ಕಾಂಗ್ರೆಸ್ ಹೈಕಮಾಂಡ್‌ಗೆ ಮಾನ ಮರ್ಯಾದೆ ಇದ್ದರೆ ಸಿಎಂ, ಡಿಸಿಎಂ ಕಿತ್ತೆಸೆಯಲಿ: ಹೆಚ್‌ ಡಿ ಕುಮಾರಸ್ವಾಮಿ ಕಿಡಿ

Date:

Advertisements

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿತಕ್ಕೆ ಸರಕಾರವೇ ನೇರ ಹೊಣೆ. ಕಾಂಗ್ರೆಸ್ ಹೈಕಮಾಂಡ್‌ಗೆ ಮಾನ ಮರ್ಯಾದೆ, ಕನ್ನಡಿಗರ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ತಕ್ಷಣವೇ ಈ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಕಿತ್ತೆಸೆಯಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಎನ್‌ಡಿಎ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಮಾತನಾಡಿದರು.

“ದುರಂತಕ್ಕೆ ಮುಖ್ಯಮಂತ್ರಿ ಮತ್ತವರ ಕಚೇರಿ ನೇರ ಕಾರಣ. ಎರಡು ಮೂರು ಕಡೆ ವಿಜಯೋತ್ಸವ ಮಾಡಲು ಸಾಧ್ಯವಿಲ್ಲ. ಭದ್ರತೆ ಕೊಡುವುದು ಕಷ್ಟ ಆಗುತ್ತದೆ ಎಂದು ಪೊಲೀಸರು ಪರಿಪರಿಯಾಗಿ ಹೇಳಿದರೂ ಕೇಳದೇ ವಿಜಯೋತ್ಸವ ಆಗಲೇಬೇಕು ಎಂದು ಸಿಎಂ ಪಟ್ಟು ಹಿಡಿದರು. ಅಲ್ಲದೆ ಪೊಲೀಸರಿಗೆ ತಾಕೀತು ಮಾಡಿ ಧಮ್ಕಿಯನ್ನು ಹಾಕಿದ್ದರು” ಎಂದು ಆರೋಪ ಮಾಡಿದರು.

Advertisements

“ವಿಜಯೋತ್ಸವ ಆಚರಣೆಗೆ ಆರ್‌ಸಿಬಿ ಪೊಲೀಸರ ಅನುಮತಿ ಕೇಳಿತ್ತು. ಆ ಮನವಿಯನ್ನು ಪೊಲೀಸರು ತಿರಸ್ಕರಿಸಿದ್ದರು. ಹಾಗಿದ್ದರೂ ವಿಜಯೋತ್ಸವ ಆಗಲೇಬೇಕು ಎಂದು ಸಿಎಂ ತಾಕೀತು ಮಾಡಿದ್ದು ಯಾಕೆ? ಹನ್ನೊಂದು ಜನರ ಸಾವಿಗೆ ಸಿಎಂ, ಡಿಸಿಎಂ ಹಾಗೂ ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ಅವರೇ ಕಾರಣ. ಮಾತೆತ್ತಿದರೆ ನಾವು ಜನರ ಪರ ಎಂದು ರಾಗಾ ತೆಗೆಯುವ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇವರಿಂದ ರಾಜಿನಾಮೆ ಪಡೆಯಬೇಕು. ಮಾತೆತ್ತಿದರೆ ಸಿಎಂ ಗೋವಿಂದ.. ಗೋವಿಂದ.. ಎನ್ನುತ್ತಾರಲ್ಲ.. ಈ ದುರಂತಕ್ಕೆ ಮೂಲ ಪುರುಷನೇ ಆತ” ಎಂದು ಕೇಂದ್ರ ಸಚಿವರು ಆರೋಪಿಸಿದರು.

