ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು ₹9 ಕೋಟಿ ದಂಡ ವಿಧಿಸಿದೆ.
ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಕ್ಟೋಬರ್ 24ರಂದು ಶಾಸಕ ಸತೀಶ್ ಸೈಲ್ ದೋಷಿ ಎಂದು ತೀರ್ಪು ನೀಡಿ, ಶಿಕ್ಷೆಯ ಆದೇಶವನ್ನು ಕಾಯ್ದಿರಿಸಿತ್ತು. ಶನಿವಾರ ಅಂತಿಮ ವಿಚಾರಣೆ ನಡೆಸಿ, ಸತೀಶ್ ಸೈಲ್ಗೆ 7 ವರ್ಷ ಜೈಲು ಶಿಕ್ಷೆ ಮತ್ತು ಜೊತೆಗೆ ₹9.60 ಕೋಟಿ ರೂ. ದಂಡ ವಿಧಿಸಿದೆ.
ನ್ಯಾಯಾಲಯವು ಮೊದಲ ಪ್ರಕರಣದಲ್ಲಿ ಸತೀಶ್ ಸೈಲ್ಗೆ 60 ಲಕ್ಷ ಹಾಗೂ 2ನೇ ಪ್ರಕರಣದಲ್ಲಿ 9 ಕೋಟಿ ದಂಡ ವಿಧಿಸಲಾಗಿದೆ. ಒಟ್ಟು 9.60 ಕೋಟಿ ದಂಡ ವಿಧಿಸಿ, ಶಿಕ್ಷೆಯ ಪ್ರಮಾಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಇದನ್ನು ಓದಿದ್ದೀರಾ? ಮಂಡ್ಯ | ರಸ್ತೆ ಬದಿಯಲ್ಲಿದ್ದ ಮರಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಿದ ಅರಣ್ಯ ಇಲಾಖೆ: ಪರಿಸರವಾದಿಗಳ ಆಕ್ರೋಶ
ಏನಿದು ಪ್ರಕರಣ?
ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಭಾರಿ ಪ್ರಮಾಣದ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗುತ್ತಿತ್ತು. 2010ರ ಮಾ.20ರಂದು ಅರಣ್ಯ ಇಲಾಖೆ ₹350 ಕೋಟಿ ರೂ. ಮೌಲ್ಯದ ಬರೋಬ್ಬರಿ 8.5 ಲಕ್ಷ ಮೆಟ್ರಿಕ್ ಟನ್ ಅದಿರು ಮುಟ್ಟುಗೋಲು ಹಾಕಿಕೊಂಡಿತ್ತು.
