ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಬಿ ಎಸ್ ವೈ ಪುತ್ರ ವಿಜಯೇಂದ್ರ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಸಿ ಟಿ ರವಿ, ಪಕ್ಷ ನೇಮಕ ಮಾಡಿದೆ, ‘ಇನ್ನೇನಿದ್ರೂ ಅವರು ಪಕ್ಷ ಕಟ್ಟಿ ಬೆಳೆಸುವ ಕೆಲಸ ಮಾಡಬೇಕಿದೆ. ಈಗ ಏನಾದರೂ ಮಾತನಾಡಿದರೆ ನಮ್ಮ ಮಾತೇ ನಮಗೆ ತಿರುಗುಬಾಣವಾಗುತ್ತದೆ’ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿ ಪ್ರವಾಸ ಮುಗಿಸಿ ಶುಕ್ರವಾರ ತಡರಾತ್ರಿ ಸಿ ಟಿ ರವಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಿಕ್ಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
‘ಬದಲಾಗದೆ ಇರೋದು ಕಾರ್ಯಕರ್ತ ಅನ್ನೋದು. ನಾನೊಬ್ಬ ಈಗ ಸಾಮಾನ್ಯ ಕಾರ್ಯಕರ್ತ ಅಷ್ಟೆ. 35 ವರ್ಷಗಳ ರಾಜಕೀಯದಲ್ಲಿ ಈಗಾಗಲೇ ಬಹಳ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗ ಏನಾದ್ರು ಮಾತನಾಡಿದ್ರೆ ನಮ್ಮ ಮಾತೆ ನಮಗೆ ತಿರುಗುಬಾಣವಾಗುತ್ತದೆ. ಪಕ್ಷ ನೇಮಕ ಮಾಡಿದೆ. ವೈಚಾರಿಕ ಸ್ಪಷ್ಟತೆಯ ಜೊತೆಗೆ ವಿಜಯೇಂದ್ರ ಪಕ್ಷ ಕಟ್ಟುವ ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಇದೆ. ಯಶಸ್ವಿಯಾಗಲಿ. ಅಸಮಾಧಾನದ ಬಗ್ಗೆ ಈಗ ನಾನು ಏನು ಮಾತನಾಡಲ್ಲ. ಈಗಾಗಲೆ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೀನಿ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿವರೆಗೆ ಜವಾಬ್ದಾರಿ ನಿರ್ವಹಿಸಿದ್ದೇನೆ’ ಎಂದು ತಿಳಿಸಿದರು.
ತಮ್ಮ ಹೆಸರು ಕೊನೆಯವರೆಗೂ ಕೇಳಿ ಬಂದಿತ್ತು. ಆದರೆ ನೇಮಕವಾಗದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆಯೇ, ‘ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಉತ್ತರಿಸುವ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿ, ಸಿ ಟಿ ರವಿ ತೆರಳಿದರು.