ರಾಷ್ಟ್ರವನ್ನು ಕಟ್ಟಲು ಮಣಿಪುರವನ್ನು ಪುನರ್ ನಿರ್ಮಿಸುವ ಅಗತ್ಯವಿದೆ. ನೀವು ನನ್ನ ರಾಜ್ಯವನ್ನು ದೃಢವಾಗಿ ನಿರ್ಮಿಸಲು ಬಯಸದಿದ್ದರೆ, ಅದನ್ನು ಆಳುವ ಹಕ್ಕು ನಿಮಗಿಲ್ಲ ಎಂದು ಮಣಿಪುರದ ಸಂಸದ ಆಲ್ಫ್ರೆಡ್ ಕಂಗಮ್ ಎಸ್. ಆರ್ಥರ್ ಹೇಳಿದ್ದಾರೆ.
ಕೇಂದ್ರ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿರುವ ಮಣಿಪುರದಲ್ಲಿನ ಬಜೆಟ್ ಬಗ್ಗೆ ಅವರು ಮಾತನಾಡಿದರು. ರಾಜ್ಯಕ್ಕೆ ನೀಡಲಾಗಿರುವ ಬಜೆಟ್ ಜನವಿರೋಧಿಯಾಗಿದೆ. ರಾಜ್ಯದ ಬೆಟ್ಟ ಮತ್ತು ಕಣಿವೆ ಪ್ರದೇಶಗಳ ಜನರ ಅಗತ್ಯಗಳಿಗೆ ಪೂರಕವಾಗಿಲ್ಲ. ರಾಜ್ಯದಲ್ಲಿ ಸ್ಥಳಾಂತರಗೊಂಡಿರುವ 60,000 ಜನರ ಅವಶ್ಯತೆಗಳನ್ನು ಪೂರೈಸುವುದಿಲ್ಲ. ಸಾವಿರಾರು ಜನರು ಮನೆ, ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಒಟ್ಟು ಹಾಕಿ ಕೇವಲ 20,000 ಕೋಟಿ ಮಾತ್ರವೆಂದು ಅಂದಾಜಿಸಿದೆ. ಆ ಹಾನಿ-ನಷ್ಟಗಳನ್ನು ಮಣಿಪುರ ಬಜೆಟ್ ಲೆಕ್ಕ ಹಾಕಿ, ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಪ್ರತ್ಯೇಕ ಹೊಸ ಬಜೆಟ್ ರೂಪಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಬೆಟ್ಟಗಳು ಮತ್ತು ಕಣಿವೆಯ ಸಮಸ್ಯೆಗಳನ್ನು ಪ್ರತ್ಯೇಕವಾಗಿ ನೋಡಬೇಕಿದೆ. ಪ್ರಸ್ತುತ ಬಜೆಟ್‌ನಲ್ಲಿ ಅಂತಹ ಯಾವುದೇ ಪ್ರತ್ಯೇಕತೆಯಿಲ್ಲ. ಬೆಟ್ಟ ಪ್ರದೇಶಗಳಿಗೆ ಏನು ಯೋಜನೆ ಮತ್ತು ಕಣಿವೆ ಪ್ರದೇಶಕ್ಕೆ ಯಾವ ಯೋಜನೆಗಳಿಗೆ ಎಂಬುದು ನಾವು ತಿಳಿಯುವುದಾದರೂ ಹೇಗೆ? ಇದರಿಂದಾಗಿ, ಹಣಕಾಸು ಸಚಿವರು ಈಗ ರೂಪಿಸಿರುವ ಬಜೆಟ್‌ಅನ್ನು ಬದಿಗಿಟ್ಟು, ಹೊಸ ಬಜೆಟ್ ರೂಪಿಸಿ, ಮಂಡಿಸಬೇಕು. ಅನುದಾನ ಒದಗಿಸಬೇಕು, ಇದರಿಂದ ಬೆಟ್ಟಗಳು ಮತ್ತು ಕಣಿವೆ ಪ್ರದೇಶಕ್ಕೆ ಏನೆಲ್ಲ ದೊರೆಯಲಿದೆ ಎಂಬುದು ಗೊತ್ತಾಗುತ್ತದೆ. ಅವರ ಕಷ್ಟಗಳು ಪರಿಹಾರವಾಗಲು ಸಾಧ್ಯವಾಗುತ್ತದೆ” ಎಂದಿದ್ದಾರೆ.
