ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಿದ್ದರೆ ನಿಮಗೆ ಬಹುಮಾನ ನೀಡಲಾಗುತ್ತದೆ. ಭಯೋತ್ಪಾದಕರನ್ನು ಬಹಿರಂಗಪಡಿಸಿದರೆ ಕಿರುಕುಳ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಸಂಸದ, ಭಯೋತ್ಪಾದನೆ ವಿರುದ್ಧ ಅಭಿಯಾನ ನಡೆಸುತ್ತಿರುವ ಸರ್ವಪಕ್ಷ ಸಂಸದೀಯ ನಿಯೋಗದ ನೇತೃತ್ವ ವಹಿಸಿರುವ ಶಶಿ ತರೂರ್ ಅವರು ಹೇಳಿದ್ದಾರೆ.
ಅಲ್-ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ಪತ್ತೆಹಚ್ಚಿದ ಮತ್ತು ನಿರ್ಮೂಲನೆ ಮಾಡಲು ಅಮೆರಿಕಕ್ಕೆ ಸಹಾಯ ಮಾಡಿದ ವೈದ್ಯ ಶಕೀಲ್ ಅಫ್ರಿದಿ ಅವರನ್ನು ನಡೆಸಿಕೊಂಡ ರೀತಿಯನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ತೀವ್ರವಾಗಿ ಟೀಕಿಸಿದ್ದಾರೆ. ಡಾ. ಅಫ್ರಿದಿ ಬಿಡುಗಡೆಗಾಗಿ ಒತ್ತಾಯಿಸಿ ಅಮೆರಿಕದ ಕಾಂಗ್ರೆಸ್ ಸದಸ್ಯ ಬ್ರಾಡ್ ಶೆರ್ಮನ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನು ಓದಿದ್ದೀರಾ? 40% ಸರ್ಕಾರದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ: ಶಶಿ ತರೂರ್
“ಒಸಾಮಾ ಬಿನ್ ಲಾಡೆನ್ ಅವರನ್ನು ಕೊಲ್ಲಲು ಅಮೆರಿಕಕ್ಕೆ ಸಹಾಯ ಮಾಡಿದ್ದಕ್ಕಾಗಿ ಜೈಲಿನಲ್ಲಿ ಕೊಳೆಯುತ್ತಿರುವ ಡಾ. ಶಕೀಲ್ ಅಫ್ರಿದಿ ಅವರನ್ನು ಬಿಡುಗಡೆ ಮಾಡುವ ಅಗತ್ಯವನ್ನು ಪಾಕಿಸ್ತಾನಿ ನಿಯೋಗವು ತಮ್ಮ ಸರ್ಕಾರಕ್ಕೆ ತಿಳಿಸಬೇಕೆಂದು ನಾನು ಒತ್ತಾಯಿಸಿದೆ. ಡಾ. ಅಫ್ರಿದಿಯನ್ನು ಬಿಡುಗಡೆ ಮಾಡುವುದು 9/11ರ ಸಂತ್ರಸ್ತರಿಗೆ ಬೇಕಾದ ಪ್ರಮುಖ ಹೆಜ್ಜೆ” ಎಂದು ಎಕ್ಸ್‌ನಲ್ಲಿ ಶೆರ್ಮನ್ ಪೋಸ್ಟ್ ಮಾಡಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದಿಂದ ಅಮೆರಿಕಕ್ಕೆ ಹೊರಟಿರುವ ಸರ್ವಪಕ್ಷ ಸಂಸದೀಯ ನಿಯೋಗದ ನೇತೃತ್ವ ವಹಿಸಿರುವ ತರೂರ್, “ಪಾಕಿಸ್ತಾನ ಭಯೋತ್ಪಾದಕ ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್‌ಗೆ(ಸೇನಾ ಶಿಬಿರದ ಬಳಿಯ ಸುರಕ್ಷಿತ ಮನೆಯಲ್ಲಿ) ಆಶ್ರಯ ನೀಡಿದ್ದು ಮಾತ್ರವಲ್ಲದೆ, ಅಮೆರಿಕನ್ನರಿಗೆ ಉಗ್ರನ ಅಡಗುಸ್ಥಾನದ ಬಗ್ಗೆ ಮಾಹಿತಿ ನೀಡಿದ ವೈದ್ಯರನ್ನು ಬಂಧಿಸಿ ಶಿಕ್ಷಿಸಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಿದ್ದರೆ ನಿಮಗೆ ಬಹುಮಾನ ನೀಡಲಾಗುತ್ತದೆ. ಭಯೋತ್ಪಾದಕರನ್ನು ಬಹಿರಂಗಪಡಿಸಿದರೆ ಕಿರುಕುಳ ನೀಡಲಾಗುತ್ತದೆ” ಎಂದಿದ್ದಾರೆ.
ಡಾ. ಶಕೀಲ್ ಅಫ್ರಿದಿ ಒಬ್ಬ ಪಾಕಿಸ್ತಾನಿ ವೈದ್ಯರಾಗಿದ್ದು, ಅವರು ಅಲ್-ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್‌ನ ಅಡಗಿದ್ದ ಸ್ಥಳವನ್ನು ತಿಳಿಸುವ ಮೂಲಕ ಯುಎಸ್ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ)ಗೆ ಸಹಾಯ ಮಾಡಿದರು. ಅಫ್ರಿದಿ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಹಿರಿಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅಫ್ರಿದಿ ಅವರನ್ನು 2008ರಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಗುಂಪಿನ ಲಷ್ಕರ್-ಎ-ಇಸ್ಲಾಂನ ಕಮಾಂಡರ್ ಆಗಿ ಬದಲಾದ ಮಂಗಲ್ ಬಾಗ್ ಅಪಹರಿಸಿದರು.
