ಸೈದ್ಧಾಂತಿಕ ರಾಜಿಕೋರತನ: ಕಾಂಗ್ರೆಸ್ ತೆತ್ತ ದುಬಾರಿ ಬೆಲೆಯ ಇತಿಹಾಸ

Date:

Advertisements
ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸುವುದಿಲ್ಲ ಎಂಬುದು ಎಷ್ಟು ಸತ್ಯವೊ, ಇತಿಹಾಸದಿಂದ ಪಾಠ ಕಲಿಯದವನು ಇತಿಹಾಸದ ಪುಟ ಸೇರುತ್ತಾನೆ ಎಂಬುದೂ ಅಷ್ಟೇ ಸತ್ಯ. ಕಾಂಗ್ರೆಸ್ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.

ಕಳೆದ ವಾರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಎರಡು ಸುದ್ದಿಗಳು ಗಮನ ಸೆಳೆಯುವಂತಿದ್ದವು. ಮೊದಲನೆಯದು: ಪುತ್ತೂರಿನ ಕಾಂಗ್ರೆಸ್ ಶಾಸಕ ಆರ್‍ಎಸ್ಎಸ್ ಸಭೆಯಲ್ಲಿ ಪಾಲ್ಗೊಂಡಿದ್ದದ್ದು. ಎರಡನೆಯದು: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಒಳ ಒಪ್ಪಂದವನ್ನು ತಡೆಯಲು ಕಾಂಗ್ರೆಸ್ ಕಾರ್ಯಪಡೆಯೊಂದನ್ನು ರಚಿಸಿರುವುದು.

ಈ ಎರಡು ಸುದ್ದಿಗಳು ಕಾಂಗ್ರೆಸ್ ಪಕ್ಷದಲ್ಲಿ ಮನೆ ಮಾಡಿರುವ ಸೈದ್ಧಾಂತಿಕ ರಾಜಿಕೋರತನವನ್ನು ಮುಖಕ್ಕೆ ರಾಚುವಂತಿದ್ದವು. ಹಾಗೆ ನೋಡಿದರೆ, ಕಾಂಗ್ರೆಸ್ ತನ್ನ ಅವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ, ರಾಷ್ಟ್ರ ರಾಜಕಾರಣದಲ್ಲಿ ಅಪ್ರಸ್ತುತವಾಗುತ್ತಿರುವುದಕ್ಕೆ ಪ್ರಮುಖ ಕಾರಣವೇ ಈ ಸೈದ್ಧಾಂತಿಕ ರಾಜಿಕೋರತನ. ದೇಶದ ಜನ ಸಮುದಾಯವನ್ನು ವಿಭಜಿಸುವಂಥ ಕೆಲಸ ಮಾಡುತ್ತಿರುವ ಮತೀಯವಾದಿ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರದಲ್ಲಿ ಕಾಂಗ್ರೆಸ್ ಪದೇ ಪದೇ ಇಂತಹ ಸೈದ್ಧಾಂತಿಕ ರಾಜಿಕೋರತನ ಪ್ರದರ್ಶಿಸಿದೆ. ಸಂಘ ಪರಿವಾರದ ಕಾರ್ಯಕರ್ತರು ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಘೋಷವಾಕ್ಯವನ್ನು ಕಳೆದ ಒಂದು ದಶಕದಿಂದ ಇಡೀ ದೇಶಾದ್ಯಂತ ಹರಡುತ್ತಿದ್ದರೂ, ಕಾಂಗ್ರೆಸ್ ಮಾತ್ರ ಸೈದ್ಧಾಂತಿಕ ನಿರ್ವೀರ್ಯತೆಯನ್ನು ಪ್ರದರ್ಶಿಸುತ್ತಲೇ ಸಾಗುತ್ತಿದೆ. ಅದಕ್ಕೆ ಈ ಎರಡು ಪ್ರಕರಣಗಳು ಇತ್ತೀಚಿನ ನಿದರ್ಶನ ಮಾತ್ರ. ಆದರೆ, ಕಾಂಗ್ರೆಸ್ ಪಕ್ಷದ ದೊಡ್ಡ ತಲೆಗಳೇ ಸೈದ್ಧಾಂತಿಕ ರಾಜಿಕೋರತನಕ್ಕೆ ಕಟ್ಟುಬಿದ್ದಿದ್ದು, ಅದರಿಂದ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಸಾಗಿದ್ದಕ್ಕೆ ದಶಕಗಳ ಇತಿಹಾಸವಿದೆ.

