- ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಗಮನ ಸೆಳೆಯುವ ಸೂಚನೆಗೆ ಉತ್ತರ
- ಕೆಳಹಂತದ ಆಸ್ಪತ್ರೆಗಳನ್ನು ದಿನದ 24 ಗಂಟೆ ಹೆರಿಗೆಗಾಗಿ ಕಾರ್ಯಗತಗೊಳಿಸಲಾಗುತ್ತಿದೆ
ಪ್ರಸ್ತುತ ತಾಯಿ ಮರಣ ಪ್ರಮಾಣವು 2018-20ರ ಸಮೀಕ್ಷೆ ವರದಿಯಂತೆ 69 ಇದ್ದು, 2025ರ ಒಳಗೆ ಇನ್ನಷ್ಟ ಕಡಿಮೆಗೊಳಿಸಲು ಇಲಾಖೆಗಳು ಕಾರ್ಯಕ್ರಮಗಳನ್ನು ಇನ್ನು ಹೆಚ್ಚಿನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ತಾಯಂದಿರ ಮರಣ ಪ್ರಮಾಣ ದಾಖಲಾಗಿರುವ ಬಗ್ಗೆ ನಿಯಮ 330 ಅಡಿಯಲ್ಲಿ ಗಮನ ಸೆಳೆಯುವ ಸೂಚನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಿದರು.
ತಾಯಿ ಮರಣವನ್ನು ಹೆಚ್ಚು ಪರಿಣಾಮಕಾರಿಯಾಗಿ ತಗ್ಗಿಸಲು ಸರ್ಕಾರ ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಹೊಂದಿರುವ ತಾಯಂದಿರಿಗೆ ಐರನ್ ಸೋರ್ಸ್ ಚುಚ್ಚುಮದ್ದು ನೀಡುತ್ತಿದೆ. ತೀವ್ರತರ ರಕ್ತಹೀನತೆಯಿಂದ ಬಳಲುತ್ತಿರುವ ಗರ್ಭಿಣಿ ಬಾಣಂತಿಯರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ವಿಸೃತ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ಕೆಳಹಂತದ ಆಸ್ಪತ್ರೆಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳನ್ನು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ದಿನದ 24 ಗಂಟೆ ಹೆರಿಗೆಗಾಗಿ ಕಾರ್ಯಗತಗೊಳಿಸಲಾಗುತ್ತಿದೆ. ಕೆಳಹಂತದ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಕೌಶಲ್ಯ ಆಧಾರಿತ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಅನುದಾನ ಲಭ್ಯತೆ, ಬೇಡಿಕೆ ಅನ್ವಯ ಹೊಸ ವಿದ್ಯಾರ್ಥಿನಿಲಯಗಳ ಸ್ಥಾಪನೆ: ಶಿವರಾಜ ತಂಗಡಗಿ
ಕೆಳಹಂತದ ಆಸ್ಪತ್ರೆಗಳ ಕಾರ್ಯನಿರ್ವಾಹಣಾ ಅಂಶಗಳಾದ ಮಾಸಿಕ ಹೆರಿಗೆಗಳು, ಗುಣಮಟ್ಟ ಗರ್ಭಿಣಿ ಮತ್ತು ಬಾಣಂತಿಯರ ಆರೈಕೆ ಮುಂತಾದವುಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕೆಳಹಂತದ ಆಸ್ಪತ್ರೆಗಳ ಶಿಫಾರಸ್ಸು ಪ್ರತಿ ತಿಂಗಳು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರತಿಯೊಂದು ತಾಯಿ ಮರಣದ ಆಡಿಟ್ ಅನ್ನು ಕಟ್ಟುನಿಟ್ಟಾಗಿ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ತಿಳಿಸಿದರು.