ತಪ್ಪು ಮಾಡಿದ್ದು ಸರ್ಕಾರ

“ತಪ್ಪು ಮಾಡಿದ್ದು ಸರ್ಕಾರ, ಶಿಕ್ಷೆಗೆ ಗುರಿಯಾಗಿದ್ದು ಅಧಿಕಾರಿಗಳು. ದಕ್ಷ ಪೊಲೀಸ್ ಆಯುಕ್ತ ದಯಾನಂದ ಅವರೂ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಕೆಟ್ಟ ಸಂದೇಶ ನೀಡಿದೆ. ದಯಾನಂದ ಅವರು ಹೊಸ ವರ್ಷದ ಆಚರಣೆ, ಅನೇಕ ಕ್ರಿಕೆಟ್ ಪಂದ್ಯಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಅವರೇ ನಗರದ ಪೊಲೀಸ್ ಕಮೀಷನರ್ ಅಗಿದ್ದರು. ಹೊಸ ವರ್ಷದ ಹಿಂದಿನ ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಲಕ್ಷಾಂತರ ಜನ ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆ ಮಾಡಿದ್ದರು, ಅಂಥ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಇವರು ಯಾವ ರೀತಿಯ ಸಂದೇಶ ನೀಡಿದ್ದಾರೆ” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ

ಗೋವಿಂದ ರಾಜ್ ಕಾರಣ

“ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ಎಂಬ ವ್ಯಕ್ತಿ ಇಷ್ಟೆಲ್ಲಾ ಸಾವು ನೋವುಗಳಿಗೆ ಕಾರಣ. ಅವರ ಬಗ್ಗೆ ಏನೇನೋ ಕಥೆಗಳನ್ನು ಹೇಳುತ್ತಾರೆ. ಸುತ್ತಲೂ ಸಿಎಂ ಅವರು ಎಂತಹ ವ್ಯಕ್ತಿಗಳನ್ನು ಇಟ್ಟುಕೊಂಡಿದ್ದಾರೆ ಎಂಬುದು ಪ್ರಶ್ನಾರ್ಹ. ರಾಜ್ಯದಲ್ಲಿ ಈ ಸರ್ಕಾರದ ಮಾನ ಮರ್ಯಾದೆ ಉಳಿಯಬೇಕು ಎನ್ನುವುದಾದರೆ ತಮ್ಮ ಸುತ್ತಮುತ್ತ ಇರುವ ಇಂತಹ ಕೆಟ್ಟ ಹುಳಗಳನ್ನು ಮೊದಲು ಕಿತ್ತು ಬಿಸಾಡಬೇಕು” ಎಂದು ಕುಮಾರಸ್ವಾಮಿ ಆಗ್ರಹಿಸಿದರು.

“ಕಾಂಗ್ರೆಸ್ ಹೈಕಮಾಂಡ್ ಎನ್ನುವುದು ಇದ್ದರೆ, ಅದಕ್ಕೆ ಸಂಕೋಚ ನಾಚಿಕೆ ಎನ್ನುವುದು ಇದ್ದರೆ ಮೊದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ತೆಗೆದು ಅವರ ಜಾಗಕ್ಕೆ ಸಭ್ಯರನ್ನು ತರಬೇಕು. ಕುಮಾರಸ್ವಾಮಿ ಅವರು ಮಾತಾಡಿದರೆ ಅಸೂಯೆ ಎಂದು ಟೀಕೆ ಮಾಡುತ್ತಾರೆ. ನಾನು ಮಂತ್ರಿ ಆಗಿದ್ದೇನೆ. ಪ್ರಧಾನಿ ಮೋದಿ ಅವರು ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅವರ ದೂರದೃಷ್ಟಿ ಅನುಸಾರ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ನನಗೆ ಅಸೂಯೆ ಎನ್ನುವುದು ಯಾಕೆ ಬರುತ್ತದೆ” ಎಂದು ಕುಟುಕಿದರು.