ಶಾ ಭಾನು ಪ್ರಕರಣ
ದೇಶ ಕಂಡ ಧೀಮಂತ ಪ್ರಧಾನಿ ಇಂದಿರಾ ಗಾಂಧಿಯ ಭೀಕರ ಹತ್ಯೆಯ ನಂತರ ಅವರ ಪುತ್ರ ರಾಜೀವ್ ಗಾಂಧಿ ಆಗಷ್ಟೇ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು. ಎಂದಿನಂತೆ ಅವರ ಸುತ್ತಲಿನ ಕೋಟರಿಯಲ್ಲಿ ಭಟ್ಟಂಗಿಗಳು ನೆರೆದಿದ್ದರು. ಆಧುನಿಕ ಕನಸುಕಂಗಳ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ, ಭಾರತವನ್ನು ಸೂಪರ್ ಪವರ್ ಆಗಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಅದಕ್ಕೆ ಪೂರಕವಾಗಿ ದೇಶಾದ್ಯಂತ ಕಂಪ್ಯೂಟರೀಕರಣ, ಎಟಿಎಂ ಸ್ಥಾಪನೆ ಇತ್ಯಾದಿ ಉಪಕ್ರಮಗಳಿಗೆ ಚಾಲನೆ ನೀಡಿದ್ದರು. ಇಂತಹ ಹೊತ್ತಿನಲ್ಲೇ 1985ರಲ್ಲಿ ಶಾ ಭಾನು ಎಂಬ ಮುಸ್ಲಿಂ ಮಹಿಳೆ ದಾಖಲಿಸಿದ್ದ ಜೀವನಾಂಶಕ್ಕಾಗಿ ಮೊಕದ್ದಮೆಯಲ್ಲಿ ನ್ಯಾಯಾಲಯವು ಆಕೆಯ ಪರ ತೀರ್ಪಿತ್ತಿತ್ತು. ಇದರಿಂದ ಮೂಲಭೂತವಾದಿ ಮುಸ್ಲಿಮರು ಕೆಂಡಾಮಂಡಲವಾದರು. ಶರಿಯತ್ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಬೊಬ್ಬೆ ಹೊಡೆದರು. ಅಷ್ಟೇ ಆಗಿದ್ದರೆ ಅದು ಮುಂದೆ ಭಾರತವನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸುತ್ತಿರಲಿಲ್ಲ. ಬದಲಿಗೆ, ರಾಜೀವ್ ಗಾಂಧಿಗೆ ನಿಕಟವಾಗಿದ್ದ ಮುಸ್ಲಿಂ ನಾಯಕರ ಮೂಲಕ ಆ ತೀರ್ಪಿನ ವಿರುದ್ಧ ಒತ್ತಡ ಹಾಕಿಸಿದರು. ಭಟ್ಟಂಗಿಗಳ ಚಿತಾವಣೆಗೆ ಮಣಿದ ರಾಜೀವ್ ಗಾಂಧಿ, ಆ ತೀರ್ಪನ್ನು ರದ್ದುಗೊಳಿಸುವ ಶಾಸನಾತ್ಮಕ ತಿದ್ದುಪಡಿಯನ್ನು ಜಾರಿಗೆ ತಂದರು. ಈ ಪ್ರಮಾದ ಮುಂದೆ ಹಿಂದೂ ಮತೀಯವಾದಕ್ಕೆ ಗೊಬ್ಬರ ಎರೆಯಿತು.

