ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಹಾಲಿಗೆ ಬೆಲೆ ಏರಿಸಲಾಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ ರೈತರಿಗೆ ಹಣ ಸೇರಬೇಡವೇ? ರೈತರಿಗೆ ಲಾಭ ಬೇಡವೇ? ಹಾಲಿನ ಬೆಲೆ ಏರಿಸದಿದ್ದರೇ ರೈತರಿಗೆ ಲಾಭ ಹೇಗಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಅವರು ಇಂದು (ಸೆ.13) ಮಾಗಡಿ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಹಾಲು ಒಕ್ಕೂಟದ ಮಾಗಡಿ ನೂತನ ಶಿಬಿರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
“ಹಾಲಿಗೆ 5.೦೦ ರೂ.ಗಳ ಪ್ರೋತ್ಸಾಹಧನ ಘೋಷಿಸಿದ್ದು ನಮ್ಮ ಸರ್ಕಾರ. ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಏನೂ ಮಾಡದೇ ರೈತರ ಮಕ್ಕಳು, ಮಣ್ಣಿನ ಮಕ್ಕಳು ಎನ್ನುತ್ತಾರೆ” ಎಂದು ಕುಟುಕಿದರು.
“ಬೆಂಗಳೂರಿನ ಹೊರವಲಯದಲ್ಲಿರುವ ಮಾಗಡಿ ಬಹಳ ಪ್ರಮುಖ ಪಟ್ಟಣ. ಕೆಂಪೇಗೌಡರ ರಾಜಧಾನಿಯಾಗಿದ್ದ ನಗರ. ಮಾಗಡಿ ಅಭಿವೃದ್ಧಿಯಾಗಬೇಕು ಎನ್ನುವ ವಾದದಲ್ಲಿ ನನ್ನ ಸಹಮತವೂ ಇದೆ. ಮಾಗಡಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ಬೆಂಬಲವನ್ನು ಕೊಡಲಿದೆ” ಎಂದರು.
“ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಆಚರಣೆಗೆ ತಂದು ಪ್ರಾಧಿಕಾರವನ್ನೂ ರಚನೆ ಮಾಡಲಾಯಿತು. ಇದರ ಉದ್ದೇಶ ಕೆಂಪೇಗೌಡರನ್ನು ಎಲ್ಲರೂ ಸ್ಮರಿಸಬೇಕು ಎನ್ನುವುದಾಗಿತ್ತು. ಒಕ್ಕಲಿಗರ ನಾಯಕರು ಎಂದು ಹೇಳಿಕೊಳ್ಳುವವರು ಇದನ್ನು ಮಾಡಲಿಲ್ಲ. ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದು, ಅವರ ಜಯಂತ್ಯೋತ್ಸವವನ್ನು ಆಚರಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿ 2016-17ರಲ್ಲಿ ಆಚರಣೆಗೆ ತಂದಿದ್ದು ನಮ್ಮ ಸರ್ಕಾರ” ಎಂದು ಹೇಳಿದರು.
“ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. ಹಾಗಾದರೆ ಅಭಿವೃದ್ಧಿ ಕೆಲಸಗಳಿಗೆ 120 ಕೋಟಿ ರೂ.ಗಳನ್ನು ಅನುದಾನವನ್ನು ಏಕೆ ಮೀಸಲಿಡಲಾಗಿದೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಒಗ್ಗಟ್ಟಿನ ಮಂತ್ರವೇ ಮದ್ದು
ಮೋದಿ 10 ವರ್ಷದ ಅವಧಿಯಲ್ಲಿ ದೇಶದ ಸಾಲ 182 ಲಕ್ಷ ಕೋಟಿ
“ಭಾರತದ ಮೇಲಿನ ಸಾಲ 182 ಲಕ್ಷ ಕೋಟಿಯನ್ನು ಮೀರುತ್ತಿದೆ. ಹಿಂದೆ ಸಾಲದ ಮೊತ್ತ 53.11 ಲಕ್ಷ ಕೋಟಿ ಇದ್ದ ಸಾಲದ ಮೊತ್ತ ಈಗ ಕಳೆದ 10 ವರ್ಷದಲ್ಲಿ 182 ಲಕ್ಷ ಕೋಟಿ ರೂ.ಗೆ ತಲುಪಿದೆ. ಗರೀಬಿ ಹಠಾವೋ, ಆಹಾರಸ್ವಾವಲಂಬನೆಯಂತ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಿದೆ” ಎಂದರು.
ಎಸ್ ಸಿ ಎಸ್ ಪಿ / ಟಿಎಸ್ ಪಿ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ
“ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಅನುದಾನವನ್ನು ಬೇರೆಯವರಿಗೆ ನೀಡಲಾಗಿದೆ ಎಂದು ಸುಳ್ಳು ನುಡಿದರು. ಆದರೆ 89.62 ಕೋಟಿ ಮೊತ್ತದ ಅವ್ಯವಹಾರವಾಗಿದ್ದು, ಅದರಲ್ಲಿ 56 ಕೋಟಿ ವಸೂಲು ಮಾಡಲಾಗಿದೆ. ಆದರೂ ಅಭಿವೃದ್ಧಿ ನಿಗಮಕ್ಕೆ ಈ ಮುಂಚೆ ನಿಗದಿಪಡಿಸಿರುವಂತೆ ಅನುದಾನವನ್ನು ನೀಡಿ, ಸಮುದಾಯದ ಅಭಿವೃದ್ಧಿಗೆ ಬಳಸಲಾಗುವುದು. ಎಸ್ ಸಿ ಎಸ್ ಪಿ / ಟಿಎಸ್ ಪಿ ಕಾನೂನನ್ನು ಜಾರಿಗೆ ತಂದಿದ್ದು” ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ರೈತರಿಗೆ ಲಾಭ ಆಗಬೇಕೆಂದು, ಜನ ಸಾಮಾನ್ಯರ ಮೇಲೆ ದರ ಏರಿಸಿ ಸುಲಿಗೆ ಮಾಡಬೇಡಿ. ಮಂತ್ರಿ, ಮಾಗಂದಿಗರಿಗೆ ಕೊಡುವ ಸಂಬಳವನ್ನು ಕಡಿಮೆ ಮಾಡಿ.