“ವರ್ಚಸ್ಸು ಹೆಚ್ಚಿಸಿಕೊಳ್ಳುವ, ಪ್ರಚಾರದ ಹಪಾಹಪಿಗೆ ಸಿಕ್ಕಿ ಸಿಎಂ, ಡಿಸಿಎಂ ಇಬ್ಬರೂ ಈ ದುರ್ಘಟನೆಗೆ ಕಾರಣರಾಗಿದ್ದಾರೆ. ಕನಕಪುರದ ಡಿಸಿಎಂ ಡಿಸಿಎಂ ಡಿ.ಕೆ. ಶಿವಕುಮಾರ್ ಶೋ ಕೊಟ್ಟಿದ್ದರ ಫಲ ಇದು. ಅವರು ಕೋರ್ಟ್‌ನಲ್ಲಿದ್ದರೂ, ಒಂದು ಕೇಸಿನ ನಿಮಿತ್ತ ಅವರು ಕನಕಪುರದ ಕೋರ್ಟ್ ನಲ್ಲಿ ಇದ್ದರು. ರಾಯಲ್ ಚಾಲೆಂಜರ್ಸ್ ತಂಡ ಬೆಂಗಳೂರಿಗೆ ಬರುತ್ತಿದೆ. ತಂಡವನ್ನು ಸ್ವಾಗತಿಸಲು ಸಿಎಂ, ಮತ್ತವರ ಪಟಾಲಂ ಸಜ್ಜಾಗಿದೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ತಂಡಕ್ಕೆ ಸನ್ಮಾನ ಮಾಡಲು ಸಿಎಂ ಟೀಮ್ ನಿರ್ಧಾರ ಮಾಡಿದೆ ಎಂದು ಡಿಸಿಎಂ ಡಿಕೆಶಿಗೆ ಮಾಹಿತಿ ಹೋಗುತ್ತದೆ. ಇದರಿಂದ ಕೋರ್ಟ್ ನಲ್ಲಿಯೇ ಕಕ್ಕಾಬಿಕ್ಕಿಯಾದ ಡಿಕೆಶಿ, ಅಲ್ಲಿಂದಲೇ ನೇರವಾಗಿ ಕೈಯ್ಯಲ್ಲಿ ಆರ್ ಸಿಬಿ ಬಾವುಟ ಹಿಡಿದು ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬರುತ್ತಾರೆ” ಎಂದು ವಿವರಿಸಿದರು.

ಡಿಕೆಶಿಗೆ ತಾನೇ ಕಪ್ ಗೆದ್ದಷ್ಟು ಉಮೇದು

“ಕಪ್ ಗೆದ್ದವರು ಆಟಗಾರರು. ಅದರೇ ಡಿಕೆಶಿಗೆ ತಾನೇ ಕಪ್ ಗೆದ್ದಷ್ಟು ಉಮೇದು. ಅಲ್ಲಿಂದಲೇ ಕಪ್ ಗೆ ಅವರಿಂದ ಮುತ್ತಿನ ಸುರಿಮಳೆ ಶುರುವಾಯಿತು. ಅಲ್ಲಿ ಡಿಸಿಎಂ ಅವರು ವಿರಾಟ್ ಕೊಹ್ಲಿಗೆ ಕನ್ನಡದ ಬಾವುಟ ಕೊಟ್ಟರು. ಆದರೆ ಡಿಸಿಎಂ ಅವರು ಕನ್ನಡ ಶಾಲು ಹಾಕಿಕೊಳ್ಳದೆ ಕುತ್ತಿಗೆಯ ಸುತ್ತ ವಿದೇಶಿ ಮಫ್ಲರ್ ಹಾಕಿದ್ದರು. ಆದರೆ, ಕೊಹ್ಲಿ ಪುನಾ ಆ ಕನ್ನಡ ಬಾವುಟವನ್ನು ಡಿಕೆಶಿಗೆ ವಾಪಸ್ಸು ಕೊಟ್ಟರು. ಇಷ್ಟೆಲ್ಲಾ ನಾಟಕ ಆಡುವ ಅಗತ್ಯ ಇದೆಯಾ” ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