Advertisements

ರಾಮ್ ಲಲ್ಲಾ ಜನ್ಮಭೂಮಿ ವಿವಾದ
ರಾಜೀವ್ ಗಾಂಧಿ ಪ್ರಧಾನಿಯಾಗುವವರೆಗೂ ಶೈತ್ಯಾಗಾರದಲ್ಲಿದ್ದ ರಾಮ್ ಲಲ್ಲಾ ಜನ್ಮಭೂಮಿ ವಿವಾದ, ಅವರು ಪ್ರಧಾನಿಯಾದ ನಂತರ ಪೆಡಂಭೂತದ ಸ್ವರೂಪ ತಳೆಯಿತು. ಅದಕ್ಕೆ ಕಾರಣ: ಮತ್ತೊಮ್ಮೆ ತಮ್ಮ ಭಟ್ಟಂಗಿಗಳ (ಈ ಬಾರಿ ಹಿಂದೂ ಭಟ್ಟಂಗಿಗಳು) ಮಾತು ಕೇಳಿ ರಾಮ್ ಲಲ್ಲಾ ಪೂಜಾ ಸ್ಥಳದ ದ್ವಾರವನ್ನು ತೆರೆಸಿ, ಅಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಅವಕಾಶ ನೀಡಿದರು. ಅಲ್ಲಿಯವರೆಗೆ ಕೇವಲ ಸಿವಿಲ್ ವ್ಯಾಜ್ಯವಾಗಿದ್ದ ರಾಮ್ ಲಲ್ಲಾ ಜನ್ಮಭೂಮಿ ವಿವಾದ, ಮುಂದಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಅಸ್ಮಿತೆಯ ಸ್ವರೂಪ ಪಡೆಯಿತು. ಕೊನೆಗದು ಧರ್ಮಾಂಧತೆಗೆ ತಿರುಗಿ ಡಿಸೆಂಬರ್ 6, 1992ರಲ್ಲಿ ಬಾಬ್ರಿ ಮಸೀದಿಯ ಧ್ವಂಸದೊಂದಿಗೆ ಪರ್ಯವಸಾನವಾಯಿತು. ಇದರೊಂದಿಗೆ 1980ರ ದಶಕದವರೆಗೆ ಶರಶಯ್ಯೆಯ ಮೇಲೆ ಮಲಗಿದ್ದ ಬಿಜೆಪಿ ಮತ್ತು ಸಂಘ ಪರಿವಾರ ರಾಷ್ಟ್ರ ರಾಜಕಾರಣದ ಚುಕ್ಕಾಣಿ ಹಿಡಿಯುವರೆಗೂ ಏರಲು ಅವಕಾಶವಾಯಿತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಒಳ ಮೀಸಲಾತಿ ತೀರ್ಮಾನ: ಹೋರಾಟಕ್ಕೆ ಸಂದ ಜಯ, ಕಾಯಿಸದಿರಲಿ ಸರ್ಕಾರ

ಬಾಬ್ರಿ ಮಸೀದಿ ಧ್ವಂಸ
ರಾಮ್ ಲಲ್ಲಾ ಪೂಜಾ ಸ್ಥಳದಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ನಂತರ, ಕೇವಲ ಅಯೋಧ್ಯೆಗೆ ಸೀಮಿತವಾಗಿದ್ದ ಸಿವಿಲ್ ವ್ಯಾಜ್ಯವೊಂದು ಇಡೀ ದೇಶವನ್ನೇ ವ್ಯಾಪಿಸಿತು. ರಾಮನ ಹೆಸರಲ್ಲಿ ಕರಸೇವೆ, ರಥಯಾತ್ರೆಗಳೆಲ್ಲ ನಡೆದವು. ಆಗ ಬಿಜೆಪಿಯ ಅಧ್ಯಕ್ಷರಾಗಿದ್ದ ಎಲ್.ಕೆ.ಅಡ್ವಾಣಿ ದೇಶವನ್ನು ಹಿಂದೂ, ಮುಸ್ಲಿಂ ಎಂಬ ಧಾರ್ಮಿಕ ನೆಲೆಯಲ್ಲಿ ವಿಭಜಿಸುವಲ್ಲಿ ದೊಡ್ಡ ಯಶಸ್ಸು ಕಂಡರು. ಬಹುಸಂಖ್ಯಾತತ್ವವನ್ನು ಬಡಿದೆಬ್ಬಿಸಿ, ಆ ಭಾವೋದ್ರೇಕವನ್ನು ಬಿಜೆಪಿಯ ಉತ್ಕರ್ಷಕ್ಕೆ ಸಮರ್ಥವಾಗಿ ಬಳಸಿಕೊಂಡರು. ಅದರ ಪರಿಣಾಮವೇ ಬಾಬ್ರಿ ಮಸೀದಿ ಧ್ವಂಸ.

