ರಾಜ್ಯ ಬಿಜೆಪಿಗರು ಬಾಬಾ ಸಾಹೇಬರು ಬಹಿಷ್ಕೃತ ಹಿತಕಾರಣಿ ಸಭೆಗೆ ಭೇಟಿ ನೀಡಿದ 100 ನೇ ವರ್ಷದ ನೆನಪಿಗೆ ನಿಪ್ಪಾಣಿಯ ಕಡೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಬಾಬಾ ಸಾಹೇಬರ ಆಶಯಗಳಿಗೆ ವಿರುದ್ಧವಾಗಿರುವ ಇವರುಗಳು ಹಮ್ಮಿಕೊಂಡಿರುವ ಪಾದಯಾತ್ರೆ ಬಿಜೆಪಿಗರ ಅನೈತಿಕ ಯಾತ್ರೆ ಆಗಿದೆ ಎಂದು ಸಚಿವ ಡಾ. ಹೆಚ್ ಸಿ ಮಹದೇವಪ್ಪ ಟೀಕಿಸಿದ್ದಾರೆ.
“ಜಾತಿ ಶ್ರೇಷ್ಠತೆಯ ಕಾರಣಕ್ಕಾಗಿ ತಮ್ಮ ಸಹಜೀವಿಗಳನ್ನು ಅಮಾನವೀಯವಾಗಿ ಶೋಷಣೆ ಮಾಡುತ್ತಿದ್ದ ಮನುವಾದಿಗಳ ಅಹಂಕಾರಕ್ಕೆ ಎದುರಾಗಿ, ಶಿಕ್ಷಣ ಸಂಘಟನೆ ಮತ್ತು ಹೋರಾಟದ ಆಶಯಗಳನ್ನು ಇಟ್ಟುಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1924 ರಲ್ಲಿ ಬಹಿಷ್ಕೃತ ಹಿತಕಾರಣಿ ಸಭೆಯನ್ನು ನಡೆಸುತ್ತಾರೆ. ಅದಾದ ಮರು ವರ್ಷವೇ ಬಾಬಾ ಸಾಹೇಬರ ಆಶಯಗಳಿಗೆ ಎದುರಾಗಿ, ನಮ್ಮೊಳಗಿದ್ದ ಮನುವಾದಿಗಳು RSS ಎಂಬ ಸಂಸ್ಥೆಯನ್ನು ಹುಟ್ಟುಹಾಕುತ್ತದೆ” ಎಂದು ಹರಿಹಾಯ್ದಿದ್ದಾರೆ.
“ಅಸಂವಿಧಾನಿಕವಾದಂತಹ ಮನುಸ್ಮೃತಿಯನ್ನು ಈ ದೇಶದ ಬಹು ಜನರ ಮೇಲೆ ಹೇರಲು ಆರಂಭಿಸಿದ RSS ಈ ನೆಲದ ಮೂಲ ನಿವಾಸಿಗಳ ಅಸ್ತಿತ್ವವನ್ನು ಇಲ್ಲವಾಗಿಸುವತ್ತ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತದೆ. ಇದು ಸಾಲದು ಎಂಬಂತೆ ಮಹಾಜ್ಞಾನಿಯಾದ ಬಾಬಾ ಸಾಹೇಬರಿಗೆ ನೀರು ಕೊಡದೇ, ಇರಲು ಮನೆ ಕೊಡದೇ, ಸದಾ ಅವರ ಮೇಲೆ ಅಸೂಯೆ ದ್ವೇಷ ಕಾರುತ್ತಾ ಅವರನ್ನು ಅವಮಾನಿಸುತ್ತಲೇ ಬಂದಿದ್ದಾರೆ. ಮಹಾಡ್ ನದಿ ನೀರನ್ನು ಮುಟ್ಟಿದ ದಿನವಂತೂ ಈ ಮನುವಾದಿಗಳು ಬಾಬಾ ಸಾಹೇಬರ ಮೇಲೆ ಅಕ್ಷರಶಃ ಹಲ್ಲೆ ಮಾಡಲು ಯೋಚಿಸಿದ್ದರು. ಆ ದಿನ ತಮ್ಮ ಮನೆ ಬಾಗಿಲನ್ನು ಬಡಿದ ಯಾವ ದಲಿತರಿಗೂ ಕೂಡಾ ರಕ್ಷಣೆ ನೀಡದೇ, ದೊಣ್ಣೆಯಿಂದ ಅವರ ಮೇಲೆ ಹಲ್ಲೆ ಮಾಡುತ್ತಾರೆ. ಇನ್ನು ಬಾಬಾ ಸಾಹೇಬರು ತಮ್ಮ ಪತ್ರದಲ್ಲಿ ಬರೆದುಕೊಂಡಂತೆ ಇದೇ ಸಾವರ್ಕರ್ ಆದಿಯಾಗಿ RSS ನ ಮನುವಾದಿಗಳು ಅವರನ್ನು ಚುನಾವಣೆಯಲ್ಲಿ ಸೋಲುವ ಹಾಗೆ ಮಾಡಿದ್ದಾರೆ” ಎಂದಿದ್ದಾರೆ.
