ಜಾತಿ ಗಣತಿ ವರದಿಯನ್ನು ಜಾರಿಗೊಳಿಸಲು ಮುಂದಾಗಿರುವುದು ವಿಪಕ್ಷದವರಿಗೆ ನುಂಗಲಾರದ ತುತ್ತಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಜಾತಿ ಗಣತಿಯ ವರದಿಯನ್ನು ತರದೇ ಇದ್ದಾಗ ಕೋಲ್ಡ್ ಸ್ಟೋರೆಜ್‌ನಲ್ಲಿಟ್ಟುಬಿಟ್ಟರು ಎಂದು ಟೀಕಿಸುತ್ತಿದ್ದರು. ಯಾಕೆ ಅಷ್ಟೊಂದು ಹಣ ಖರ್ಚು ಮಾಡಿದರು, ಯಾಕೆ ಪೆಟ್ಟಿಗೆಯೊಳಗೆ ಇಡಬೇಕಿತ್ತು ಎಂದೆಲ್ಲ ಪ್ರಶ್ನಿಸಿದರು. ಜನಸಮುದಾಯಕ್ಕೆ ಜಾರಿಗೊಳಿಸುತ್ತೇವೆ ಎಂದಾಗ ನುಂಗಲಾರದ ತುತ್ತಾಗಿದೆ” ಎಂದು ಕಿಡಿಕಾರಿದರು.
“ರಾಜ್ಯದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯದ ಜನರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಜಾತಿ ಗಣತಿ ವರದಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯವಾಗುತ್ತದೆ ಎಂದು ಎಲ್ಲರು ಹೇಳುತ್ತಿದ್ದಾರೆ. ಸಮುದಾಯಗಳಿಗೆ ಯೋಜನೆಗಳನ್ನು ನೀಡಬಾರದೇ”ಎಂದು ಪ್ರಶ್ನಿಸಿದರು.
“ಅಕ್ಟೋಬರ್ 18ರಂದು ಸಚಿವ ಸಂಪುಟದ ಮುಂದೆ ಚರ್ಚೆಗೆ ತರುತ್ತೇವೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಉಪಸಮಿತಿ ರಚಿಸುವುದೋ ಅಥವಾ ಅಸೆಂಬ್ಲಿ ಮುಂದೆ ತೆಗೆದುಕೊಂಡು ಹೋಗುವುದೋ ಎಂಬುದನ್ನು ತೀರ್ಮಾನ ಮಾಡುತ್ತಾರೆ. ಇದರಲ್ಲಿ ಯಾರ ಬೆಂಬಲದ ಪ್ರಶ್ನೆ ಬರುವುದಿಲ್ಲ. ವಸ್ತುಸ್ಥಿತಿಯನ್ನು ಜನಗಳ ಮುಂದೆ ಇಡುತ್ತೇವೆ. ಅದನ್ನು ಬೇಡ ಅಂದರೆ ಹೇಗೆ? 60 ಕೋಟಿ ರೂ. ಖರ್ಚು ಮಾಡಿ, ಯಾವ ಸಮುದಾಯ ಎಷ್ಟು ಜನಸಂಖ್ಯೆ ಇದೆ ಎಂಬುದು ಗೊತ್ತಾಗಬೇಕು” ಎಂದರು
“ಕೇಂದ್ರ ಸರ್ಕಾರ ಜನಗಣತಿ ಮಾಡಬೇಕು ಎಂದು ನಿರ್ಧರಿಸಿದ್ದು, ಈಗಾಗಲೇ ತಡವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರು ಪ್ರಧಾನಮಂತ್ರಿ ಭೇಟಿಗೆ ಹೋದಾಗ ಜನಗಣತಿ ಮಾಡುವುದಾಗಿ ಹೇಳಿದ್ದರು. 2026 ಅಥವಾ 2027ರಲ್ಲಿ ಪ್ರಾರಂಭಿಸಿ 2028 ಚುನಾವಣೆಗೆ ಸಿಗುತ್ತದೆ ಎಂದಿದ್ದರು. ಆ ಸಂದರ್ಭದಲ್ಲಿಯೂ ಇದೇ ರೀತಿ ವಿರೋಧಿಸುತ್ತಾರೆಯೇ? ಸರ್ಕಾರ ಅಧಿಕೃತವಾಗಿ ಜಾತಿಗಣತಿ ಮಾಡಿದೆ. ಯಾರೋ ನಾಲ್ಕು ಜನ ಸೇರಿ ಮಾಡಿರುವುದಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ
ಸನ್ನಿವೇಶ ಬಂದಾಗ ಕೂಗು ಹಾಕೋಣ
ಸಚಿವ ಸತೀಶ್ ಜಾರಕಿಹೊಳಿ ಭೇಟಿ ಕುರಿತು ಮಾತನಾಡಿ, “ಚರ್ಚೆಗಳಾದರೆ ಆದರೆ ಒಳ್ಳೆಯದಲ್ಲವೇ. ಚಾಯ್ ಪೇ ಚರ್ಚೆ ಅಂತ ಕಾರ್ಯಕ್ರಮ ಇದೆಯಲ್ಲ. ಅದೇರೀತಿ ಕಾಫಿ ಪೇ ಚರ್ಚೆ. ನಾವಿಬ್ಬರು ಕುಳಿತುಕೊಂಡು ಎರಡು ಲೋಟ ಕಾಫಿ ಕುಡಿದರೆ ಮುಖ್ಯಮಂತ್ರಿ ಮಾಡಿಬಿಡುತ್ತಾರೆ ಎನ್ನುವುದಾದರೆ ಬಹಳ ಚರ್ಚೆಗಳಾಗುತ್ತಿದ್ದವು. ಬಹಳಷ್ಟು ಕಾಫಿ ಖರ್ಚಾಗುತ್ತಿತ್ತು.
ನಾವು ಮಾತನಾಡುವುದರಿಂದ ಏನು ಆಗುವುದಿಲ್ಲ. ನಿರ್ಧಾರ ಎಲ್ಲ ಹೈಕಮಾಂಡ್ ಮಾಡುತ್ತದೆ. ಅಂತಹ ಸನ್ನಿವೇಶ ಈಗ ಬಂದಿಲ್ಲ. ಸನ್ನಿವೇಶ ಬಂದಾಗ ಚರ್ಚೆ ಮಾಡೋಣ, ಅದರ ಬಗ್ಗೆ ಕೂಗು ಹಾಕೋಣ, ಬೇಡಿಕೆ ಇಡೋಣ. ಬೇಕಾದದ್ದು ಮಾಡೋಣ. ಆದರೆ ಈಗ ಸನ್ನಿವೇಶ ಬಂದಿಲ್ಲವಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಡುವ ಅಗತ್ಯವು ಇಲ್ಲ” ಎಂದು ಸ್ಪಷ್ಟಪಡಿಸಿದರು.
“ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ತನಿಮಕೆಯ ಶುರುವಿನಿಂದ ತಪ್ಪಿಸಿಕೊಂಡು ತಿರುಗುತ್ತಿದ್ದರು. ಸುಪ್ರೀಂಕೋರ್ಟ್‌ವರೆಗೂ ಹೋಗಿದ್ದರು. ಯಾವುದರಿಂದಲೂ ರಿಲೀಫ್ ಸಿಗಲಿಲ್ಲ. ಹೀಗಾಗಿ ಪೊಲೀಸರಿಗೆ ಶರಣಾಗಿದ್ದಾರೆ” ಎಂದು ತಿಳಿಸಿದರು.
ಎರಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಬಹುಮತ ಬರಲಿದೆ ಎಂದು ಎಲ್ಲ ಸಮೀಕ್ಷೆಗಳು ಹೇಳಿವೆ. ದೇಶದಲ್ಲಿ ಬಿಜೆಪಿಯನ್ನು ಯಾವ ರೀತಿ ತಿರಸ್ಕಾರ ಮಾಡುತ್ತಿದ್ದಾರೆ ಅನ್ನುವುದಕ್ಕೆ ಒಂದೊಂದು ರಾಜ್ಯದಲ್ಲಿ ಬದಲಾವಣೆಯಾದಾಗ ಗೊತ್ತಾಗುತ್ತಿದೆ. ಅದೇರೀತಿಯಾಗಿ ಮಹಾರಾಷ್ಟ್ರದಲ್ಲಿ ಕೂಡ ನಮ್ಮ ಪಕ್ಷದ ಸರ್ಕಾರವನ್ನು ರಚಿಸುತ್ತೇವೆ ಎಂಬ ವಿಶ್ವಾಸವಿದೆ. ಬದಲಾವಣೆ ಪ್ರಾರಂಭವಾಗಿದೆ ಎಂದರು.