1992ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಪ್ರಧಾನಿ ಪಿ.ವಿ.ನರಸಿಂಹ ರಾವ್, ಬಿಜೆಪಿಯ ಬಾಯಿಮಾತಿನ ಆಶ್ವಾಸನೆ ನಂಬಿಕೊಂಡು (ಅಥವಾ ಬೇಕಂತಲೆ) ಬಾಬ್ರಿ ಮಸೀದಿಯತ್ತ ಧಾವಿಸಿ ಬರುತ್ತಿದ್ದ ಕರಸೇವಕರನ್ನು ನಿರ್ಲಕ್ಷಿಸಿದರು. ಆಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್, ತಮ್ಮ ಮಾತಿಗೆ ಎರವಾಗಿ ಬಾಬ್ರಿ ಮಸೀದಿಯ ಧ್ವಂಸಕ್ಕೆ ಪ್ರತ್ಯಕ್ಷ ಕುಮ್ಮಕ್ಕು ಕೊಟ್ಟರು. ಆದರೆ, ಆ ಘಟನೆಯಿಂದ ದೊಡ್ಡ ಆಘಾತ ಅನುಭವಿಸಿದ್ದು ಮಾತ್ರ ಕಾಂಗ್ರೆಸ್.

1994ರಲ್ಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪರಾಭವ ಅನುಭವಿಸಿತು. ಅಲ್ಲಿಂದ 2004ರವರೆಗೆ ಒಂದು ದಶಕದ ಕಾಲ ಕಾಂಗ್ರೆಸ್ ಅಧಿಕಾರದ ಸನಿಹಕ್ಕೂ ಬಾರದ ಸ್ಥಿತಿ ನಿರ್ಮಾಣವಾಯಿತು. 2004ರಿಂದ 2014ರವರೆಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತಾದರೂ, 1984ರ ನಂತರ ಕಾಂಗ್ರೆಸ್ ಮತ್ತೆಂದೂ ಕೇಂದ್ರದಲ್ಲಿ ಸ್ವಂತ ಬಹುಮತದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಮುಂದೆ ಕೂಡಾ ಸಾಧ್ಯವಾಗುವುದು ಅನುಮಾನ. ಇಂತಹ ಪತನಕ್ಕೆ ಕಾರಣವಾಗಿದ್ದೇ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ರಾಜಿಕೋರತನ.