“ಈ ದೇಶದ ಆತ್ಮವಾದ ಸಂವಿಧಾನವನ್ನು ಬದಲಿಸುತ್ತೇವೆ, ಇನ್ನೆಷ್ಟು ದಿನ ಮೀಸಲಾತಿ ಎಂಬ ಕೆಟ್ಟದಾದ ವಾತಾವರಣನ್ನು ಸೃಷ್ಟಿ ಮಾಡುತ್ತಿರುವ ಬಿಜೆಪಿಗರು ಈ ದಿನ ಅಂಬೇಡ್ಕರ್ ಪರವಾಗಿ ಪಾದಯಾತ್ರೆ ಮಾಡುತ್ತೇನೆ ಎಂದು ಹೇಳುತ್ತಿರುವುದು ಅತ್ಯಂತ ಬಾಲಿಷವಾದ ಮತ್ತು ಅಸಂಬದ್ಧವಾದಂತಹ ಸಂಗತಿಯಾಗಿದೆ. ಬಾಬಾ ಸಾಹೇಬರು ಎಲ್ಲ ಜನರಿಗೂ ಸಿಗಬೇಕೆಂದು ಬಯಸಿದ್ದ ನ್ಯಾಯ ಹಂಚಿಕೆಗೆ ಸದಾ ವಿರುದ್ಧವಾಗಿ ಇದ್ದಾರೆ. ಇವರದೇ ಪಕ್ಷದ ಗೃಹ ಮಂತ್ರಿ ಅಮಿತ್ ಷಾ ಅವರು ಬಾಬಾ ಸಾಹೇಬರ ಬಗ್ಗೆ ಹಗುರವಾಗಿ ಮಾತನಾಡಿದಾಗ ಬಿಜೆಪಿಯ ಯಾವೊಬ್ಬ ನಾಯಕರೂ ಕೂಡಾ ಇದನ್ನು ಖಂಡಿಸಲಿಲ್ಲ ಮತ್ತು ಬಾಬಾ ಸಾಹೇಬರ ಪರವಾಗಿ ನಿಲ್ಲಲಿಲ್ಲ. ಹೀಗಿರುವಾಗ ಯಾವ ಕಾರಣಕ್ಕಾಗಿ ಬಿಜೆಪಿಗರು ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.
“ದೇಶದಲ್ಲಿ ಕೋಮುವಾದವನ್ನು ಹೆಚ್ಚು ಮಾಡುತ್ತಾ, ಜಾತಿ ಶ್ರೇಷ್ಠತೆಯ ವಿಷ ಬೀಜ ಬಿತ್ತುತ್ತಾ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ವರ್ತಿಸುತ್ತಿರುವ ಬಿಜೆಪಿಗರು ಎಂದೆಂದಿಗೂ ಕೂಡಾ ಬಾಬಾ ಸಾಹೇಬರ ಪರವಾಗಿ ಇಲ್ಲ. ನಾನು ಹಿಂದೂವಾಗಿ ಹುಟ್ಟಿರಬಹುದು ಆದರೆ, ಹಿಂದೂವಾಗಿ ಸಾಯಲಾರೆ ಎಂದು ಬಹಳ ನೋವಿನಿಂದ ಬಾಬಾ ಸಾಹೇಬರು ಹೇಳಿ, ದೀಕ್ಷಾಭೂಮಿಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದರು. ಬಾಬಾ ಸಾಹೇಬರನ್ನು ಅಷ್ಟೊಂದು ನೋಯಿಸಿದ ಈ ಮನುವಾದಿ ಬಿಜೆಪಿಗರು, ಬಾಬಾ ಸಾಹೇಬರ ಹೆಸರಲ್ಲಿ ಮಾಡುತ್ತಿರುವ ಪಾದಯಾತ್ರೆಯು ಅವರಿಗೆ ಮಾಡುತ್ತಿರುವ ಅವಮಾನವಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಪರಿಶಿಷ್ಟ ಸಮುದಾಯಗಳನ್ನು ಅತ್ಯಂತ ಕನಿಷ್ಬಾಗಿ ಕಾಣುವ ಬಿಜೆಪಿಗರು ತಮ್ಮ ತಮ್ಮ ಸರ್ಕಾರದ ಅವಧಿಯಲ್ಲಿ ಅವರಿಗೆ ನೀಡಿದ ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರ ಅತ್ಯಲ್ಪ. ಇನ್ನು ದೇಶದ ಬಹುತ್ವದ ತತ್ವಕ್ಕೆ ವಿರುದ್ಧವಾಗಿರುವ RSS ನಂತಹ ಧಾರ್ಮಿಕ ಮೌಢ್ಯದ ಸಂಘಟನೆಯ ದಾಸರಾಗಿ ವರ್ತಿಸುವ ಇವರು, RSS ಅನ್ನು ಕಟುವಾಗಿ ವಿರೋಧಿಸುತ್ತಿದ್ದ ಬಾಬಾ ಸಾಹೇಬರ ಪರವಾಗಿ ಪಾದಯಾತ್ರೆ ಹೊರಟಿರುವುದು ನಿಜಕ್ಕೂ ದುರಂತಮಯವಾದ ಸಂಗತಿಯಾಗಿದೆ. ಬಿಜೆಪಿಗರೇ ಮೊದಲು ಬಾಬಾ ಸಾಹೇಬರ ಆಶಯಗಳನ್ನು ಬದುಕಲ್ಲಿ ಅಳವಡಿಸಿಕೊಂಡು, ಸಾರ್ವಜನಿಕರಲ್ಲಿ ಸಾಮರಸ್ಯ ಮೂಡಿಸುವ ಮತ್ತು ದೇಶವನ್ನು ಕಟ್ಟುವ ಕೆಲಸ ಮಾಡಿ. ಅದೇ ನೀವು ಬಾಬಾ ಸಾಹೇಬರಿಗೆ ತೋರುವ ನಿಜವಾದ ಗೌರವ” ಎಂದು ಮಹದೇವಪ್ಪ ಅವರು ಮಾಧ್ಯಮ ಪ್ರಕಟಣೆಲ್ಲಿ ಹೇಳಿದ್ದಾರೆ.