ಐವರು ಮೃತಪಟ್ಟು ಒಂದು ಡಜನ್‌ಗೂ ಅಧಿಕ ಮಂದಿ ಗಾಯಗೊಂಡಿರುವ ಉತ್ತರಾಖಂಡದ ಹಲ್ದ್‌ವಾನಿ ಹಿಂಸಾಚಾರದಲ್ಲಿ ಪೊಲೀಸರು 16 ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಶುಕ್ರವಾರ ರಾತ್ರಿಯೇ ತರಾತುರಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ.
ಉತ್ತರಾಖಂಡದ ಹಲ್ದ್‌ವಾನಿ ಹಿಂಸಾಚಾರದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ಮತ್ತು ಅತಿಕ್ರಮಣ ತೆರವು ಕಾರ್ಯಾಚರಣೆಯ ಸಂದರ್ಭ ವಾಹನಗಳನ್ನು ಧ್ವಂಸಗೊಳಿಸಿರುವ ಆರೋಪದಲ್ಲಿ 16 ಮಂದಿಯ ಮೇಲೆ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, ಉಳಿದ ಆರೋಪಿಗಳನ್ನು ಗುರುತಿಸಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಎಪಿ ಅಂಶುಮನ್ ತಿಳಿಸಿರುವುದಾಗಿ ವರದಿಯಾಗಿದೆ.
ಗುರುವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಐವರು ಸಂತ್ರಸ್ತರ ಶವಗಳ ಅಂತ್ಯಕ್ರಿಯೆಯನ್ನು ಪೊಲೀಸರು ಶುಕ್ರವಾರ ರಾತ್ರೋರಾತ್ರಿ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿರುವ ಎಜಿಡಿ, “ಶುಕ್ರವಾರ ರಾತ್ರಿಯೇ ಶವಗಳ ಶವಸಂಸ್ಕಾರ ಮತ್ತು ಸಮಾಧಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಇದೀಗ ಹಲ್ದ್‌ವಾನಿಯಲ್ಲಿ ನಿಷೇಧಾಜ್ಞೆ ಸಡಿಲಗೊಳಿಸಲಾಗಿದೆ, ಆದರೆ ಬನ್‌ಭೂಲ್‌ಪುರ ಪ್ರದೇಶದಲ್ಲಿ ನಿಷೇಧಾಜ್ಞೆ ಮುಂದುವರಿದಿದೆ.
ಕೃಷಿಯೇತರ ಉದ್ದೇಶಕ್ಕಾಗಿ ರಸ್ತೆ, ಮಾರುಕಟ್ಟೆ, ಮೈದಾನದಂತಹ ಇತರ ಸಾರ್ವಜನಿಕ ಉದ್ದೇಶದ ಸರ್ಕಾರಿ ಆಸ್ತಿಗಳ ನಿರ್ಮಾಣಕ್ಕೆ ಬಳಸಲಾಗುವ ನಾಜೂಲ್ ಭೂಮಿಯನ್ನು ಅತಿಕ್ರಮಿಸಿ ಮಸೀದಿ ಮತ್ತು ಮದರಸಾ ನಿರ್ಮಿಸಲಾಗಿದೆ ಎಂದು ಆರೋಪಿಸಿದ ಉತ್ತರಾಖಂಡದ ಸರ್ಕಾರದ ಆದೇಶವನ್ನು ಜಾರಿಗೆ ತರುವಾಗ ಸ್ಥಳೀಯ ಆಡಳಿತ ಆದೇಶದ ಪ್ರತಿಯನ್ನು ನೀಡದೆಯೇ ಅತಿಕ್ರಮಣ ಕಾರ್ಯಾಚರಣೆ ನಡೆಸಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಆದೇಶದ ಪ್ರತಿ ವಿಚಾರದಲ್ಲಿ ಆಡಳಿತ ಮತ್ತು ಸ್ಥಳೀಯರ ನಡುವಿನ ವಾಗ್ಯುದ್ಧ ಹಿಂಸಾಚಾರಕ್ಕೆ ತಿರುಗಿತ್ತು.
ಆಡಳಿತ ಒತ್ತಡಪೂರ್ವಕ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲು ಮುಂದಾದಾಗ ಜನರು ಕಲ್ಲುಗಳನ್ನು ಎಸೆದು, ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಪೊಲೀಸ್ ಠಾಣೆಗೂ ಮುತ್ತಿಗೆ ಹಾಕಿದ್ದರು. ಮುಖ್ಯಮಂತ್ರಿ ಪುಷ್ಕರ್ ಧಾಮಿ ಗಲಭೆನಿರತರಿಗೆ ಸ್ಥಳದಲ್ಲೇ ಗುಂಡು ಹಾರಿಸಲು ಆದೇಶಿಸಿದ್ದರು.
ಶುಕ್ರವಾರ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಭೇಟಿಯಾದ ಮುಖ್ಯಮಂತ್ರಿ ಪರಿಸ್ಥಿತಿಯ ಸೂಕ್ಷ್ಮವನ್ನು ಪರಿಗಣಿಸದೆ, ಹಿಂಸಾಚಾರದಲ್ಲಿ ಪೊಲೀಸರು ಮತ್ತು ಆಡಳಿತ ಸಿಬ್ಬಂದಿಗಳನ್ನು ಕೊಲ್ಲುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.