಿಗೆ ಸ್ವಾಗತವನ್ನು ನೀಡಲು ರಾಜ್ಯದ ಐಎಎಸ್ ಅಧಿಕಾರಿಗಳನ್ನು ನೇಮಿಸಿದ ಸಣ್ಣ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ವಿಧಾನಸಭೆಯಲ್ಲಿ ಉಪ ಸಭಾಪತಿಗಳ ವಿರುದ್ಧ ನಡೆಸುತ್ತಿರುವ ಅನುಚಿತ ವರ್ತನೆಯು ಇವರುಗಳ ಹತಾಶ ಭಾವನೆಯನ್ನು ತೋರಿಸುತ್ತದೆ” ಎಂದು ಆಮ್ ಆದ್ಮಿ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ತಿಳಿಸಿದರು.
“ಅರವಿಂದ ಕೇಜ್ರಿವಾಲ್, ಭಗವತ್ ಸಿಂಗ್ ಮಾನ್, ನಿತೀಶ್ ಕುಮಾರ್, ಸ್ಟಾಲಿನ್, ಹೇಮಂತ್ ಸುರೇನ್, ಮಮತಾ ಬ್ಯಾನರ್ಜಿ ಪ್ರಸ್ತುತ ದೇಶದ ನಾನಾ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ತೇಜಸ್ವಿ ಯಾದವ್ ಹಾಲಿ ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಲಾಲು ಪ್ರಸಾದ್ ಯಾದವ್, ಶರತ್ ಯಾದವ್, ಉದ್ದವ್ ಠಾಕ್ರೆ, ಅಖಿಲೇಶ್ ಯಾದವ್, ಮೆಹಬೂಬ ಮುಫ್ತಿ, ಉಮರ್ ಅಬ್ದುಲ್ಲಾ, ಸೀತಾರಾಮ್ ಯಚೂರಿ, ಡಿ.ರಾಜ ಇವರುಗಳೆಲ್ಲರೂ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದವರು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದವರು. ಇವರು ಯಾರು ಸಾಮಾನ್ಯ ವ್ಯಕ್ತಿಗಳು ಅಲ್ಲ ಅಥವಾ ಹಾದಿಬೀದಿಯಲ್ಲಿ ಹೋಗುವವರು ಅಲ್ಲ” ಎಂದರು.
“ಇವರುಗಳ ಸ್ವಾಗತಕ್ಕೆ ಸಾಮಾನ್ಯವಾಗಿ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಹೋದಾಗ ಅಲ್ಲಿನ ಮುಖ್ಯಮಂತ್ರಿಗಳ ಸ್ವಾಗತ ಕೋರುವುದು ನಮ್ಮ ದೇಶದ ಪರಿಪಾಠ ಹಾಗೂ ಸಂಪ್ರದಾಯ. ಇಂತಹ ಗಣ್ಯಾತಿಗಣ್ಯ ವ್ಯಕ್ತಿಗಳು ರಾಜ್ಯಕ್ಕೆ ಬಂದಾಗ ಹಿರಿಯ ಐಎಎಸ್ ಅಧಿಕಾರಿಗಳು ಸ್ವಾಗತ ಕೋರುವುದರಲ್ಲಿ ಯಾವುದೇ ತಪ್ಪಿಲ್ಲ ಹಾಗೂ ಈ ಅಧಿಕಾರಿಗಳೇನು ಸ್ವರ್ಗದಿಂದ ಬಂದವರಲ್ಲ. ಹೀಗಿರುವಾಗ ಸುಖಾಸುಮ್ಮನೇ ರಾಜಕೀಯವನ್ನು ಬೆರೆಸಿ ವಿಧಾನಸಭೆಯ ಕಲಾಪಗಳನ್ನು ಹಾಳು ಮಾಡುವುದು ಸರಿಯಲ್ಲ” ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು.
“ಇಂಡಿಯಾ ವಿಪಕ್ಷಗಳ ಸಭೆ ನಡೆಯುವಾಗಲೇ ದೆಹಲಿಯಲ್ಲಿ ಎನ್‌ಡಿಎ ಮಿತ್ರ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ 38 ಪಕ್ಷಗಳಲ್ಲಿ 26 ಪಕ್ಷಗಳಲ್ಲಿ ಯಾರು ಸಹ ಲೋಕಸಭಾ ಸದಸ್ಯರು ಇಲ್ಲ. ಇವುಗಳಲ್ಲಿ 10 ಪಕ್ಷಗಳು 2019ರ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸೇ ಇಲ್ಲ. ಇವುಗಳಲ್ಲಿ 8 ಪಕ್ಷಗಳಿಗೆ ಸೇರಿಸಿ ಕೇವಲ 9 ಎಂಪಿಗಳು ಮಾತ್ರ ಇದ್ದಾರೆ. ಇವುಗಳಲ್ಲಿ 11 ಪಕ್ಷಗಳು ಮಾನ್ಯತೆಯನ್ನೇ ಪಡೆದಿಲ್ಲ. ಇಂತಹವರೊಂದಿಗೆ ಪ್ರಧಾನಮಂತ್ರಿಗಳು ಭಾಗವಹಿಸುವುದು ಅಗೌರವ ಎಂದು ಹೇಳಲು ಸಾಧ್ಯವೇ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಉಪಸಭಾಧ್ಯಕ್ಷರು ದಲಿತರು ಎನ್ನುವ ಟ್ರಂಪ್ ಕಾರ್ಡ್ ತೇಲಿಬಿಟ್ಟ ಸರ್ಕಾರ: ಕುಮಾರಸ್ವಾಮಿ ಕಿಡಿ
“ರಾಜ್ಯದಲ್ಲಿ ಬರಗಾಲದಂತಹ ತೀವ್ರ ಸಮಸ್ಯೆಗಳು, ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ಮಾವು ಬೆಳೆಗಾರರ ಸಂಕಷ್ಟ ಹಾಗೂ ಅನೇಕ ಸಮಸ್ಯೆಗಳು ಇದ್ದಾಗಲೂ ಇವುಗಳ ಬಗ್ಗೆ ಚರ್ಚಿಸದೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರುಗಳು ಸದನವನ್ನು ಹಾಳು ಮಾಡುತ್ತಿರುವುದು ಸಂವಿಧಾನ ವಿರೋಧಿ ಕೃತ್ಯ” ಎಂದು ಖಂಡಿಸಿದರು.