“ಸರಳ ದಾಖಲೆ ಮತ್ತು ಅನುದಾನದ ಬೇಡಿಕೆಯ ಬಜೆಟ್ ಅನ್ನು ಏಕೆ ಇಷ್ಟು ಜಟಿಲಗೊಳಿಸಲಾಗಿದೆ. ರಾಷ್ಟ್ರದ ಕಾನೂನು ಅಸಮಾನ ಆಸ್ತಿಗಳ ಸೃಷ್ಟಿಯನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಅಂತಹ ಆಸ್ತಿಗಳು ಸೃಷ್ಟಿಯಾದಾಗ, ಸಮಸ್ಯೆಗಳು ಅನಿವಾರ್ಯವಾಗಿ ಉದ್ಭವಿಸುತ್ತವೆ. ಮಣಿಪುರದ 90% ಭಾಗವನ್ನು ಬೆಟ್ಟಗಳು ಆವರಿಸಿವೆ. ಈ ಪ್ರದೇಶದಲ್ಲಿ ಬುಡಕಟ್ಟು ಸಮುದಾಯಗಳು ವಾಸಿಸುತ್ತಿವೆ. ಈ ಸಮುದಾಯಗಳು ಹಿಂಸಾಚಾರದಿಂದ ನೊಂದಿವೆ. ನಷ್ಟ ಅನುಭಿವಿಸಿವೆ. ಅವರಿಗೆ ಆರ್ಥಿಕ ನೆರವಿನ ಅಗತ್ಯವಿದೆ” ಎಂದು ಹೇಳಿದ್ದಾರೆ.
2021ರಲ್ಲಿ ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಅಮಿತ್ ಶಾ ಮತ್ತು ಪ್ರಧಾನ ಮಂತ್ರಿ ಮೋದಿ ಅವರನ್ನು ಭೇಟಿ ಮಾಡಿದ್ದನ್ನು ನೆನಪಿಸಿಕೊಂಡ ಅರ್ಥರ್, “ಮಣಿಪುರದ ಬೆಟ್ಟಗಳಲ್ಲಿ ಬುಡಕಟ್ಟು ಜನರು ಎದುರಿಸುತ್ತಿರುವ ಆಡಳಿತಾತ್ಮಕ ಸವಾಲುಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಮನವಿ ಮಾಡಿದ್ದೆವು. ಗೌರವಾನ್ವಿತ ನಾಯಕರು ಕುಂದುಕೊರತೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈಗ ಮಣಿಪುರದ ಬಜೆಟ್‌ಗೆ ಸಂಬಂಧಿಸಿದಂತೆ ವ್ಯವಹಾರಿಕ ನೀತಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರ ಸರ್ಕಾರವು ಇನ್ನೂ ತನ್ನ ಭರವಸೆಯನ್ನು ಪಾಲಿಸದಿರುವುದು ಆಶ್ಚರ್ಯಕರವಾಗಿದೆ” ಎಂದಿದ್ದಾರೆ.
“ನಾನು ತಳ ವರ್ಗದವರು ಮತ್ತು ಬಡವರಿದ್ದ ಆರು ದಿಶಾ ಸಭೆಗಳ ಅಧ್ಯಕ್ಷತೆ ವಹಿಸಿದ್ದೆ. ಅವರೆಲ್ಲರೂ ಮನರೇಗಾ ಯೋಜನೆಯಡಿ ಕೂಲಿ ಮಾಡಿ ಬದುಕುತ್ತಿದ್ದಾರೆ. ಆದರೆ, 2023 ಮತ್ತು 2024ರಲ್ಲಿ ಯೋಜನೆಯಡಿ 50%ಅಷ್ಟು ಹಣ ಬಿಡುಗಡೆಯೇ ಆಗಿಲ್ಲ. 2025ನೇ ವರ್ಷದಲ್ಲಿ ಯಾವುದೇ ಅನುದಾನ ನೀಡಿಲ್ಲ. ವರ್ಷದಲ್ಲಿ ಕೇವಲ 25 ಮಾನವ ದಿನಗಳ ಕೆಲಸ ನೀಡಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ರಾಷ್ಟ್ರೀಯ ಪಿಂಚಣಿ ಯೋಜನೆಗಳು, ವಿಧವೆಯರಿಗಿರುವ ಯೋಜನೆಗಳು ಮತ್ತು ಮನರೇಗಾ ಹೊರತುಪಡಿಸಿ ಇತರ ಎಲ್ಲ ಯೋಜನೆಗಳಿಗೂ 2023ರ ಮಾರ್ಚ್‌ನಲ್ಲಿ ಕೊನೆಯದಾಗಿ ಅನುದಾನ ಬಿಡುಗಡೆಯಾಗಿದೆ. ಆ ಬಳಿಕ, ಯಾವುದೆ ಯೋಜನೆಗೆ ಹಣ ನೀಡಲಾಗಿಲ್ಲ. ಯಾವುದೇ ಯೋಜನೆಯನ್ನು ಜಾರಿಗೊಳಿಸಲಾಗಿಲ್ಲ. ರಾಜ್ಯದ ಅಗತ್ಯಗಳನ್ನು ಪೂರೈಸುವಲ್ಲಿ ಹಿಂದಿನ ಬಜೆಟ್‌ಗಳು ವಿಫಲವಾಗಿವೆ. ಅಂತಹ ಮತ್ತೊಂದು ಬಜೆಟ್ ಬೇಡ” ಎಂದು ಗಮನ ಸೆಳೆದಿದ್ದಾರೆ
“ಮಣಿಪುರವು ದೇಶದಲ್ಲಿಯೇ ಅತ್ಯಂತ ಕಡಿಮೆ ತಲಾ ಆದಾಯವನ್ನು ಹೊಂದಿದೆ. ರಾಜ್ಯದ ಶೇಕಡಾ 90ಕ್ಕೂ ಹೆಚ್ಚು ಪ್ರದೇಶವು ಗುಡ್ಡಗಾಡು ಪ್ರದೇಶವಾಗಿದ್ದು, ಬೆಳವಣಿಗೆಗೆ ಯಾವುದೇ ಅವಕಾಶವಿಲ್ಲದೆ, ರಾಜ್ಯವು ಅಭಿವೃದ್ಧಿ ಹೊಂದಿಲ್ಲ. ನೀತಿ ಆಯೋಗ, ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವು GSDP ಹೆಚ್ಚಿಸಲು ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು. ಆದರೆ, ಈವರೆಗೆ ಯಾಕೆ ಮಾಡಿಲ್ಲ” ಎಂದು ಪ್ರಶ್ನಿಸಿದ್ದಾರೆ.
“20 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣವಿರುವ ತಮ್ಮ ಕ್ಷೇತ್ರಕ್ಕೆ ಹಣಕಾಸು ಮತ್ತು ಸಾರಿಗೆ ಸಚಿವರು ಭೇಟಿ ನೀಡಬೇಕು. ನಿಮ್ಮ ಸಚಿವಾಲಯಗಳು ಯಾವ ರೀತಿಯ ರಸ್ತೆಗಳನ್ನು ಒದಗಿಸುತ್ತಿದೆ ಎಂಬುದನ್ನು ನೀವೇ ಖುದ್ದು ನೋಡಬೇಕು” ಎಂದು ಹೇಳಿದ್ದಾರೆ.
“ರಾಜ್ಯದಲ್ಲಿನ ರಾಜಕೀಯ ಪ್ರಕ್ಷುಬ್ಧತೆ ಹೆಚ್ಚಾಗಿದೆ. ಸಂಘರ್ಷವನ್ನು ಸ್ವತಃ ತಾವೇ ಸೃಷ್ಟಿಸಿದ್ದಾಗಿ ಇತ್ತೀಚೆಗೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಬಿರೇನ್ ಸಿಂಗ್ ಒಪ್ಪಿಕೊಂಡಿರುವ ಆಡಿಯೋ ವೈರಲ್ ಆಗಿದೆ. ಆದರೂ, ಯಾವುದೇ ತನಿಖೆಗೆ ಆದೇಶಿಸಲಾಗಿಲ್ಲ. ಕೇಂದ್ರದ ಮೇಲಿನ ಭರವಸೆ ದಿನೇ ದಿನೇ ಕಡಿಮೆಯಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
“ರಾಷ್ಟ್ರವನ್ನು ಕಟ್ಟಲು ಮಣಿಪುರವನ್ನು ಪುನರ್ ನಿರ್ಮಿಸುವ ಅಗತ್ಯವಿದೆ. ನೀವು ನನ್ನ ರಾಜ್ಯವನ್ನು ದೃಢವಾಗಿ ನಿರ್ಮಿಸಲು ಬಯಸದಿದ್ದರೆ, ಅದನ್ನು ಆಳುವ ಹಕ್ಕು ನಿಮಗಿಲ್ಲ. ಮಣಿಪುರವು ಒಂದು ಸಣ್ಣ ರಾಜ್ಯವಾಗಿದ್ದರೂ, ಅಲ್ಲಿನ ಜನರು ಸಣ್ಣವರಲ್ಲ. ನಾವು ರಾಷ್ಟ್ರಕ್ಕೆ ಎಲ್ಲ ರೀತಿಯಲ್ಲೂ ಸಮಾನರು” ಎಂದು ಪ್ರತಿಪಾದಿಸಿದ್ದಾರೆ.