ರಷ್ಯಾದಿಂದ ಇಂಧನ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ ಟ್ರಂಪ್ ಸಿಟ್ಟಾಗಿದ್ದಾರೆ. ಅಮೆರಿಕಾಗೆ ರಫ್ತಾಗುವ ಭಾರತದ ಉತ್ಪನ್ನಗಳ ಮೇಲೆ 25% ಆಮದು ತೆರಿಗೆ ಹೇರಿಕೆ ಮಾಡಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ. ರಷ್ಯಾ ಜೊತೆ ಭಾರತ ವ್ಯಾಪಾರ ಸಂಬಂಧ ಹೊಂದಿರುವ ಕಾರಣಕ್ಕಾಗಿಯೇ ದುಬಾರಿ ಸುಂಕ ಹೇರಿರುವುದಾಗಿ ಹೇಳಿದ್ದಾರೆ. ಆದರೆ, ಟ್ರಂಪ್ ತನ್ನ ದೋಸ್ತ್ ಎಂದು ಹೇಳಿಕೊಳ್ಳುವ ಮೋದಿ ಅವರು ಅಮೆರಿಕದ ಸುಂಕ ಹೇರಿಕೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಇಷ್ಟು ವರ್ಷಗಳ ಮೋದಿ-ಟ್ರಂಪ್ ಸ್ನೇಹಕ್ಕೆ ಅಥವೇನು? ದುಬಾರಿ ತೆರಿಗೆಯೇ? ಈ ಫ್ರೆಂಡ್‌ಶಿಫ್‌ಗೆ ಅರ್ಥವಿಲ್ಲ ಎಂದು ವಿಪಕ್ಷಗಳು ಕಿಡಿಕಾರಿವೆ.
ತೆರಿಗೆ ಹೇರಿಕೆ ವಿಚಾರವಾಗಿ ಮೌನವಾಗಿರುವ ಮೋದಿ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಸ್ಫೂರ್ತಿ ಪಡೆಯಬೇಕು. ಅಮೆರಿಕದ ಅಧ್ಯಕ್ಷರ ವಿರುದ್ಧ ನಿಲ್ಲಬೇಕು. ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 25%ರಷ್ಟು ಸುಂಕ ಮತ್ತು ದಂಡ ವಿಧಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ. ‘ನಮಸ್ತ ಟ್ರಂಪ್’ ಮತ್ತು ‘ಹೌಡಿ ಮೋದಿ’ ನಡುವಿನ ಸಂಬಂಧಗಳಿಗೆ ಅರ್ಥವೇ ಇಲ್ಲ” ಎಂದಿದ್ದಾರೆ.
“ಭಾರತದ ಮೇಲೆ ಟ್ರಂಪ್ ಹೆಚ್ಚು ಸುಂಕ ಹೇರುವುದು ಮಾತ್ರವಲ್ಲದೆ, ಭಾರತವು ರಷ್ಯಾದಿಂದ ಮಿಲಿಟರಿ ಉಪಕರಣಗಳು ಮತ್ತು ಇಂಧನವನ್ನು ಖರೀದಿಸುತ್ತಿರುವ ಕಾರಣಕ್ಕೂ ನಮ್ಮನ್ನು ಶಿಕ್ಷಿಸುತ್ತಿದ್ದಾರೆ. ಅವರು ಭಾರತವು ಅಮೆರಿಕ ಮೇಲೆ ಮಾತ್ರವೇ ಅವಲಂಬಿತವಾಗಿರಬೇಕೆಂದು ಬಯಸಿದ್ದಾರೆ. ಭಾರತದ ಸಾರ್ವಭೌಮತ್ವದ ಮೇಲೆ ದಾಳಿ ಮಾಡುತ್ತಿದ್ದಾರೆ. ಇಂತಹ ನಿರ್ಲಜ್ಜ ದಾಳಿ ನಡೆಯಬಹುದೇ? ಮೋದಿ ಸರ್ಕಾರ ನಿರಂತರವಾಗಿ ಶರಣಾಗುತ್ತಿದೆ. ಮೌನವಾಗಿ ಎಲ್ಲವನ್ನೂ ಒಪ್ಪಿಕೊಳ್ಳುತ್ತಿದೆ. ಭಾರತಕ್ಕೆ ಟ್ರಂಪ್ ಆಡಳಿತವು ಹೆಚ್ಚು ಬೆದರಿಕೆ ಒಡ್ಡುತ್ತಿದೆ” ಎಂದು ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಆಪರೇಷನ್ ಸಿಂಧೂರ | ವಿಪಕ್ಷಗಳ ಗಂಭೀರ ಪ್ರಶ್ನೆಗಳಿಗೆ ಮೋದಿ ನಿರುತ್ತರ!
ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒ’ಬ್ರೇನ್, “56 ಎಂದರೆ 25ಕ್ಕಿಂತ ಕಡಿಮೆ! ಈಗ 56 ಇಂಚು ಕ್ರೂರ 25% ಟ್ರಂಪ್ ಸುಂಕದ ಬಗ್ಗೆ ಏನು ಹೇಳುತ್ತದೆ” ಎಂದು ಪ್ರಶ್ನಿಸಿದ್ದಾರೆ.
“ಮೋದಿಯವರ ಆಳ್ವಿಕೆಯಲ್ಲಿ ಇಂತಹ ಸುಂಕ ಹೇರಿಕೆ ಸಂಭವಿಸಿದೆ ಎಂಬುದು ನಮಗೇನೂ ಸಂತೋಷ ಕೊಡುವುದಿಲ್ಲ. ನಮ್ಮ ಸರ್ಕಾರವು ತನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಭಾರೀ ಸುಂಕ ಹೇರಿಕೆ ವಿರುದ್ಧ ನಿಲ್ಲಬೇಕು” ಎಂದು ಆರ್‌ಜೆಡಿ ಸಂಸದ ಮನೋಜ್ ಝಾ ಹೇಳಿದ್ದಾರೆ.