“ಸರ್ವರಿಗೂ ನ್ಯಾಯ ಮತ್ತು ಸಮೃದ್ಧ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರವು ರಾಮರಾಜ್ಯದ ಪರಿಕಲ್ಪನೆಯನ್ನು ಜಾರಿಗೆ ತಂದಿದೆ” ಎಂದು ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪುರಭವನದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಜನರು ಆರ್ಥಿಕವಾಗಿ ಸಬಲೀಕರಣಗೊಂಡು ನೆಮ್ಮದಿಯಿಂದ ಬಾಳಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹಿಂದೆ ಒಂದು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ವರ್ಷ ತಗಲುತ್ತಿತ್ತು. ಆದರೆ, ರಾಜ್ಯ ಸರಕಾರವು ಕ್ಷಿಪ್ರಗತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನೇರವಾಗಿ ಜನರ ಮನೆಗೆ ತಲುಪಿಸಿದೆ” ಎಂದು ತಿಳಿಸಿದರು.
“ಯಾವುದೇ ಮಧ್ಯವರ್ತಿಗಳಿಲ್ಲದೇ, ಜನರೇ ಸ್ವಯಂ ಆಗಿ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯುತ್ತಿರುವುದು ಕಲ್ಯಾಣ ಕಾರ್ಯಕ್ರಮಗಳಲ್ಲಿ ಚಾರಿತ್ರಿಕವಾದುದು. ಪ್ರಸಕ್ತ ವರ್ಷ ಗ್ಯಾರಂಟಿ ಯೋಜನೆಗಳಿಗೆ 38 ಸಾವಿರ ಕೋಟಿ ರೂ. ಅನುದಾನ ವೆಚ್ಚ ಮಾಡಲಾಗುತ್ತಿದೆ. ಮುಂದಿನ ವರ್ಷ ಇದನ್ನು 58 ಸಾವಿರ ಕೋಟಿಗಳಿಗೆ ಹೆಚ್ಚಿಸಲಾಗುವುದು” ಎಂದು ದಿನೇಶ್ ಗುಂಡೂರಾವ್ ಇದೇ ವೇಳೆ ಮಾಹಿತಿ ನೀಡಿದರು.
“ಜನರ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲು ಜನತಾದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಲ್ಲಿ ಸ್ವೀಕರಿಸಲಾದ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಲಿದ್ದಾರೆ. ಈ ಸಂಬಂಧ ಜಿಲ್ಲಾಡತದಿಂದ ವರದಿ ಪಡೆಯಲಾಗುವುದು” ಎಂದು ಸಚಿವರು ಹೇಳಿದರು.
“ಸುಳ್ಯ, ಕಡಬ ತಾಲೂಕಿನ ಸಮಸ್ಯೆಗಳ ಬಗ್ಗೆ ತನಗೆ ಅರಿವಿದೆ. ಅರಣ್ಯ ಭೂಮಿ, ಸರ್ವೇ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು” ಎಂದು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಓ ಡಾ. ಕೆ. ಆನಂದ್ ಉಪಸ್ಥಿತರಿದ್ದರು.
ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಇದೇ ವೇಳೆ, ಸಚಿವ ದಿನೇಶ್ ಗುಂಡೂರಾವ್ ರಾವ್ ಅವರು ಸುಳ್ಯ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಪರಿಶಿಷ್ಟ ವರ್ಗಗಳ ಬಾಲಕರ ಹಾಸ್ಟೆಲ್ ಬಾಳಿಲ, ವಾಲ್ಮೀಕಿ ಆಶ್ರಮ ಶಾಲೆ ಬಾಳಿಲ, ವಾಲ್ಮೀಕಿ ಆಶ್ರಮ ಶಾಲೆ ಸುಬ್ರಹ್ಮಣ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಸುಳ್ಯ ಕಚೇರಿ ಶಂಕುಸ್ಥಾಪನೆ, ಸುಳ್ಯ ತಾಲೂಕಿನ ವಿವಿಧ ಲೋಕೋಪಯೋಗಿ ರಸ್ತೆಗಳ ರೂ. 190 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೆ ಸಚಿವರು ಚಾಲನೆ ನೀಡಿದರು.