- ಸಂಸದ ಪ್ರತಾಪ್ ಸಿಂಹ ಅವರಿಗೂ ಸೋಲಿನ ಭೀತಿ ಕಾಡತೊಡಗಿದೆ
- ರಾಜಕೀಯ ಕುತಂತ್ರದಿಂದ ಕೇಂದ್ರದ ಅಕ್ಕಿ ರಾಜ್ಯಕ್ಕೆ ಬರದಿರುವಂತೆ ತಡೆ
ಕಾಂಗ್ರೆಸ್ ಸರ್ಕಾರವು ‘ಅನ್ನಭಾಗ್ಯ ಯೋಜನೆಯಡಿ ಅರ್ಹರಿಗೆ 10 ಕೆ ಜಿ ಅಕ್ಕಿ ಕೊಟ್ಟರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಬಹುದೆಂಬ ಭೀತಿ ಎದುರಾಗಿದೆ. ಹಾಗಾಗಿ, ರಾಜಕೀಯ ಕುತಂತ್ರದಿಂದ ಕೇಂದ್ರದ ಅಕ್ಕಿ ರಾಜ್ಯಕ್ಕೆ ಬಾರದಿರುವಂತೆ ತಡೆಯಲಾಗಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ.
ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ(ಎಫ್‌ಸಿಐ) ಅಕ್ಕಿ ಕೊಡದಿರುವುದರ ಹಿಂದೆ ರಾಜ್ಯ ಬಿಜೆಪಿ ನಾಯಕರ ಕೈವಾಡ ಇದೆ. ಸಿದ್ದರಾಮಯ್ಯ ಸರ್ಕಾರ ಜನರಿಗೆ ಅಕ್ಕಿ ಕೊಟ್ಟರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ಭೀತಿ ಕಾಡತೊಡಗಿದೆ. ಹಾಗಾಗಿ ಈ ರೀತಿ ಮಾಡಿದ್ದಾರೆ. ರಾಜ್ಯ ಸರ್ಕಾರ ಅಕ್ಕಿ ಕೊಡಬಾರದು, ಪ್ರತಿಭಟನೆ ಯಶಸ್ವಿಯಾಗಬೇಕು ಎನ್ನುವುದು ಬಿಜೆಪಿಯವರ ಧೋರಣೆ. ಇದರ ಹಿಂದೆ ರಾಜ್ಯ ಬಿಜೆಪಿ ಸಂಸದರ ಕುತಂತ್ರ ಇದೆ ಎಂದು ಆರೋಪಿಸಿದರು.
ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗಳ ಬಗ್ಗೆ ಮಾತನಾಡಿದ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ಅವರಿಗೂ ಸೋಲಿನ ಭೀತಿ ಕಾಡತೊಡಗಿದೆ. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಅವರಿಗೆ ಬೈದರೆ ಬಿಜೆಪಿಯಲ್ಲಿ ಸ್ಥಾನಮಾನ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಹಾಗಾಗಿ, ಈ ರೀತಿ ಟೀಕಿಸುವ ಮೂಲಕ ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ಅವರಿಗೆ ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗುತ್ತಾ? ಪ್ರಧಾನಿ ಮೋದಿಯವರ ಹೆಸರು ಹೇಳಿಕೊಂಡೇ ಗೆದ್ದಿದ್ದಾರೆ. ನಿಮ್ಮ ವೈಯಕ್ತಿಕ ವರ್ಚಸ್ಸು ಏನು, ನಿಮ್ಮ ಸಾಧನೆ ಏನು ಎಂದು ಜನರ ಮುಂದೆ ಹೇಳಿ ಎಂದು ಪ್ರದೀಪ್ ಈಶ್ವರ್ ಸವಾಲು ಎಸೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಾಸಕರಿಗೆ ತರಬೇತಿ ಶಿಬಿರ ವಿವಾದ | ಪೂರ್ವಗ್ರಹ ಪೀಡಿತ ಚರ್ಚೆ ಸರಿಯಲ್ಲ: ಯು ಟಿ ಖಾದರ್
ಇದೇ ವೇಳೆ ತಮ್ಮ ಕ್ಷೇತ್ರದ ಅಭಿವೃದ್ಧಿಯ ವಿಚಾರದ ಬಗ್ಗೆ ಮಾತನಾಡಿದ ಶಾಸಕರು, ಚಿಕ್ಕಬಳ್ಳಾಪುರವನ್ನು ಸಿಂಗಾಪುರ ಮಾಡುವುದಕ್ಕೆ ಆಗಲ್ಲ. ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ಆಗುವುದಕ್ಕೆ ಇನ್ನೂ 20 ವರ್ಷಗಳು ಬೇಕು. ಕ್ಷೇತ್ರದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಇಷ್ಟು ವರ್ಷಗಳ ಕಾಲ ಶಾಸಕರು ಆಗಿದ್ದವರು ಏನ್ ಮಾಡಿದ್ದಾರೋ ಗೊತ್ತಿಲ್ಲ. ಹಿಂದಿನ ಶಾಸಕರ ಭ್ರಷ್ಟಾಚಾರ ಬಯಲು ಮಾಡಿದ್ದಕ್ಕೆ ನನ್ನನ್ನು ಜೈಲಿಗೆ ಹಾಕಿಸಿದ್ದರು. ನನಗೆ ಟಾರ್ಚರ್ ಕೊಟ್ಟಿದ್ದಕ್ಕೆ ಇಂದು ನಾನು ಶಾಸಕ ಆಗಿದ್ದೇನೆ. ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.