- ಆರ್‌ಎಎಫ್ ನಿಯೋಜನೆ ಸೇರಿ, ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೇವೆ
- ಪ್ರತಿಭಟನೆ ಮಾಡಲು ನಮ್ಮ ತಕರಾರು ಇಲ್ಲ. ಆದರೆ ರಾಜಕೀಯ ಬೇಡ
ರಾಜ್ಯದ ನೆಲ ಜಲದ ವಿಚಾರದಲ್ಲಿ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಬಹುದು. ಆದರೆ, ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಮಾಡಬಾರದು. ಮಂಡ್ಯ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ನಿಯೋಜನೆ ಸೇರಿ, ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಪ್ರತಿಭಟನಾಕಾರರು ಜನ ಸಾಮಾನ್ಯರಿಗೆ ತೊಂದರೆ ಮಾಡಬಾರದು ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಮನವಿ ಮಾಡುತ್ತೇನೆ. ಒಂದು ವೇಳೆ ಅಹಿತಕರ ಘಟನೆಗಳು ನಡೆದರೆ ಪೊಲೀಸರು ಕಾನೂನು ಕ್ರಮಕೈಗೊಳ್ಳುತ್ತಾರೆ” ಎಂದು ಎಚ್ಚರಿಸಿದರು.
“ಕೆಆರ್‌ಎಸ್, ಮಂಡ್ಯ ಜಿಲ್ಲೆ ಮತ್ತು ಪ್ರತಿಭಟನೆ ನಡೆಯುವ ಕಡೆಗಳಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೇವೆ. ಕಾನೂನು ಬಾಹಿರ ಚಟುವಟಿಕೆಗಳು ನಡೆಯುವುದಿಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಶಾಂತಿಗೆ ಭಂಗ ತಂದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಕಾವೇರಿ | ಸರ್ಕಾರ ಉಡಾಫೆ ಮುಂದುವರೆಸಿದರೆ ಜನ ದಂಗೆ ಏಳುತ್ತಾರೆ : ಬೊಮ್ಮಾಯಿ ಎಚ್ಚರಿಕೆ
ಮಂಡ್ಯ ಬಂದ್‌ಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿ, “ಪ್ರತಿಭಟನೆ ಮಾಡಲು ನಮ್ಮ ತಕರಾರು ಇಲ್ಲ. ಆದರೆ ರಾಜಕೀಯ ಮಾಡಬಾರದು. ಬಿಜೆಪಿ ಜವಾಬ್ದಾರಿಯಿಂದ ವರ್ತಿಸುತ್ತದೆ ಎಂದು ಭಾವಿಸುತ್ತೇನೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದರಲ್ಲಿ ಅರ್ಥವಿಲ್ಲ” ಎಂದು ಹೇಳಿದರು.
“ಬಿಜೆಪಿಯವರು ಬೇರೆ ವಿಚಾರಗಳಲ್ಲಿ ರಾಜಕೀಯ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ನೀರು ಬಿಡುವ ಮೊದಲು ಮತ್ತು ನಂತರ ಒಟ್ಟು ಎರಡು ಬಾರಿ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದೆವು. ಸರ್ಕಾರ ಜತೆ ಇರುತ್ತೇವೆ ಎಂದು ವಿರೋಧಪಕ್ಷಗಳು ಭರವಸೆ ನೀಡಿವೆ. ಆ ಪ್ರಕಾರ ನಡೆದುಕೊಳ್ಳಬೇಕು” ಎಂದರು.