“ವಿಧಾನಸೌಧ ಮೆಟ್ಟಿಲು ಮೇಲಿನ ವೇದಿಕೆಯಲ್ಲಿ ನಡೆದ ವಿಜಯೋತ್ಸವ ಸರ್ಕಾರಿ ಕಾರ್ಯಕ್ರಮ ಆಗಿರಲಿಲ್ಲ. ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು ಸೇರಿ ಕುಟುಂಬದ ಕಾರ್ಯಕ್ರಮ ಆಗಿತ್ತು. ಸನ್ ಗ್ಲಾಸ್ ಹಾಕಿಕೊಂಡು ಎಲ್ಲಾರೂ ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು. ವೇದಿಕೆಯ ಮೇಲೆಯೇ ಡಿಕೆಶಿ ಒಬ್ಬರ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಹಿಡಿದು ಆಚೆ ತಳ್ಳಿದರು” ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಸಾವಿನ ನಡುವೆ ಸಿಎಂ, ಡಿಸಿಎಂ ಶೋಕಿ

“ಕಾಲುತುಳಿತದಲ್ಲಿ ಮೊದಲ ಸಾವು ಅಪರಾಹ್ನ 3.10ಕ್ಕೆ ಸಂಭವಿಸಿದೆ. ಆದರೆ, ಡಿ.ಕೆ.ಶಿವಕುಮಾರ್ ಮೈದಾನಕ್ಕೆ ಹೋಗಿ ಅಲ್ಲಿ ಕಪ್‌ಗೆ ಮುತ್ತಿಕ್ಕುತ್ತಿದ್ದರು. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ತಮ್ಮ ಮೊಮ್ಮಗನನ್ನು ಕರೆದುಕೊಂಡು ಹೋಗಿ ಜನಾರ್ದನ ಹೊಟೇಲ್‌ಗೆ ಮಸಾಲೆ ದೋಸೆ, ಹಲ್ವಾ ತಿನ್ನುತ್ತಿದ್ದರು. ಸತ್ಯಮೇವ ಜಯತೆ ಅಂತಾರೆ. ಕಂಡೋರ ಮಕ್ಕಳ ಸಾವು ಇವರಿಗೆ ಸತ್ಯಮೇವ ಜಯತೇಯೇ? ಇವರಿಗೆ ನಾಚಿಕೆ ಆಗಬೇಕು. ಕೋರ್ಟ್ ಛೀಮಾರಿ ಹಾಕಿದ ಮೇಲೆ ಇವರಿಗೆ ಎಚ್ಚರವಾಗಿದೆ” ಎಂದರು.

ಗೃಹ ಸಚಿವರು ಕೀಲುಗೊಂಬೆ ಥರ ಆಗಿದ್ದಾರೆ!

“ಗೃಹ ಸಚಿವ ಜಿ.ಪರಮೇಶ್ವರ್ ಓರ್ವ ನಿಷ್ಕ್ರಿಯ ಸಚಿವರು. ಪಾಪ.. ಅವರು ಕೀಲುಗೊಂಬೆ ಇದ್ದಂತೆ. ಕೀ ಕೊಟ್ಟರೆ ಮಾತ್ರ ಮೇಲೆ ಏಳುತ್ತಾರೆ. ಇಲ್ಲವಾದರೆ ಇಲ್ಲ. ಅವರನ್ನು ನೋಡಿದರೆ ಪಾಪ ಎನಿಸುತ್ತದೆ ಎಂದು ಕುಟುಕಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಎಷ್ಟು ಜನ ಸೇರುತ್ತಾರೆ? ಎಂಬುದು ಸರಕಾರಕ್ಕೆ ಗೊತ್ತಿಲ್ಲವೇ? ಗುಪ್ತದಳ ಏನು ಮಾಡುತ್ತಿತ್ತು. ಈ ಘಟನೆಯಲ್ಲಿ ಇಂಟಲಿಜೆನ್ಸ್ ತಪ್ಪಿದೆ ಎಂದು ಸರ್ಕಾರ ಒಪ್ಪಿಕೊಂಡರೂ ಅದರ ಮುಖಸ್ಥರನ್ನು ಸಸ್ಪೆಂಡ್ ಮಾಡಿಲ್ಲ ಯಾಕೆ? ಅವರು ಪ್ರಭಾವಶಾಲಿ ಎಂದಾ? ಅಥವಾ ಹೈಕಮಾಂಡ್ ಗೆ ಕೇಳಬೇಕಾ” ಎಂದು ಖಾರವಾಗಿ ಪ್ರಶ್ನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X