ರಾಜಕಾರಣದಲ್ಲಿ ಮತದಾರರು ವೈಯಕ್ತಿಕ ವರ್ಚಸ್ಸಿನಷ್ಟೇ ಸೈದ್ಧಾಂತಿಕ ಬದ್ಧತೆಗೂ ಮನ್ನಣೆ ನೀಡುತ್ತಾರೆ. ಬಿಜೆಪಿ ಬಲಪಂಥೀಯ ಪಕ್ಷವಾಗಿದ್ದರೂ, ಅದು ತನ್ನ ಸಿದ್ಧಾಂತಕ್ಕೆ ಬದ್ಧವಾಗಿರುವುದರಿಂದಲೇ ಮತದಾರರು ಅದರತ್ತ ಆಕರ್ಷಿತರಾಗಿದ್ದಾರೆ. ಅದೇ ಮಾತನ್ನು ಕಾಂಗ್ರೆಸ್ ಬಗ್ಗೆ ಹೇಳಲು ಬರುವುದಿಲ್ಲ. ಅಧಿಕಾರಕ್ಕೆ ಬರುವವರೆಗೂ ಜಾತ್ಯತೀತ ತತ್ವಗಳ ಭಜನೆ ಮಾಡುವ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಪಕ್ಷದೊಳಗೇ ಇರುವ ಬಲಪಂಥೀಯರ ಹಂಗಿಗೆ ಸಿಕ್ಕಿ ಬೀಳುತ್ತದೆ. ಇತ್ತೀಚೆಗಂತೂ ಹಿಂದೂ ಬಲಪಂಥೀಯರ ವಿಪರೀತ ಮರ್ಜಿಗೊಳಗಾಗುತ್ತಿದೆ. ಹೀಗಾಗಿಯೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಬಿಜೆಪಿ ಲೋಕಸಭೆಯಲ್ಲಿ ಮಂಡಿಸಿದಾಗ, ಚುನಾವಣಾ ಲಾಭ-ನಷ್ಟದ ಲೆಕ್ಕದಲ್ಲಿ ಕಾಂಗ್ರೆಸ್ ಕೂಡಾ ಆ ಮಸೂದೆಯನ್ನು ಬೆಂಬಲಿಸಿತ್ತು. ಕಾಂಗ್ರೆಸ್ ಮಾಡಿದ ಆ ಪ್ರಮಾದದಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಅಸಾಂವಿಧಾನಿಕ ಮೀಸಲಾತಿ ದೊರೆತಿರುವುದು ಮಾತ್ರವಲ್ಲ; ಬಹು ದೊಡ್ಡ ಸಮುದಾಯವೊಂದು ಬಿಜೆಪಿ ಪರ ವಾಲಲು ತಾನೇ ಪ್ರತ್ಯಕ್ಷ ಕಾರಣವಾಯಿತು. ಸೈದ್ಧಾಂತಿಕ ಬದ್ಧತೆಯೊಂದಿಗೆ ರಾಜಿ ಮಾಡಿಕೊಂಡಾಗ ಅನುಭವಿಸಬೇಕಾದ ಲುಕ್ಸಾನು ಇದು.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ, ಮುಸ್ಲಿಂ ಮತದಾರರನ್ನು ಓಲೈಸಲು ಶಾ ಭಾನು ಪ್ರಕರಣದಲ್ಲಿ ಅನಗತ್ಯವಾಗಿ ದುಡುಕಿದರು. ಅದರ ಬೆನ್ನಿಗೇ ಹಿಂದೂ ಮತದಾರರನ್ನು ಓಲೈಸಲು ರಾಮ್ ಲಲ್ಲಾ ಪೂಜಾ ಸ್ಥಳದ ದ್ವಾರವನ್ನು ತೆರೆದು ಸಂಘ ಪರಿವಾರ ಮತ್ತು ಬಿಜೆಪಿಯ ಬ್ರಹ್ಮ ರಾಕ್ಷಸ ಬೆಳವಣಿಗೆಗೆ ಕಾರಣೀಭೂತರಾದರು.

ಇದನ್ನು ಓದಿದ್ದೀರಾ?: ವಕ್ಫ್‌ ಆಸ್ತಿ ದೇವರ ಹೆಸರಿನಲ್ಲಿ ಮುಸ್ಲಿಮರೇ ನೀಡಿದ ದಾನ; ರಾಜಕೀಯ ಕಾರಣಕ್ಕೆ ಕೆಸರೆರಚಾಟ ಸಲ್ಲದು

ಈಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸರದಿ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಆರ್‍‌ಎಸ್ಎಸ್ ವಿರುದ್ಧ ರಾಜೀರಹಿತ ಸಮರ ಸಾರಿದ್ದರೆ, ಇತ್ತ ಅದೇ ಪಕ್ಷದ ಸಂಘ ಪರಿವಾರದ ಹಿನ್ನೆಲೆಯ ಶಾಸಕರು ಆರ್‍‌ಎಸ್ಎಸ್ ಸಭೆಗಳಲ್ಲಿ ಯಾವುದೇ ಅಳುಕಿಲ್ಲದೆ ಭಾಗವಹಿಸುತ್ತಿದ್ದಾರೆ. ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂಬ ಧೋರಣೆಯನ್ನು ಬಹಿರಂಗವಾಗಿಯೇ ಪ್ರದರ್ಶಿಸುತ್ತಿದ್ದಾರೆ. ಹೀಗಿದ್ದೂ, ಅಂಥವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವ, ಬಗ್ಗದಿದ್ದರೆ, ಅಂತವರನ್ನು ಪಕ್ಷದಿಂದ ಅಮಾನತುಗೊಳಿಸುವ ಧೈರ್ಯವನ್ನೇ ರಾಜ್ಯ ಕಾಂಗ್ರೆಸ್ ನಾಯಕರು ಮಾಡುತ್ತಿಲ್ಲ. ಬದಲಿಗೆ ಸಂಘ ಪರಿವಾರದ ಹಿನ್ನೆಲೆಯ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿಯನ್ನು ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸುಧಾರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿದೆ. ಅಲ್ಲಿಗೆ ರಾಜ್ಯ ಕಾಂಗ್ರೆಸ್ ನಾಯಕರು ರಾಜೀವ್ ಗಾಂಧಿ ಇಟ್ಟ ಹೆಜ್ಜೆಯಲ್ಲೇ ತಮ್ಮ ಹೆಜ್ಜೆಯನ್ನೂ ಶಿರಸಾವಹಿಸಿ ಇಡುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷ ಅಪ್ರಸ್ತುತವಾಗಲು ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

