ಏನಾದರೂ ನೋವಾಗಿದ್ದರೆ ದಯವಿಟ್ಟು ಮರೆತು, ಪಕ್ಷಕ್ಕೆ ಸಹಕಾರ ನೀಡಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, “ನಾನು ಈಶ್ವರಪ್ಪ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಾಧ್ಯವಾಗಿಲ್ಲ. ಅವರ ಜೊತೆ ಶೀಘ್ರದಲ್ಲೇ ಮಾತನಾಡುತ್ತೇನೆ. ಅವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಬಿಜೆಪಿ ಹಿತದೃಷ್ಟಿಯಿಂದ ನಮ್ಮೊಂದಿಗೆ ಕೈ ಜೋಡಿಸಿ” ಎಂದು ಈಶ್ವರಪ್ಪಗೆ ಮನವಿ ಮಾಡಿದ್ದಾರೆ.
“ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ಅದಕ್ಕಾಗಿ, ರಾಘವೇಂದ್ರ ಅವರಿಗೆ ಈಶ್ವರಪ್ಪ ಬೆಂಬಲ ನೀಡಿ ಗೆಲ್ಲಿಸಬೇಕು” ಎಂದು ಹೇಳಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಮಗನಿಗೆ ಬಿಜೆಪಿ ಟಿಕೆಟ್ ನೀಡುವಂತೆ ಈಶ್ವರಪ್ಪ ಕೇಳಿದ್ದರು. ಆದರೆ, ಟಿಕೆಟ್ ನೀಡಲಾಗಿಲ್ಲ. ತಮ್ಮ ಮಗನಿಗೆ ಟಿಕೆಟ್ ದೊರೆಯದೇ ಇರುವುದನ್ನು ಯಡಿಯೂರಪ್ಪ ಕಾರಣ ಎಂದು ಆರೋಪಿಸಿರುವ ಈಶ್ವರಪ್ಪ, ಶಿವಮೊಗ್ಗದಲ್ಲಿ ತಾವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ, ದೆಹಲಿಗೆ ಬರುವಂತೆ ಈಶ್ವರಪ್ಪಗೆ ಅಮಿತ್ ಶಾ ಬುಲಾವ್ ನೀಡಿದ್ದರು. ಅದರೆ, ಈಶ್ವರಪ್ಪ ದೆಹಲಿಗೆ ಹೋದರೂ, ಅಮಿತ್ ಶಾ ಭೇಟಿ ಮಾಡಲಾಗಿಲ್ಲ. ಹೀಗಾಗಿ, ತಮ್ಮ ನಿರ್ಧಾರವನ್ನು ಈಶ್ವರಪ್ಪ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.