- ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ತನಕ ಅವರ ಪರ’
- ‘ಎಐಸಿಸಿ ಮುಖಂಡರ ಯಾವ ಸೂಚನೆಗೂ ಅಂಜುವವನಲ್ಲ’
ಗೃಹ ಸಚಿವ ಜಿ.ಪರಮೇಶ್ವರ್ ಬೇಕಾದರೆ ಮುಖ್ಯಮಂತ್ರಿಯಾಗಲಿ. ಬೇರೆಯವರಿಗೆ ಆ ಸ್ಥಾನ ನೀಡಬಾರದು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ತನಕ ಅವರ ಪರ ನಾನು, ಅವರು ಬೇಡ ಎಂದರೆ ಪರಮೇಶ್ವರ್ ಸಿಎಂ ಆಗಲಿ, ನಾವು ಅವರ ಪರ ಇರುತ್ತೇವೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು.
ತುಮಕೂರಲ್ಲಿ ಶುಕ್ರವಾರ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಪರೋಕ್ಷವಾಗಿ ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ಬೇಡ ಎಂಬುದನ್ನು ತಿಳಿಸಿದ್ದಾರೆ.
“ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದರೆ ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು. ನಾಯಕತ್ವ ಬದಲಾವಣೆ, ಸರ್ಕಾರದ ವಿಚಾರದಲ್ಲಿ ಏನೂ ಮಾತನಾಡಬಾರದು ಎಂದು ಎಐಸಿಸಿ ಮುಖಂಡರು ಹೇಳಿದ್ದಾರೆ. ನಾನು, ಇಂತಹ ಯಾವ ಸೂಚನೆಗೂ ಅಂಜುವವನಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಐದು ವರ್ಷ ನಮ್ಮದೇ ಸರ್ಕಾರ, ನಾನೇ ಮುಖ್ಯಮಂತ್ರಿ: ಸಿದ್ದರಾಮಯ್ಯ
“ಈಗ ಮಾತನಾಡಿದ್ದೇನೆ, ಮುಂದೆಯೂ ಮಾತನಾಡುತ್ತೇನೆ. ಏನು ಬೇಕಾದರೂ ಮಾಡಿಕೊಳ್ಳಲಿ. ಮುಂದೆ ಯಾವ ಚುನಾವಣೆಗೂ ನಾನು ಸ್ಪರ್ಧಿಸುವುದಿಲ್ಲ. ಇದು ನನ್ನ ಕೊನೆಯ ಚುನಾವಣೆ” ಎಂದು ಹೈಕಮಾಂಡ್ ವಿರುದ್ಧ ಗುಡುಗಿದರು.
“ಪರಮೇಶ್ವರ್ ಅವರಿಗೆ ಅದೃಷ್ಟ ಇದೆ. ಮುಂದೆ ಏನು ಬೇಕಾದರೂ ಆಗಬಹುದು. ಜಿಲ್ಲೆಯಿಂದ ಒಬ್ಬರು ಮುಖ್ಯಮಂತ್ರಿಯಾದರೆ, ನಾನು ಮುಖ್ಯಮಂತ್ರಿಯಾದಂತೆ. ಅವರಿಗೆ ಉಜ್ವಲ ರಾಜಕೀಯ ಭವಿಷ್ಯ ಇದೆ. ಅದನ್ನು ನೋಡಲು ಕಾತರನಾಗಿದ್ದೇನೆ. ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತೇನೆ” ಎನ್ನುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.