RSS 1 1

ಬಿಜೆಪಿ ಬಲಪಂಥೀಯ ಪಕ್ಷವೇ ಆಗಿದ್ದರೂ, ಅದರ ಆಕ್ರಮಣಕಾರಿ ಸೈದ್ಧಾಂತಿಕತೆ ಹಾಗೂ ಅದರೆಡೆಗೆ ಅದಕ್ಕಿರುವ ಬದ್ಧತೆಯೇ ಅದನ್ನಿಂದು ಬಲಿಷ್ಠ ಪಕ್ಷವನ್ನಾಗಿಸಿರುವುದು ಎಂಬ ಸತ್ಯವನ್ನು ಯಾರೂ ಮರೆಯಬಾರದು. ಒಂದು ಸಿದ್ಧಾಂತಕ್ಕೆ ಬದ್ಧವಾಗುವುದೆಂದರೆ, ಅಂತಹ ಸಿದ್ಧಾಂತವನ್ನು ನಂಬಿರುವ ವ್ಯಕ್ತಿಯೊಬ್ಬನಿಗೆ ರಕ್ಷಣೆಯ ಭರವಸೆ ನೀಡಿದಂತೆ. ಅಂತಹ ರಕ್ಷಣೆಯ ಭರವಸೆಯೇ ಇಲ್ಲವಾದಾಗ, ಯಾವ ಸಮುದಾಯದ ಮತದಾರನಾದರೂ ತಾನು ಒಪ್ಪಿಕೊಂಡಿದ್ದ, ಅಪ್ಪಿಕೊಂಡಿದ್ದ ಪಕ್ಷದಿಂದ ದೂರ ಸರಿದೇ ಸರಿಯುತ್ತಾನೆ. ತನಗೆ ರಕ್ಷಾಕವಚವಾಗಬಲ್ಲ ಪಕ್ಷವೊಂದನ್ನು ಆಶ್ರಯಿಸಿಯೇ ತೀರುತ್ತಾನೆ. ಕಾಂಗ್ರೆಸ್ ಪತನದ ಬೀಜ ಇರುವುದೇ ಇಂತಹ ಮತದಾರನ ವಿಮುಖತೆಯಲ್ಲಿ.

ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸುವುದಿಲ್ಲ ಎಂಬುದು ಎಷ್ಟು ಸತ್ಯವೊ, ಇತಿಹಾಸದಿಂದ ಪಾಠ ಕಲಿಯದವನು ಇತಿಹಾಸದ ಪುಟ ಸೇರುತ್ತಾನೆ ಎಂಬುದೂ ಅಷ್ಟೇ ಸತ್ಯ. ಕಾಂಗ್ರೆಸ್ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ

1 COMMENT

  1. ಬಹಳ ದಿಟ್ಟ ಲೇಖನ.

    ಸಿಧ್ಧರಾಮಯ್ಯನವರು ಇದನ್ನು ಓದಿ ಕೂತು ಧ್ಯಾನಿಸುವಂತಿದ್ದರೆ !
    ರಾಹುಲ್ ಗಾಂಧಿಗೆ ಇದು ತಲುಪುವಂತಿದ್ದರೆ !

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X