ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು(ಗುರುವಾರ) ಲೋಕಸಭೆಯಲ್ಲಿ ಸುಮಾರು ಎರಡು ಗಂಟೆ ಹತ್ತು ನಿಮಿಷ ಸುದೀಘವಾದ ಭಾಷಣಗೈದರು.
ವಿಪಕ್ಷಗಳು ಮಣಿಪುರ ಘಟನೆಯ ಬಗ್ಗೆ ಉಲ್ಲೇಖಿಸಿ ಮಾತನಾಡುವಂತೆ ಪಟ್ಟು ಹಿಡಿದಿದ್ದರೂ, ತಮ್ಮ ಇಡೀ ಭಾಷಣದ ಹೆಚ್ಚಿನ ಸಮಯವನ್ನು ತಮ್ಮ ಸರ್ಕಾರದ ಸಾಧನೆ ಹಾಗೂ ವಿಪಕ್ಷಗಳ ಇಂಡಿಯಾ ಮೈತ್ರಿಕೂಟವನ್ನು ಜರೆಯಲು ಉಪಯೋಗಿಸಿದರು.
ಸುಮಾರು ಒಂದು ಮುಕ್ಕಾಲು ಗಂಟೆ ಕಾದರೂ ಕೂಡ ಮಣಿಪುರ ಬಗ್ಗೆ ಒಂದೇ ಒಂದು ಪದ ಮಾತನಾಡದಿದ್ದ ಹಿನ್ನೆಲೆಯಲ್ಲಿ ವಿಪಕ್ಷಗಳು ಸಭಾತ್ಯಾಗ ನಡೆಸಿದರು.

ಈ ಮಧ್ಯೆ ಪ್ರಧಾನಿಯವರ ಭಾಷಣವನ್ನು ಆಲಿಸಬೇಕಿದ್ದ ಬಿಜೆಪಿ ಸಂಸದರ ಸಹಿತ ಹಲವು ಮಂದಿ ಕೇಂದ್ರ ಸಚಿವರುಗಳೇ ನಿದ್ದೆಗೆ ಜಾರಿರುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಅಲ್ಲದೇ, ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಕೂಡ ಕೆಲ ಸೆಕೆಂಡುಗಳ ಕಾಲ ನಿದ್ದೆಗೆ ಜಾರುತ್ತಿರುವ ದೃಶ್ಯಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಜನರು ನಿದ್ರಿಸಬೇಕಾದರೆ ಇಂತಹ ಭಾಷಣವನ್ನು ನೀಡಿ’ ಎಂಬ ಶೀರ್ಪಿಕೆಯೊಂದಿಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ಮೋದಿಯವರ ಭಾಷಣವನ್ನು ಟ್ರೋಲ್ ಮಾಡಿದೆ.
ವಿಡಿಯೋ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವ ಕಾಂಗ್ರೆಸ್ ಐಟಿ ಸೆಲ್, ಕೇಂದ್ರ ಸಚಿವರಾದ ಜೈಶಂಕರ್, ಜ್ಯೋತಿರಾದಿತ್ಯ ಸಿಂಧ್ಯಾ, ನಿತಿನ್ ಗಡ್ಕರಿ ಸಹಿತ ಕೆಲ ಬಿಜೆಪಿ ಸಂಸದರು ನಿದ್ದೆಗೆ ಜಾರಿರುವುದನ್ನು ಹಂಚಿಕೊಂಡಿದೆ.
ಇದಕ್ಕೆ ಸಾಥ್ ನೀಡಿರುವ ಹಲವು ನೆಟ್ಟಿಗರು, ಅಮಿತ್ ಶಾ, ತೇಜಸ್ವಿ ಸೂರ್ಯ ಸೇರಿದಂತೆ ಹಲವರ ದೃಶ್ಯಗಳನ್ನು ಹಂಚಿಕೊಂಡು ಟ್ರೋಲ್ ಮಾಡಿದ್ದಾರೆ.
ಜೊತೆಗೆ, ‘ಸಂಸದ್ ಟಿವಿ’ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಮರಾಮೆನ್ ಹಾಗೂ ವಿಡಿಯೋ ಪ್ರಸಾರದ ಸಿಬ್ಬಂದಿಯ ನೌಕರಿಯಿಂದ ನಾಳೆ ಹೋಗದಿದ್ದರೆ ಸಾಕು’ ಎಂದು ಕೆಲವರು ಆತಂಕ ವ್ಯಕ್ತಪಡಿಸಿ, ವ್ಯಂಗ್ಯವಾಡಿದ್ದಾರೆ.