ಸರ್ಕಾರಕ್ಕೆ ಈ ಭ್ರಷ್ಟಾಚಾರ ನಿಲ್ಲಿಸುವ ಎದೆಗಾರಿಕೆ ಇದ್ದರೆ ನಿಲ್ಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಕ್ಸೆಲ್ ಶೀಟ್ ನಾನು ತಯಾರಿಸಿದ್ದಲ್ಲ. ನಾನು ಕೇವಲ ಇರುವ ವಾಸ್ತವ ಪ್ರಸ್ತಾಪ ಮಾಡಿದ್ದೇನೆ ಅಷ್ಟೇ. ಸರಿಪಡಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ” ಎಂದರು.
“ಯಾವ್ಯಾವ ಇಲಾಖೆಗೆ ಎಷ್ಟು ಹಣ ಪಡೆಯುತ್ತಿದ್ದರು ಎಂದು ಇವರೇ ಜಾಹೀರಾತು ಕೊಡಲಿಲ್ಲವೇ? ಹಿಂದಿನ ಸರ್ಕಾರದ ಪಟ್ಟಿಯನ್ನು ಮಾಡಿಕೊಟ್ಟಿದ್ದು ಯಾರು? ಇಲಾಖೆಗಳಲ್ಲಿ ಮಧ್ಯವರ್ತಿಗಳು ಹೆಚ್ಚು ಮಂದಿ ಇದ್ದಾರೆ” ಎಂದು ಮಾರ್ಮಿಕವಾಗಿ ನುಡಿದರು.
“ಹೋಟೆಲ್‌ನಲ್ಲಿ ಅಡ್ಡ ಮಾಡಿಕೊಂಡಿದ್ದೆ ಎಂದು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ನಾನು ಅವರು ಹೇಳುವ ರೀತಿ ಅಡ್ಡ ಮಾಡಿಕೊಂಡಿರಲಿಲ್ಲ. ಬದಲಿಗೆ ವಿಶ್ರಾಂತಿಗಾಗಿ ಮಾತ್ರ ಅಲ್ಲಿಗೆ ಹೋಗುತ್ತಿದ್ದೆ” ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದರು.
“ಭ್ರಷ್ಟಾಚಾರಕ್ಕೆ ಜಾತಿ ವ್ಯವಸ್ಥೆ ಇದೆಯಾ? ಭ್ರಷ್ಟಾಚಾರ ಬಹಿರಂಗ ಮಾಡಿದರೆ ಜಾತಿ ಬಣ್ಣ ಕಟ್ಟುತ್ತಾರೆ. ಭ್ರಷ್ಟಾಚಾರ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ, ಮುಂದೆಯೂ ಮಾಡುತ್ತೇನೆ. ಈಗ ಅಧಿಕಾರಿಗಳು ಪೋಸ್ಟಿಂಗ್ ಪಡೆಯಲು ಹಣ ಕೊಡುತ್ತಿದ್ದಾರೆ. ಮುಂದೆ ಇದೇ ಅಧಿಕಾರಿಗಳು ಅಂತಿಮವಾಗಿ ಜನರ ಜೇಬಿಗೆ ಕೈ ಹಾಕುತ್ತಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ರಾಜಕೀಯ ಅಭದ್ರತೆಯಿಂದ ವರ್ಗಾವಣೆ ದಂಧೆ ಆರೋಪ ಹರಿಬಿಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ
“ನನ್ನ ವಿರುದ್ಧ 150 ಕೋಟಿ ರೂಪಾಯಿ ಹಗರಣದ ಆರೋಪ ಮಾಡಿದ್ದರು. ಈ ಹಗರಣದ ಆರೋಪವನ್ನು ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಬೇರೆ ರೀತಿಯೇ ಆಯಿತು. ನಾನು ತಪ್ಪು ಮಾಡಿಲ್ಲ, ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ” ಎಂದರು.
“ನಾನು ಮಾಡಿದ ಆರೋಪಕ್ಕೆ ದಾಖಲೆ ಕೊಡಿ ಎಂದರೆ ಹಣ ಕೊಡಲು ಸಾಧ್ಯವೆ? ಪೆನ್ ಡ್ರೈವ್ ಬೇರೆ ವಿಚಾರ, ಪೆನ್ ಡ್ರೈವ್ ಖಾಲಿ ಇಲ್ಲ. ಆಪರೇಷನ್ ಮಾಡಿದ ಸಿಡಿ ತರ ಅಲ್ಲ. ಈ ಪೆನ್ ಡ್ರೈವ್ ಬೇರೆಯದ್ದು. ಕಾಂಗ್ರೆಸ್‌ನವರಿಗೆ ಇಷ್ಟು ಆತುರ ಏಕೆ. ಇನ್ನೂ ಕಾದು ನೋಡಿ ಹಲವು ಬರ್ತವೆ” ಎಂದು ಹೇಳಿದರು.
“ನಾನು ಪ್ರಚೋದನೆಗೆ ಒಳಗಾಗುವವನಲ್ಲ. ಈ ದೇಶದ ವ್ಯವಸ್ಥೆ ನೋಡಿದ್ದೇನೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಯಾರಿಂದಲೂ ನಾನು ಸರ್ಟಿಫಿಕೇಟ್ ಪಡೆಯಬೇಕಿಲ್ಲ” ಎಂದು ತಿರುಗೇಟು ನೀಡಿದರು.